

ರಾಮನಗರ : ಜಿಲ್ಲೆಯಲ್ಲಿ ಕರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡುವ 2ನೇ ಹಂತದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸ್ವತಃ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸೋಮವಾರ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಆರ್‌ಸಿಎಚ್ ಅಧಿಕಾರಿ ಡಾ.ಪದ್ಮಾ ಲಸಿಕೆ ನೀಡಿ ದರು. ಇದೇ ವೇಳೆ ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಮುಂತಾದವರಿಗೆ ಕೋವಿ ಶೀಲ್ಡ್ ಲಸಿಕೆಯನ್ನು ನೀಡಲಾಯಿತು.
ಲಸಿಕೆ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ದೇಹ ದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸರ್ಕಾರ ಫ್ರಂಟ್‌ಲೈನ್ ವಾರಿಯರ್ಸ್‌ಗೆ ಲಸಿಕೆ ನೀಡುತ್ತಿದ್ದು, ನೋಂದಣಿ ಮಾಡಿಕೊಂಡಿರುವ ಪ್ರತಿಯೊಬ್ಬರು ತಪ್ಪದೇ ಲಸಿಕೆ ಪಡೆದುಕೊಳ್ಳಿ ಎಂದರು.
ಜಿಪಂ ಸಿಇಒ ಇಕ್ರಂ ಮಾತನಾಡಿ, ನೋಂದಣಿ ಮಾಡಿಕೊಂಡವರು ಲಸಿಕೆ ನೀಡುವ ಸ್ಥಳಕ್ಕೆ ಬಂದರೆ
ಲಸಿಕೆ ನೀಡಲಾಗುವುದು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಪಡೆದವರ ಮೇಲೆ ಅರ್ಧ ಗಂಟೆ ನಿಗಾ ವಹಿಸುವರು. ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಖಾತ್ರಿ ಪಡಿಸಿಕೊಂಡ ನಂತರ ಕಳಿಸಲಾಗುವುದು. ಕರೊನಾದಿಂದ
ಉಂಟಾದ ತೊಂದರೆಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಈಗಾಗಲೇ ಮೊದಲ ಹಂತದಲ್ಲಿ 1.80 ಲಕ್ಷಕ್ಕೂ ಹೆಚ್ಚಿನ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. ಯಾರಿಗೂ ತೊಂದರೆಯಾಗಿಲ್ಲ. ಹಾಗಾಗಿ ಎಲ್ಲರೂ ಲಸಿಕೆ ಪಡೆದು ಕರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದರು. ಅಪರ ಜಿಲ್ಲಾಧಿಕಾರಿ ಜವರೇಗೌಡ ಮಾತನಾಡಿ,ಕರೊನಾ ನಿಯಂತ್ರಣಕ್ಕೆ ಕೆಲವು ತಿಂಗಳಿಂದ ಹೋರಾಟವನ್ನೇ ನಡೆಸಿದ್ದೇವೆ. ಕಂದಾಯ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಸಿಬ್ಬಂದಿ 2ನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಯಾರೂ ಲಸಿಕೆಯಿಂದ ವಂಚಿತರಾಗಬೇಡಿ ಎಂದು ತಿಳಿಸಿದರು.
ಡಿಎಚ್‌ಒ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ರಾಮನಗರ ಟಿಎಚ್‌ಒ ಡಾ. ಶಶಿಕಲಾ ಇನ್ನಿತರ ಅಧಿಕಾರಿಗಳು ಇದ್ದರು.