ಬಿಜೆಪಿಗೆ ಬಿಸಿ ತುಪ್ಪವಾದ ಅಭ್ಯರ್ಥಿ ಆಯ್ಕೆ ರಾಮನಗರದಲ್ಲಿ ಅಸಮಾಧಾನ ಸ್ಫೋಟ  ಸಮಾಧಾನಕ್ಕೆ ಕಸರತ್ತು

BJP
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಚುನಾವಣೆ ಹೊಸ್ತಿಲಲ್ಲಿ ರಾಮನಗರದ ಬಿಜೆಪಿಯಲ್ಲಿನ ಮುಸುಕಿನ ಗುದ್ದಾಟ ಬೀದಿಗೆ ಬಿದ್ದಿದೆ. ಪಕ್ಷದ ನಾಯಕರು ಡ್ಯಾಮೇಜ್ ಕಂಟ್ರೋಲ್‌ಗೆ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಇದು ಸ್ಫೋಟಗೊಂಡಿದೆ.

ರಾಮಮಂದಿರ ನಿರ್ಮಾಣ ಸಮಿತಿ ನೇಮಕ ವಿಚಾರದ ಮೂಲಕ ಬಹಿರಂಗಗೊಂಡ ಕೋಪ, ವಿಜಯ ಸಂಕಲ್ಪ ಯಾತ್ರೆಯಲ್ಲಿ ಒಂದರ ಮೇಲೊಂದು ಬ್ಯಾನರ್ ಹಾಕುವ ಹಂತಕ್ಕೆ ತಲುಪಿತ್ತು. ಇದರ ಹೊರತಾಗಿ ಗೌತಮ್‌ಗೌಡ ಹೊರತುಪಡಿಸಿ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎನ್ನುವ ಬೇಡಿಕೆವರೆಗೂ ಬಂದು ತಲುಪಿದೆ.

ಸಚಿವ ಅಶ್ವತ್ಥನಾರಾಯಣ ಅವರು ಕಾರ್ಯಕರ್ತರ ಸಮಸ್ಯೆ ಆಲಿಸುತ್ತಿಲ್ಲ ಎನ್ನುವ ನೋವು ಒಂದೆಡೆಯಾದರೆ ಮತ್ತೊಂದೆಡೆ ಹಳೇ ಕಾರ್ಯಕರ್ತರನ್ನು ಕಡೆಗಣಿಸಿ ಇತ್ತೀಚೆಗೆ ಪಕ್ಷಕ್ಕೆ ಬಂದ ಕೆಎಸ್‌ಐಡಿಎಲ್ ಅಧ್ಯಕ್ಷ ಗೌತಮ್‌ಗೌಡರಿಗೆ ಮಣೆ ಹಾಕುತ್ತಿದೆ ಎನ್ನುವ ದೂರು ಕೇಳಿ ಬಂದಿತ್ತು. ಇದಕ್ಕಾಗಿ ಪ್ರತಿಭಟನೆಯೂ ನಡೆದು, ನಂತರ ತೇಪೆ ಹೆಚ್ಚುವ ಕೆಲಸವೂ ನಡೆಯಿತು.

ಗೌತಮ್‌ಗೌಡ ವಿರುದ್ಧ ಎದ್ದಿರುವ ಅಸಮಾಧಾನದ ಕೂಗು, ಅವರಿಗೆ ಟಿಕೆಟ್ ನೀಡದಂತೆ ಬೇಡಿಕೆ ಇಡುವವರೆಗೂ ಬಂದಿದೆ. ಪಕ್ಷದ ಮೂಲಗಳ ಪ್ರಕಾರ ಗೌತಮ್‌ಗೌಡ ಹೊರತಾಗಿ ಬೇರೆ ಯಾರನ್ನೇ ಅಭ್ಯರ್ಥಿಯನ್ನಾಗಿಸಿದರೂ ಚುನಾವಣೆ ಮಾಡುತ್ತೇವೆ ಎನ್ನುವ ವಾದವನ್ನು ಅಸಮಾಧಾನಿತರು ಕೆಲವು ನಾಯಕರ ಬಳಿ ಮಂಡಿಸಿದ್ದು, ಇದು ಪಕ್ಷದ ಪಾಲಿಗೆ ತಲೆನೋವು ತಂದೊಡ್ಡಿದೆ.

