ಧರ್ಮದ ದಾರಿಯಲ್ಲಿ ನಡೆಯಿರಿ; 64ನೇ ಜನ್ಮದಿನ ಸಂಭ್ರಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಆಶೀರ್ವಚನ

RAMBHAPURI SREE
Published on

ಬೆಂಗಳೂರು: ಮನಶಾಂತಿ ಎಂಬ ಸಂಪತ್ತು ಪಡೆಯಲು ಧರ್ಮದ ದಾರಿಯಲ್ಲಿ ನಡೆಯಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದ್ದಾರೆ.

ಡಾ. ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳ 64ನೇ ಜನ್ಮದಿನ ಅಂಗವಾಗಿ ವೀರಶೈವ ಲಿಂಗಾಯತ ಯುವ ವೇದಿಕೆ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಮನುಷ್ಯನಿಗೆ ಮನಶಾಂತಿಯೊಂದಿದ್ದರೆ ಸಾಲದು. ಬದುಕಿನಲ್ಲಿ ಸ್ವಾಭಿಮಾನವೂ ಬೇಕು. ಧರ್ಮ, ರಾಷ್ಟ್ರ ಇವುಗಳ ಬಗ್ಗೆ ಸ್ವಾಭಿಮಾನ ಬೆಳೆಸಿಕೊಂಡಾಗ ಬದುಕು ಶ್ರೀಮಂತವಾಗುತ್ತದೆ ಎಂದರು.

ಯಾವುದಕ್ಕೂ ಅಂಜದೆ, ಅಳುಕದೆ ಒಳ್ಳೆಯ ಉದ್ದೇಶಕ್ಕಾಗಿ ಹೋರಾಟ ಮಾಡಿದರೆ ಶ್ರೇಯಸ್ಸು ದೊರೆಯುತ್ತದೆ. ಕರ್ಮ ಕಳೆದು ಧರ್ಮ ಬಿತ್ತಿ ಬದುಕನ್ನು ಬಂಗಾರಗೊಳಿಸಿದಂಥ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ನೊಂದವರ ಬೆಂದವರ ಧ್ವನಿಯಾಗಿ ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಅವರು ಮಾಡಿದ ಧಾರ್ವಿುಕ ಹಾಗೂ ಸಾಮಾಜಿಕ ಕ್ರಾಂತಿ ಎಲ್ಲ ಸತ್ಕ್ರಾಂತಿಗಳಿಗೆ ಮೂಲ ಸೆಲೆಯಾಗಿ ಗಂಗೋತ್ರಿಯಾಗಿ ಹರಿದು ಬಂದದ್ದನ್ನು ಕಾಣಬಹುದಾಗಿದೆ.

ವಿಶ್ವವಿದ್ಯಾಲಯಗಳಲ್ಲಿ ಕಲಿಸಿದ ಪಾಠ ಮರೆಯಬಹುದು. ಆದರೆ, ಜೀವನದಲ್ಲಿ ಕಲಿತ ಪಾಠ ಮರೆಯಲಾಗದು ಎಂದು ಹೇಳಿದರು. ಬೀದಿಬದಿ ವ್ಯಾಪಾರಿಗಳಿಗೆ ತಕ್ಕಡಿ, ಹೂ ವ್ಯಾಪಾರಿಗಳಿಗೆ ಸೈಕಲ್, ಮಹಿಳೆಯರಿಗೆ ಹೊಲಿಗೆ ಯಂತ್ರ, ದೋಬಿಗಳಿಗೆ ಇಸ್ತ್ರಿಪೆಟ್ಟಿಗೆ ವಿತರಿಸುವ ಮೂಲಕ ಯುವ ವೇದಿಕೆ ಸಾಮಾಜಿಕ ಕಳಕಳಿ ಮೆರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಡೆಯೂರು ರೇಣುಕ ಶಿವಾಚಾರ್ಯರು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಕುಪ್ಪೂರು ಡಾ. ಯತೀಶ್ವರ ಶಿವಾಚಾರ್ಯರು, ಮೇಲಣಗವಿ ಮಠದ ಮಲಯ ಶಾಂತಮುನಿ ಶಿವಾಚಾರ್ಯರು, ಬಳ್ಳಾರಿ ಕಲ್ಯಾಣ ಮಠದ ಶ್ರೀಗಳು, ಉಗರಗೋಳದ ಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯಿತ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ ಕಲ್ಲೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net