ಕಣ್ಣು ಮುಚ್ಚಿ ಬರೆದ ಕಾವ್ಯವೇ ರಾಮಾಯಣ!

ವಿಜಯವಾಣಿ
Published on

| ಫ್ರೋ. ಕೆ.ಎಸ್​. ಕಣ್ಣನ್​ 

ಒಂದು ಕಾವ್ಯವನ್ನು ಬರೆಯುವುದೆಂದರೆ ಸುಲಭವಾದ ಮಾತಾದೀತೇ? ಕವಿಯಾಗಲು ಮೊದಲು ಬೇಕಾದುದು ಪ್ರತಿಭೆ. ಏನು ಪ್ರತಿಭೆಯೆಂದರೆ? ಇದು ಬಹಳ ವಿಸ್ತರಿಸಿ ಹೇಳಬೇಕಾದ ವಿಷಯ. ಸಂಕ್ಷೇಪವಾಗಿ ಹೇಳುವುದಾದರೆ, ನವನವವಾಗಿ ಈ ಜಗತ್ತನ್ನು ಕಾಣಬಲ್ಲ ಪ್ರಜ್ಞೆಯನ್ನೇ ಪ್ರತಿಭೆಯೆನ್ನುವುದು. ಕವಿಯ ಕಾರ್ಯವೆಂದರೆ ವರ್ಣನೆ, ಚಿತ್ರಣ. ಏನೇನನ್ನೋ ವರ್ಣಿಸುವುದು, ಹೇಗೆ ಹೇಗೋ ರೂಪಿಸುವುದಲ್ಲ; ವರ್ಣನೆಯ ಹಿಂದೆ ಪ್ರತಿಭೆಯ ಪ್ರಾಣಶಕ್ತಿಯು ಜೀವಕಳೆ ತುಂಬಬೇಕು. ಈ ತೆರನಾದ ಮಾತುಗಳನ್ನು ಸಂಸ್ಕೃತದ ಭಾರತೀಯ ಸಾಹಿತ್ಯ ಮೀಮಾಂಸೆಯಲ್ಲಿ ಕಾಣುತ್ತೇವೆ.

ಕಾವ್ಯರಚನೆಯ ಸಂಕಲ್ಪವುಳ್ಳ ಕವಿಯ ಮನಸ್ಸು ಸಮಾಧಾನ ವಾಗಿರಬೇಕು: ಏನನ್ನು ಹೇಳಬೇಕೆನಿಸಿರುವುದೋ ಅದು ಪರಿಪರಿಯಾಗಿ ಸ್ಪುರಿಸುವುದು ಆಗಲೇ; ಅಂದುಕೊಂಡದ್ದನ್ನು ಸಮರ್ಥವಾಗಿ ತಿಳಿಸಲಾಗುವಂತೆ ಅದಕ್ಕೊಪ್ಪುವ ಪದಗಳು ಹೊಳೆಯುವುದೂ ಆಗಲೇ. ಇಲ್ಲೊಂದು ಎಚ್ಚರವೂ ಬೇಕು. ಪ್ರತಿಭೆಯಷ್ಟೇ ಸಾಲದು; ವ್ಯುತ್ಪತ್ತಿ-ಅಭ್ಯಾಸಗಳೂ ಬೇಕು. ಬಹುಜ್ಞತೆಯೇ ವ್ಯುತ್ಪತ್ತಿ. ಹಾಗೆಂದರೇನು? ಲೋಕದ ನಡೆ ಹೇಗಿದೆ, ಬೇರೆ ಬೇರೆ ಶಾಸ್ತ್ರಗಳಲ್ಲಿಯ ವಿವರಣ-ವಿಶ್ಲೇಷಣಗಳೇನು, ಸತ್ಕವಿಗಳ ನಿರೂಪಣೆಯ ಬಗೆಗಳೇನು - ಇವನ್ನೆಲ್ಲ ಗಮನಿಸಿಕೊಳ್ಳುವುದು ವ್ಯುತ್ಪತ್ತಿ. ಅಲ್ಲದೆ, ವಿದ್ವಜ್ಜನರ ಸಂಪರ್ಕ, ಬಹುಶ್ರುತತೆ, ಕವಿಗಳೊಂದಿಗೆ ಸಹವಾಸ, ಮಹಾಕಾವ್ಯಗಳ ಅರ್ಥವನ್ನು ಆಗಾಗ್ಗೆ ಆಸ್ವಾದಿಸುವುದು, ಇತಿಹಾಸ- ಪುರಾಣಗಳ ಅವಲೋಕನ, ನಾನಾಕಲಾದರ್ಶನ - ಮುಂತಾದ ವಿಭಿನ್ನ ಪ್ರಕಾರಗಳಿಂದ ವ್ಯುತ್ಪತ್ತಿಯನ್ನು ಬೆಳೆಸಿ ಕೊಳ್ಳುವುದನ್ನು ಹೇಳಲಾಗಿದೆ. ಇವೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಆಗಬೇಕಾದವು.

