ಅಧಿಕಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆ? : ನ್ಯಾಯಾಲಯ ಮೆಟ್ಟಿಲೇರಿದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ವಿವಾದ

11-02-rama-CMC
Published on

ರಾಮನಗರ :  ಅವಳಿ ನಗರಗಳಾದ ರಾಮನಗರ-ಚನ್ನಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದರೂ ಅಧಿಕಾರ ನಡೆಸುವ ಅವಕಾಶ ದೊರೆಯುವ ಲಕ್ಷಣಗಳು ಇನ್ನೂ ಕಂಡು ಬಂದಿಲ್ಲ. ಮೀಸಲಾತಿ ಸಂಬಂಧ ಕೆಲವರು ಕೋರ್ಟ್ ಮೆಟ್ಟಿಲೇರಿರುವ ಕಾರಣ ಮತ್ತೆ ಅಧಿಕಾರ ಹಿಡಿಯಬೇಕು ಎನ್ನುವವರ ಆಸೆಗೆ ತಣ್ಣೀರೆರಚಿದಂತಾಗಿದೆ.

ಸುಮಾರು ಎರಡು ವರ್ಷಗಳ ಕಾಲ ಮೀಸಲಾತಿ ಸಮಸ್ಯೆಯಿಂದ ನಗರಸಭೆಗಳ ವಾರ್ಡ್‌ಗಳಿಗೆ ಚುನಾವಣೆ ನಡೆದಿರಲಿಲ್ಲ. ಏ.27ರಂದು ಚುನಾವಣೆ ನಡೆದು ಏ.30ರಂದು ಲಿತಾಂಶ ಪ್ರಕಟಗೊಂಡಿದೆ. ಲಿತಾಂಶ ಬಂದು 12 ದಿನ ಕಳೆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿಯಲ್ಲಿ ಲೋಪವಾಗಿದೆ ಎನ್ನುವ ಕಾರಣ ಮುಂದಿಟ್ಟುಕೊಂಡು ಕೆಲವರು ಮತ್ತೆ ಕೋರ್ಟ್ ಮೆಟ್ಟಿಲೇರಿರುವ ಕಾರಣ ಚುನಾಯಿತರಾದವರು ಅಧಿಕಾರ ನಡೆಸಲು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಗೋಳು ಕೇಳೋರಿಲ್ಲ: ಪ್ರಸ್ತುತ ಸನ್ನಿವೇಶದಲ್ಲಿ ಎರಡೂ ನಗರಗಳಿಗೆ ಪುರಪಿತೃಗಳು ಇಲ್ಲದೇ ಇರುವ ಕಾರಣದಿಂದಾಗಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಮುಕ್ತಿ ಇಲ್ಲದಂತೆ ಆಗಿದೆ. ಎರಡೂ ನಗರಗಳಲ್ಲಿ ಮೂಲಸಮಸ್ಯೆಗಳು ತಾಂಡವವಾಡುತ್ತಿದ್ದು, ಇದೀಗ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡರೂ ಅವರಿಂದ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮತ್ತಷ್ಟು ದಿನ ಕಾಯಲೇಬೇಕು: ಮೀಸಲಾತಿ ಪ್ರಕರಣ ಹೈ ಕೋರ್ಟ್ ಮೆಟ್ಟಿಲೇರಿರುವ ಕಾರಣದಿಂದಾಗಿ ಎರಡೂ ನಗರಸಭೆಗಳಿಗೆ ಚುನಾಯಿತ ಆಡಳಿತ ಯಂತ್ರ ಅಸ್ತಿತ್ವಕ್ಕೆ ಬರಲು ಇನ್ನು ಹಲವು ದಿನ ಕಾಯಲೇಬೇಕಾದ ಅನಿವಾರ್ಯತೆ ಇದೆ. ಒಂದೆಡೆ ಕರೊನಾ ಲಾಕ್‌ಡೌನ್ ಇರುವ ಕಾರಣ ವಿಚಾರಣೆ ವಿಳಂಬವಾಗುವ ಸಾಧ್ಯತೆ ಇದ್ದು, ನೂತನ ಜನಪ್ರತಿನಿಧಿಗಳು ಅಧಿಕಾರ ನಡೆಸಲು ಕಾಯಲೇಬೇಕಿದೆ.

