ಗೆಳೆಯನನ್ನು ಕೊಂದು ಕಾರಿನಲ್ಲಿ ಮೃತದೇಹದೊಂದಿಗೆ ಪೊಲೀಸ್ ಠಾಣೆಗೇ ಬಂದ ಭೂಪ! ಬೆಂಗಳೂರಲ್ಲಿ ಬೆಚ್ಚಿಬೀಳಿಸೋ ಘಟನೆ

murder case
Published on

ಬೆಂಗಳೂರು: ಗೆಳೆಯನನ್ನೇ ಕೊಂದು ಕಾರಿನಲ್ಲಿ ಮೃತದೇಹ ಇಟ್ಟುಕೊಂಡು ಪೊಲೀಸ್ ಠಾಣೆಗೇ ಬಂದ ಆರೋಪಿ, ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ಇಂದು(ಮಂಗಳವಾರ) ಬೆಳಗ್ಗೆ ಸಂಭವಿಸಿದೆ.

ನಂಜನಗೂಡು ಬಳಿಯ ಹಿಮನಗುಂಡಿ ಗ್ರಾಮದ ಮಹೇಶಪ್ಪ ಕೊಲೆಯಾದವ. ರಾಜಶೇಖರ ಕೊಲೆ ಆರೋಪಿ. ಇವರಿಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಈ ಹಿಂದೆ ಮಹೇಶಪ್ಪ ಬೆಂಗಳೂರಿನ ರಾಮಮೂರ್ತಿ ನಗರದ ಜಯಂತಿ ನಗರದಲ್ಲಿ ವಾಸಿಸುತ್ತಿದ್ದ. ಈ ವೇಳೆ ರಾಜಶೇಖರನ ಜೊತೆ ಮಹೇಶಪ್ಪಗೆ ಒಳ್ಳೆಯ ಸ್ನೇಹ ಇತ್ತು. ಬ್ಯಾಂಕ್​ಗಳಲ್ಲಿ ಲೋನ್ ಕೊಡಿಸುವುದಾಗಿ ಹಲವರಿಂದ ಮಹೇಶಪ್ಪ ಹಣ ಪಡೆದಿದ್ದ. ಈ ಎಲ್ಲ ವ್ಯವಹಾರಗಳಲ್ಲೂ ರಾಜಶೇಖರ ಮತ್ತು ಇವರ ತಾಯಿ ಸುವಿಧಾ ಜೊತೆಗಿದ್ದರು. ಆದರೆ ಯಾರಿಗೂ ಲೋನ್ ಕೊಡಿಸದೆ, ಅತ್ತ ಪಡೆದ ಹಣವನ್ನೂ ವಾಪಸ್ ನೀಡದೆ ಮಹೇಶಪ್ಪ ಪರಾರಿಯಾಗಿದ್ದ. ಕೊನೆಗೆ ಜನರು ರಾಜಶೇಖರನನ್ನ ಹಿಡಿದುಕೊಂಡಿದ್ದರು. ಗೆಳೆಯ ಮಾಡಿದ ತಪ್ಪಿಗೆ, ರಾಜಶೇಖರ ತನ್ನ ಮನೆಯನ್ನೇ ಮಾರಿ ಹಲವರಿಗೆ ಕೊಡಬೇಕಿದ್ದ ಹಣ ನೀಡಿದ್ದ.

ಗೆಳೆಯ ಮಾಡಿದ ಮೋಸಕ್ಕೆ ತೀವ್ರ ನೊಂದಿದ್ದ ರಾಜಶೇಖರ, ಆತನನ್ನು ಹುಡುಕಿಕೊಂಡು ನಂಜನಗೂಡು ಬಳಿಯ ಹಿಮನಗುಂಡಿ ಗ್ರಾಮಕ್ಕೆ ಹೋಗಿದ್ದ. ಅಲ್ಲಿ ಸಿಕ್ಕ ಮಹೇಶಪ್ಪನನ್ನು ಕಾರಿನಲ್ಲಿ ಕೂರಿಸಿಕೊಂಡು ಬೆಂಗಳೂರಿಗೆ ಕರೆತಂದಿದ್ದ. ಅವಲಹಳ್ಳಿ ಬಳಿ ಹಣ ವಾಪಸ್ ನೀಡುವಂತೆ ಕೇಳಿದ್ದ. ಮಾತಿಗೆ ಮಾತು ಬೆಳೆದು ಗಲಾಟೆಯೂ ನಡೆದಿದೆ. ಹಣ ಕೊಡಲು ಒಪ್ಪದ ಮಹೇಶಪ್ಪನನ್ನು ನಿನ್ನೆ(ಸೋಮವಾರ) ರಾತ್ರಿ ರಾಡ್​ನಿಂದ ರಾಜಶೇಖರ ಹಲ್ಲೆ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಹೇಶಪ್ಪನನ್ನು ಕಾರಿನಲ್ಲೇ ಬೆಳಗ್ಗೆವರೆಗೂ ಇರಿಸಿಕೊಂಡಿದ್ದ. ಅವನೂ ಕಾರಿನಲ್ಲೇ ಮಲಗಿದ್ದ. ಬೆಳಗ್ಗೆ ಎದ್ದು ನೋಡಿದಾಗ ಮಹೇಶಪ್ಪ ಮೃತಪಟ್ಟಿದ್ದ.

ಕೊನೆಗೆ ಮೃತದೇಹದ ಜತೆಗೆ ಕಾರಿನಲ್ಲೇ ರಾಮಮೂರ್ತಿನಗರ ಪೊಲೀಸ್​ ಠಾಣೆಗೆ ಬಂದ ರಾಜಶೇಖರ, ಎಲ್ಲ ವಿಷಯವನ್ನೂ ಪೊಲೀಸರಿಗೆ ಹೇಳಿ ಶರಣಾಗಿದ್ದಾನೆ. ಮಹೇಶಪ್ಪ ಸುಮಾರು ಒಂದೂವರೆ ಕೋಟಿ ಹಣ ಕೊಡಬೇಕು. ಹಣ ಕೊಡದೆ ವಂಚಿಸಿದ್ದ. ನನ್ನ ಮನೆಯನ್ನೇ ಮಾರಿದೆ. ಇದೇ ಸಿಟ್ಟಿನಲ್ಲಿ ರಾಡ್​ನಿಂದ ಒಡೆದೆ. ಬೆಳಗಾಗುವಷ್ಟರಲ್ಲಿ ಆತ ಸತ್ತು ಹೋದ ಎಂದು ಆರೋಪಿ ರಾಜಶೇಖರ ಪೊಲೀಸರ ಬಳಿ ಹೇಳಿದ್ದಾನೆ. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net