ರಾಮಾಯಣ ಮರು ಪ್ರಸಾರ ಇಂದಿನಿಂದ

Ramayana
Published on

ನವದೆಹಲಿ: ಮೂರು ದಶಕಗಳ ಹಿಂದೆ ಭಾರತ ಸೇರಿ 55 ರಾಷ್ಟ್ರಗಳಲ್ಲಿ 65 ಕೋಟಿಗೂ ಅಧಿಕ ಜನರನ್ನು ಟಿವಿ ಮುಂದೆ ಕೂರಿಸಿದ್ದ ರಾಮಾಯಣ ಧಾರಾವಾಹಿ ಶನಿವಾರದಿಂದ ಪುನಾರಂಭವಾಗಲಿದೆ. ಕರೊನಾ ಲಾಕ್​ಡೌನ್​ನಿಂದಾಗಿ ಮನೆಯಲ್ಲಿ ಕುಳಿತಿರುವ ಕೋಟ್ಯಂತರ ಭಾರತೀಯ ರಿಗೆ ಮನರಂಜನೆ ನೀಡುವ ನಿಟ್ಟಿನಲ್ಲಿ ಮಾ.28ರಿಂದ ಡಿಡಿ ನ್ಯಾಷನಲ್ ಚಾನಲ್​ನಲ್ಲಿ ರಾಮಾಯಣ ಮರುಪ್ರಸಾರ ಆಗಲಿದೆ.

ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ 9ರಿಂದ 10ರವರೆಗೆ 2 ಸಾರಿ ಧಾರಾವಾಹಿ ಬಿತ್ತರಗೊಳ್ಳಲಿದೆ ಎಂದು ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ. 1987-88ರ ಅವಧಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ 9ರಿಂದ 10ರವರೆಗೆ ರಾಮಾಯಣ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿ ಎಷ್ಟು ಖ್ಯಾತಿ ಪಡೆದಿತ್ತೆಂದರೆ ಆ 1 ತಾಸು ಪೂರ್ತಿ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು. ಶೇ.82 ವೀಕ್ಷಕರನ್ನು ಹಿಡಿದಿಟ್ಟಿದ್ದ ಈ ಧಾರಾವಾಹಿಯ ಪ್ರತಿ ಸಂಚಿಕೆಯಿಂದ ದೂರದರ್ಶನಕ್ಕೆ ಆ ಕಾಲದಲ್ಲೇ 40 ಲಕ್ಷ ರೂ. ಆದಾಯವಿತ್ತು. ಅತಿ ಹೆಚ್ಚು ಜನರು ವೀಕ್ಷಿಸುವ ಧಾರ್ವಿುಕ ಧಾರಾವಾಹಿ ಎಂಬ ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆಯೂ ರಾಮಾಯಣದ ಹೆಸರಿನಲ್ಲಿದೆ.

ಕರೊನಾ ಸೋಂಕನ್ನು ಮಟ್ಟಹಾಕಲು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ದಿಗ್ಬಂಧನ (ಲಾಕ್​ಡೌನ್) ಘೋಷಿಸಿರುವುದರಿಂದ ಜನರು ಮನೆಯಲ್ಲೇ ಇರಬೇಕಾಗಿದೆ. ಡಿಡಿಯಲ್ಲಿ ರಾಮಾಯಣ ಧಾರಾವಾಹಿ ಪ್ರಸಾರ ಜನರ ಬೇಸರವನ್ನು ತಕ್ಕಮಟ್ಟಿಗೆ ನೀಗಿಸಲಿದೆ ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net