ಆದರೆ ಕಣ್ಣುಮುಚ್ಚಿ ಯಾರಾದರೂ ಕಾವ್ಯವನ್ನು ಬರೆಯಲಾದೀತೆ? ಆದರೆ ವಾಲ್ಮೀಕಿಗಳು ರಾಮಾಯಣವನ್ನು ಹಾಗೆ ಬರೆದಿರುವರೆಂದು ಶ್ರೀರಂಗ ಮಹಾಗುರುಗಳು ನಿರೂಪಿಸಿದ್ದಾರೆ. ಇದನ್ನು ಅರಿಯಲು ರಾಮಾ ಯಣದ ಮೊದಲನೆಯ ಸರ್ಗಗಳನ್ನೊಮ್ಮೆ ಅವಲೋಕಿಸಬೇಕು. ಆರಂಭದಲ್ಲಿ ವಾಲ್ಮೀಕಿಗಳು ನಾರದರನ್ನು ಪ್ರಶ್ನಿಸುತ್ತಾರೆ. ಈ ಸದ್ಗುಣಗಳಿಂದ ಕೂಡಿರುವ ಮನುಷ್ಯನು ಲೋಕದಲ್ಲಿರುವನೆ? - ಎಂದು ಪಟ್ಟಿಮಾಡುತ್ತಾರೆ: ಆತನು ಗುಣಶಾಲಿಯಾಗಿರಬೇಕು; ಜೊತೆಗೆ, ವೀರ್ಯಸಂಪನ್ನ, ಧರ್ಮಜ್ಞ, ವಿದ್ವಾಂಸ, ಕೋಪವನ್ನು ಗೆದ್ದವ ಇತ್ಯಾದಿಗಳಾಗಿರಬೇಕು - ಎಂದು. ಅದಕ್ಕೆ ನಾರದರು, ಇಕ್ಷ್ವಾಕುವಂಶದಲ್ಲಿ ಜನಿಸಿದ ರಾಮನು ಇಂತಹವನು ಎಂದು ಹೇಳಿ ಅವನ ಜೀವನದ ಕಿರುಚಿತ್ರಣವನ್ನು ಕೊಡುತ್ತಾರೆ.

ನಾರದರನ್ನು ಬೀಳ್ಕೊಟ್ಟು, ವಾಲ್ಮೀಕಿಗಳು ಶಿಷ್ಯನೊಡನೆ ತಮಸಾ ನದಿಯಲ್ಲಿಗೆ ಬರುತ್ತಾರೆ. ಅದರ ನೀರದೆಷ್ಟು ತಿಳಿಯಾಗಿದೆ! - ಸಜ್ಜನರ ಮನಸ್ಸಿನಂತೆ! - ಎಂದುಕೊಳ್ಳುತ್ತಾರೆ. ಕೆಲವೇ ಕ್ಷಣಗಳಲ್ಲಿ ಕ್ರೌಂಚವಧೆಯಾಗಿ ಅವರ ಬಾಯಿಂದ ಶಾಪೋಕ್ತಿಯೇ ಬಂದುಬಿಡುತ್ತದೆ. ಸ್ನಾನಾನಂತರ ಹಿಂದಿರುಗಿದಾಗ ಅವರಿದ್ದೆಡೆಗೆ ಬ್ರಹ್ಮನೇ ಆಗಮಿಸಿ, ಅವರ ಬಾಯಲ್ಲಿ ಶಾಪವಾಗಿ ಹೊಮ್ಮಿದ ಶ್ಲೋಕವು ತನ್ನ ಪ್ರೇರಣೆಯಿಂದಲೇ ಎಂದು ಹೇಳಿ, ಸಂಪೂರ್ಣರಾಮಚರಿತವನ್ನು ಚಿತ್ರಿಸುವ ಆದೇಶವನ್ನಿತ್ತು ಹೋಗುತ್ತಾನೆ. ಋಷಿಯೀಗ ಕವಿಯಾಗುತ್ತಾನೆ: ಆತನ ಉಕ್ತಿಯೇ ಆದಿಕಾವ್ಯವಾಗುತ್ತದೆ!

