

ಹಾಸನ: ಕಾಂಗ್ರೆಸ್ನ ಮಾಜಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ಪಕ್ಷ ಸೇರಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ದೇವರ ಮೇಲೆ ನಂಬಿಕೆ ಇದ್ದರೆ ಈ ಮಾತು ಸುಳ್ಳು ಎಂದು ಹೇಳಲಿ ಎಂದು ಇದೀಗ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ನ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಹಾಗೂ ಆರ್ಎಸ್ಎಸ್ ಬ್ರೀಟಿಷರ ಜೊತೆ ಶಾಮೀಲಾಗಿದ್ದರು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿರಲಿಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಆರ್ಎಸ್ಎಸ್, ಬಿಜೆಪಿ ರಾಷ್ಟ್ರಭಕ್ತಿ ಸಂಘಟನೆಗಳು ಎನ್ನುವುದು ಅವರಿಗೆ ಗೊತ್ತಿದೆ ಎಂದು ಹೇಳಿದರು.
ಇಂದು ದೇಶದಲ್ಲಿ ರಾಷ್ಟ್ರದಲ್ಲಿ ಸಂಘಟನೆಗಳು ಬೆಳೆಯಲು ಕಾರಣ ಕಾಂಗ್ರೆಸ್. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 22 ಜನ ಹಿಂದೂ ಯುವಕರ ಕೊಲೆ ನಡೆಯಿತು. ಅವರ ಬಗ್ಗೆ ಕ್ರಮ ತೆಗೆದುಕೊಳ್ಳಿ ಅಂದರೆ ಆರ್ಎಸ್ಎಸ್, ಬಿಜೆಪಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್ನವರಿಗೆ ಪಿಎಫ್ಐ, ಎಸ್ಡಿಪಿಐನವರು ರಾಷ್ಟ್ರಭಕ್ತರು. ಬಾಂಬ್ ತಯಾರಿಕೆ ಮಾಡುವುದು, ಭಯೋತ್ಪಾದನೆ ಚಟುವಟಿಕೆ ಮಾಡುವವರು, ವಿದೇಶದಿಂದ ಹಣ ತರಿಸಿಕೊಳ್ಳುವವರು ಕಾಂಗ್ರೆಸ್ ದೃಷ್ಟಿಕೋನದಲ್ಲಿ ರಾಷ್ಟ್ರಭಕ್ತರು ಎಂದು ಟೀಕಿಸಿದರು.
ಯಾರೂ ದೇಶಭಕ್ತರು, ಯಾರು ರಾಷ್ಟ್ರ ದ್ರೋಹಿಗಳು ಎಂದು ಜನ ತೀರ್ಮಾನ ಮಾಡುತ್ತಾರೆ. ಹೀಗಾಗಿ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಗೆ ದೇಶದ ಜನ ಬೆಂಬಲ ಕೊಡುತ್ತಿದ್ದಾರೆ. ನೋಡೋಣ, ಮುಂದಿನ ಚುನಾವಣೆಯಲ್ಲಿ ರಾಷ್ಟ್ರ ಭಕ್ತರು ಯಾರ ಜೊತೆ ಇರುತ್ತಾರೆ, ರಾಷ್ಟ್ರದ್ರೋಹಿಗಳು ಯಾರ ಜೊತೆ ಇರುತ್ತಾರೆ ಎಂದು ಸವಾಲೆಸೆದಿದ್ದಾರೆ.