

ರಾಮನಗರ
ಕಾಂಗ್ರೆಸ್ನಿಂದ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿಯಾದರೂ ಆ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಎಂದೇ ಭಾವಿಸಿ ಆಶೀರ್ವದಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ತಾಲೂಕಿನ ಕಸಬಾ ಹೋಬಳಿ ಸುಗ್ಗನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಿ ಮಾತನಾಡಿದರು.
ಸದ್ಯದಲ್ಲೇ ರಾಮನಗರಕ್ಕೆ ಪಕ್ಷದಿಂದ ಯಾರೂ ಅಭ್ಯರ್ಥಿ ಎನ್ನುವುದನ್ನು ತೀಮಾರ್ನ ಮಾಡುತ್ತೇವೆ. ರಾಮನಗರದಲ್ಲಿ ಬದಲಾವಣೆ ತರಬೇಕು. ಈ ಹಿಂದೆ ಎಲ್ಲ ಚುನಾವಣೆಗಳಲ್ಲೂ ಸೋತಿದ್ದೇವೆ. ದೇವೇಗೌಡರಿಗೆ ಪ್ರಧಾನ ಮಂತ್ರಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೀರಿ. ಆದರೆ ಅವರು ಜಿಲ್ಲೆ ಕೆಲಸ ಮಾಡಿದ್ದು ಬಿಟ್ಟರೆ ಬೇರೆ ಏನು ಮಾಡಿಲ್ಲ ಎಂದು ಹೀಗಳೆದರು.
ಬಿಜೆಪಿಯ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಜಿಲ್ಲೆಯನ್ನು ಕ್ಲೀನ್ ಮಾಡುತ್ತೇನೆ ಎಂದು ಬಂದಿದ್ದರು. ಜಿಲ್ಲೆಯಲ್ಲಿ ಲಂಚ ನಿಂತೋಯ್ತಾ, ಅರ್ಕಾವತಿ, ವೃಷಭಾವತಿ ಕ್ಲೀನ್ ಆಯ್ತಾ ಎಂದು ಪ್ರಶ್ನಿಸಿ ಟಾಂಗ್ ಕೊಟ್ಟರು. ಬಿಜೆಪಿಯ ಸೋಮಣ್ಣನ ಕೈ, ಕಾಲು ಹಿಡಿದು ಕನಕಪುರದಲ್ಲಿ ಸೈಟ್ ಕೊಡಿಸಿದ್ದೇನೆ. ಈ ಕೆಲಸವನ್ನು ಜೆಡಿಎಸ್ ಶಾಸಕರು ಈ ಕ್ಷೇತ್ರದಲ್ಲಿ ಮಾಡಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಟೀಕಿಸಿದರು.
ಮುಖಂಡ ಇಕ್ಬಾಲ್ ಹುಸೇನ್ ಮಾತನಾಡಿದರು. ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಮಾಜಿ ಶಾಸಕ ಕೆ.ರಾಜು, ಗ್ರಾಪಂ ಅಧ್ಯಕ್ಷೆ ಪ್ರೇಮ, ನಗರಸಭೆ ಅಧ್ಯೆ ಬಿ.ಕೆ. ಪವಿತ್ರ, ಸದಸ್ಯ ಕೆ. ಶೇಷಾದ್ರಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್. ರಾಜು, ಮುಖಂಡರಾದ ಚೇತನ್ ಕುಮಾರ್, ದೊಡ್ಡವಿರೇಗೌಡ, ದೀಪ ಮುನಿರಾಜ್, ಕೆ. ರಮೇಶ್, ಡಿ.ಎಂ. ವಿಶ್ವನಾಥ್, ಗುರುಪ್ರಸಾದ್, ತೇಜ ಸತೀಶ್, ಜಯಲಕ್ಷ್ಮಮ್ಮ, ಪಾರ್ವತಮ್ಮ ಇತರರಿದ್ದರು.
ಇದು ರಾಮನಗರ ಅಲ್ಲ, ಇದು ಬೆಂಗಳೂರು ವಿಧಾನ ಸೌಧ ಕಟ್ಟಿದ ಜಿಲ್ಲೆಯಾಗಿದೆ. ಇದು ಹೆಸರು ಮಾತ್ರ ರಾಮನಗರ ಅಷ್ಟೇ, ಬೆಂಗಳೂರು ದಕ್ಷಿಣ ಅಂತ ಹೆಸರಿಡಬೇಕಿತ್ತು. ಇನ್ನೆರಡು ವರ್ಷದ ನಂತರ ರಾಮನಗರ ಎತ್ತರಕ್ಕೆ ಬೆಳೆಯುತ್ತದೆ. ಅದಾಗಲಿಲ್ಲ ಎಂದರೆ ನನ್ನ ಹೆಸರು ಡಿ.ಕೆ .ಶಿವಕುಮಾರ್ ಅಂತ ಕರೆಯಬೇಡಿ.
ಡಿ.ಶಿವಕುಮಾರ್ , ಕೆಪಿಸಿಸಿ ಅಧ್ಯಕ್ಷರು