ಧರ್ಮಪುರುಷನಾದವನನ್ನು ಕುರಿತಾದ ಕಾವ್ಯವಾಯಿತಲ್ಲವೆ? ಆಚಮನ ಮಾಡಿ, ದರ್ಭಾಸನವನ್ನು ಹಾಸಿ ಕುಳಿತು, ರಾಮಾಯಣಕಥೆಯ ನಡೆಯನ್ನು ಧರ್ಮದಿಂದಲೇ ಅವೇಕ್ಷಿಸುತ್ತಾರೆ. ರಾಮಾದಿಗಳು ಮಾಡಿದುದನ್ನೆಲ್ಲವನ್ನೂ ‘ಧರ್ಮವೀರ್ಯದಿಂದ ಯಥಾವತ್ತಾಗಿ ಕಂಡುಕೊಂಡರು.’ ‘ಯೋಗದ ನೆಲೆಯಲ್ಲಿ ನಿಂತು’ ಪರೋಕ್ಷದಲ್ಲಿ ನಡೆದುದೆಲ್ಲವನ್ನೂ ಅಂಗೈನೆಲ್ಲಿಯಂತೆ ಸ್ಪುಟವಾಗರಿತರು. ‘ಎಲ್ಲವನ್ನೂ ತತ್ತ್ವತಃ ಕಂಡುಕೊಂಡು’ ಶ್ರೀರಾಮಚರಿತವನ್ನು ರಚಿಸಿದರು - ಎನ್ನುತ್ತದೆ, ರಾಮಾಯಣ.

ರಾಮನು ನಕ್ಕದ್ದು ನುಡಿದದ್ದು ನಡೆದದ್ದು - ಇವನ್ನೆಲ್ಲಾ ಹೋಗಿ ನೇರ ಕಂಡು ಬರೆದದ್ದಲ್ಲ; ಹಾಗೆಂದು, ಊಹಿಸಿ ಬರೆದದ್ದೂ ಅಲ್ಲ; ತಾತ್ತಿ್ವಕವಾಗಿ ಕಂಡು, ಎಂದರೆ ಯೋಗದೃಷ್ಟಿಯಿಂದ ಸಾಕ್ಷಾತ್ಕರಿಸಿಕೊಂಡು, ಯಥಾವತ್ತಾಗಿ ರಚಿಸಿರುವುದು. ಎಂದೇ ‘ತತ್ಸರ್ವಂ ಯೋಗಮಾಸ್ಥಿತಃ’, ‘ತತ್ತ್ವತೋ ದೃಷ್ಟಾ್ವ’, ‘ಧರ್ಮವೀರ್ಯುಣ’ ಎಂಬ ಮಾತುಗಳು ಮೂಲರಾಮಾಯಣದಲ್ಲಿವೆ. ಪಾರಂಪರಿಕ ವ್ಯಾಖ್ಯಾನಗಳೂ ಯೋಗದ ಬಲದಿಂದೆಂದೇ ವಿವರಿಸಿವೆ.

ಯೋಗದಿಂದ ಕಂಡುಕೊಳ್ಳುವುದೆಂದರೆ ಕಣ್ಣಗಲಿಸಿ ಕಂಡುಕೊಳ್ಳುವುದಲ್ಲ; ಅಂತರ್ದೃಷ್ಟಿಯಿಂದ ಅರಿತುಕೊಂಡು - ಎಂದರ್ಥ. ಭಾರತೀಯಪರಂಪರೆಯ ನುಡಿಯಿದು: ವಸ್ತುತಃ ಋಷಿಯಾದವನೇ ಕಾವ್ಯವನ್ನು ಬರೆಯಲಾಗುವುದು; ತತ್ತ್ವಸಾಕ್ಷಾತ್ಕಾರ ಮಾಡಿಕೊಂಡವನೇ ಋಷಿಯಾಗುವುದು.

ಈ ಮಾತುಗಳೆಲ್ಲವೂ ಆದಿಕಾವ್ಯವೆನಿಸಿದ ರಾಮಾಯಣವನ್ನು ಬರೆದ ಆದಿಕವಿ ಮಹರ್ಷಿ ವಾಲ್ಮೀಕಿಯ ವಿಷಯದಲ್ಲಿ ಯಥಾವತ್ತಾಗಿ ಅನ್ವಿತವಾಗಿವೆ. ಈ ಹಿನ್ನೆಲೆಯಲ್ಲೇ ರಾಮಾಯಣವು ‘ಕಣ್ಣುಮುಚ್ಚಿಕೊಂಡು ಬರೆದ ಕಾವ್ಯ’ವೆನ್ನುವ ಮಾತಿನಲ್ಲಿ ಸಾಂಗತ್ಯವಿರುವುದು. ಇಲ್ಲಿಯ ಯಾವುದೇ ಉತ್ಪ್ರೇಕ್ಷೆಯಿಲ್ಲ; ಒಗಟೆಯ ಮಾತಿನಂತೆ ತೋರಿದರೂ (ವಸ್ತುತಃ ಹಾಗೆ ತೋರುವುದರಿಂದಲೇ) ಸತ್ಯಾರ್ಥವನ್ನು ಒತ್ತಿಹೇಳುವ ಮಾತೇ ಆಗಿದೆ, ಶ್ರೀರಂಗಮಹಾಗುರುಗಳ ಈ ನುಡಿ. ಋಷಿಯೊಬ್ಬನ ಅಂತರಂಗವನ್ನು ಮತ್ತೊಬ್ಬ ಋಷಿಯೇ ಹಿಡಿಯಬಲ್ಲನೆಂಬುದೂ ಸತ್ಯವಲ್ಲವೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net