ಸಮಾಧಾನಕ್ಕಿಲ್ಲ ಕಿಮ್ಮತ್ತು

ಬಜೆಟ್‌ನಲ್ಲಿ ರಾಮಮಂದಿರ ನಿರ್ಮಾಣ ಘೋಷಣೆ ಆಗುತ್ತಿದ್ದಂತೆ ಮಂದಿರ ನಿರ್ಮಾಣ ಸಮಿತಿ ನೇಮಕ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ತಮ್ಮನ್ನೂ ಒಳಗೊಂಡಂತೆ ಶಾಸಕಿ ಅನಿತಾ ಕುಮಾರಸ್ವಾಮಿ, ಗೌತಮ್‌ಗೌಡ, ಕೇತೋಹಳ್ಳಿ ಶಂಕರಪ್ಪ, ಜಿ.ವಿ.ಪದ್ಮನಾಭ್, ನರಸಿಂಹಯ್ಯ, ಶೇಷಾದ್ರಿ ಅಯ್ಯರ್, ಡಿ.ಶ್ರೀನಿವಾಸ್ ಎನ್ನುವವರನ್ನು ನೇಮಕ ಮಾಡುವಂತೆ ಶಿಫಾರಸು ಮಾಡಿದ್ದರು. ಆದರೆ, ರಾಮನಗರಕ್ಕೆ ಸಂಬಂಧವೇ ಇಲ್ಲದ ಗೌತಮ್‌ಗೌಡರನ್ನು ಸಮಿತಿಗೆ ಶಿಫಾರಸು ಮಾಡಿರುವುದು ಮೂಲ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ನಂತರ ಫೆ.24ರಂದು ಮತ್ತೆ ಪತ್ರ ಬರೆಯುವ ಮೂಲಕ ಸಮಿತಿ ರದ್ದುಪಡಿಸುವಂತೆಯೂ ಸಚಿವರು ಸೂಚನೆ ನೀಡಿದ್ದರು. ಈ ನಡೆ ಅಸಮಧಾನಿತರ ಕೋಪ ತಣ್ಣಗೆ ಮಾಡುತ್ತದೆ ಎನ್ನುವ ನಂಬಿಕೆ ಹುಸಿಯಾಗಿದೆ. ಇದು ಮಾ.4ರಂದು ರಾಮನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಹಿರಂಗಗೊಂಡಿದೆ.

ಅಭ್ಯರ್ಥಿಗಳ ಸಾಲು

ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಇಕ್ಬಾಲ್ ಹುಸೇನ್ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಿತ. ಅಸಮಾಧಾನ ಸ್ಪೋಟಗೊಳ್ಳುವ ಮೊದಲು ಗೌತಮ್ ಗೌಡರೇ ಅಭ್ಯರ್ಥಿ ಎನ್ನಲಾಗುತಿತ್ತು. ಆದರೆ, ಈಗ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವರದರಾಜುಗೌಡ ಆಕಾಂಕ್ಷಿ ಎಂದು ಘೋಷಿಸಿಕೊಂಡಿದ್ದಾರೆ, ಡಾ.ಪುಣ್ಯವತಿ ಹೆಸರು ಮುಂಚೂಣಿಗೆ ಬಂದಿದ್ದು, ಮತ್ತೊಬ್ಬ ಮುಖಂಡ ಡಿ.ನರೇಂದ್ರ ಹೆಸರು ಚಾಲ್ತಿಗೆ ಬಂದಿರುವುದು ಪಕ್ಷದ ಪಾಲಿಗೆ ಒಗ್ಗಟ್ಟು ಮೂಡಿಸುವುದೇ ಸವಾಲಾಗಿದೆ.

ಹೊಂದಾಣಿಕೆಯಂತೆ ನಿಜವೇ?

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎನ್ನುವ ಚರ್ಚೆ ಬಿಜೆಪಿ ವಲಯದಲ್ಲಿ ಆರಂಭಗೊಂಡಿದೆ. ಪ್ರತಿರೋಧ ನೀಡದ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುವ ಮೂಲಕ ಪಕ್ಷ ಒಂದರ ಅಭ್ಯರ್ಥಿಗೆ ಅನುಕೂಲ ಮಾಡಿಕೊಡಲು ಗೌಪ್ಯ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯಮಟ್ಟದ ನಾಯಕರೊಬ್ಬರು ಅಭಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net