ಸುಮ್ಮನೆ ಇರಬೇಡಿ: ಕರೊನಾ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರೂ ಆಯ್ಕೆಗೊಂಡಿರುವ ಜನಪ್ರತಿನಿಧಿಗಳು ತಮಗೆ ಇನ್ನೂ ಅಧಿಕೃತವಾಗಿ ಅಧಿಕಾರ ಬಂದಿಲ್ಲ ಎನ್ನುವ ಕಾರಣ ಮುಂದಿಟ್ಟುಕೊಂಡು ಸುಮ್ಮನೆ ಕೂರಬಾರದು. ವಾರ್ಡ್‌ಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯ ಸಂಸ್ಥೆಗಳಿಂದ ನೆರವು ಮತ್ತು ಅಗತ್ಯ ಕೆಲಸಗಳನ್ನು ಮಾಡಿಸಿಕೊಡುವಲ್ಲಿ ಕಾರ್ಯೋನ್ಮುಖರಾಗಬೇಕಿದೆ.

ಕಾಂಗ್ರೆಸ್-ಜೆಡಿಎಸ್‌ಗೆ ಅಧಿಕಾರ : ಈ ಬಾರಿ ನಡೆದ ಚುನಾವಣೆಯಲ್ಲಿ ರಾಮನಗರ ನಗರಸಭೆ

ಮತ್ತೊಮ್ಮೆ ಕಾಂಗ್ರೆಸ್ ವಶವಾದರೆ ಅತ್ತ ಚನ್ನಪಟ್ಟಣ ನಗರಸಭೆ ಜೆಡಿಎಸ್ ಪಾಲಿಗೆ ಒಲಿದಿದೆ. ಎರಡೂ ನಗರಸಭೆಗಳಲ್ಲಿ ತಲಾ 31 ಸದಸ್ಯರಿದ್ದಾರೆ. ರಾಮನಗರ ನಗರಸಭೆಯಲ್ಲಿ 19 ಕಾಂಗ್ರೆಸ್, 11 ಜೆಡಿಎಸ್ ಮತ್ತು ಓರ್ವ ಪಕ್ಷೇತರ ಸದಸ್ಯ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ನಾಲ್ಕನೇ ವಾರ್ಡ್‌ನ ಲೀಲಾ ಗೋವಿಂದರಾಜು ಅವರು ಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಮೃತಪಟ್ಟಿದ್ದರಿಂದ ಆ ಸ್ಥಾನ ಖಾಲಿ ಉಳಿದುಕೊಂಡಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ 16 ಸ್ಥಾನಗಳಿದ್ದು, ಕಾಂಗ್ರೆಸ್ -

ಬಿಜೆಪಿ ತಲಾ 7 ಸ್ಥಾನಗಳನ್ನು ಪಡೆದುಕೊಂಡು, ಪಕ್ಷೇತರ ಸದಸ್ಯರೊಬ್ಬರು ಗೆಲುವು ಸಾಧಿಸಿದ್ದಾರೆ.

ಯಾರಿಗೆ ಮೀಸಲಾಗಿತ್ತು :  ರಾಮನಗರ, ಚನ್ನಪಟ್ಟಣ ಚುನಾವಣೆ ೋಷಣೆ ಆಗುವ ಸುಮಾರು ಒಂದು ವರ್ಷದ ಮುಂಚೆಯೇ ನಗರಾಭಿವೃದ್ಧಿ ಇಲಾಖೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿತ್ತು. ಇದರಂತೆ ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿತ್ತು.

ಇನ್ನು ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆದರೆ ಇದರ ವಿರುದ್ಧ ಹಲವಾರು ಮಂದಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net