

ರಾಮನಗರ: ಕಂಚುಗಲ್ ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾವಿನ ಪ್ರಕರಣ ತಿರುವು ಪಡೆಯುತ್ತಲೇ ಇದೆ. ಸಾವಿಗೂ ಮುನ್ನ ಬಸವಲಿಂಗ ಶ್ರೀಗಳು ಬರೆದದ್ದು 3 ಪುಟಗಳ ಡೆತ್ನೋಟ್ ಅಲ್ಲ, 6 ಪುಟ ಎಂದು ಗೊತ್ತಾಗಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮನಗರ ಎಸ್ಪಿ ಸಂತೋಷ್ ಬಾಬು, ಶ್ರೀಗಳು ಪೊಲೀಸರಿಗೆ ಅಡ್ರೆಸ್ ಮಾಡಿ 3 ಪುಟಗಳ ಡೆತ್ನೋಟ್ ಬರೆದಿದ್ದಾರೆ. ಭಕ್ತರು ಮತ್ತು ಇತರ ಶ್ರೀಗಳಿಗೆ ಅಡ್ರೆಸ್ ಮಾಡಿ ಮತ್ತೆ 3 ಪುಟಗಳ ಡೆತ್ನೋಟ್ ಬೆರೆದಿದ್ದಾರೆ. ಮೊದಲು ಒಂದು ಪುಟ ಬರೆದು ಅದನ್ನ ಹರಿದು ಕಿಟಕಿಯಲ್ಲಿ ಬಿಸಾಡಿದ್ದಾರೆ. ಒಂದೇ ವಿಷಯ ಎರಡೂ ಪತ್ರದಲ್ಲೂ ಉಲ್ಲೇಖ ಆಗಿದೆ. ಸದ್ಯ ಎಲ್ಲವನ್ನೂ ಪತ್ರವನ್ನೂ ವಶಕ್ಕೆ ಪಡೆಯಲಾಗಿದೆ. ಮೊದಲು ಮಠದ ಸಿಬ್ಬಂದಿಗೆ ಈ ಲೆಟರ್ ಸಿಕ್ಕಿತ್ತು. ಆ ಬಳಿಕ ಅದನ್ನ ವಶಕ್ಕೆ ಪಡೆದಿದ್ದೇವೆ. ಪ್ರಕರಣ ಸಂಬಂಧ ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಎಂದರು.
ಈಗಾಗಲೇ ಕೇಸ್ ಅನ್ನು ಕುದೂರು ಪೋಲಿಸ್ ಠಾಣೆಯಿಂದ ಮಾಗಡಿಗೆ ವರ್ಗಾವಣೆ ಮಾಡಲಾಗಿದೆ. 20ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಲಾಗಿದೆ. ಕೆಲವರನ್ನು ಠಾಣೆಗೆ ಕರೆಸಲಾಗಿದೆ, ಕೆಲವರನ್ನು ಅವರ ಮನೆ ಬಳಿಯೇ ಹೋಗಿ ವಿಚಾರಿಸಲಾಗಿದೆ. ಇದುವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ. ಶ್ರೀಗಳ ವಿಡಿಯೋ ವೈರಲ್ ಬಗ್ಗೆಯೂ ತನಿಖೆ ಮಾಡಲಾಗುವುದು. ಬೇರೆ ಇನ್ನೊಂದು ಡೆತ್ ನೋಟ್ ಇರುವ ಸಾಧ್ಯತೆ ಇದೆ. ಬೇರಯವರಿಗೆ ಅಡ್ರೆಸ್ ಮಾಡಿರುವ ಸಾಧ್ಯತೆ ಇದೆ. ಇಂದು ಸಂಜೆ ವೇಳೆ ಆ ಡೆತ್ನೋಟ್ ಸಿಗುವ ಸಾಧ್ಯತೆ ಇದೆ. ಶ್ರೀಗಳ ಸಾವಿನಲ್ಲಿ ಯಾರೇ ಇದ್ರೂ ತನಿಖೆ ಮಾಡಲಾಗುತ್ತೆ. ಶ್ರೀಗಳ ಫೋನ್ನಲ್ಲಿದ್ದ ಕಾಲ್ ಡಿಟೇಲ್ಸ್ ಮುಖಾಂತರ ವಿಚಾರಣೆ ನಡೆಸಲಾಗುವುದು ಎಂದರು.