

ಪವಿತ್ರ ರಂಜಾನ್ ಮಾಸ ಆರಂಭವಾಗುತ್ತಿದ್ದಂತೆ ಮುಸ್ಲಿಮರ ಮನೆ-ಮನಗಳಲ್ಲಿ ಎಲ್ಲಿಲ್ಲದ ಸಂಭ್ರಮ. ಆದರೆ, ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ಸೋಂಕು ಈ ಸಲ ರಂಜಾನ್ ಹಬ್ಬದ ಸಂಭ್ರಮವನ್ನೇ ಕಸಿದಿದೆ. ಮಸೀದಿಗಳಲ್ಲಿ ಪ್ರವೇಶ ನಿಷೇಧಿಸಿದ್ದರಿಂದ ಮುಸ್ಲಿಮರು ಗೊಂದಲಕ್ಕೆ ಒಳಗಾಗಿದ್ದಾರೆ. ಅವರ ಮನದಲ್ಲಿರುವ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ನಾಡಿನ ವಿವಿಧೆಡೆಯ ಧರ್ಮಗುರುಗಳು ಒಂದಿಷ್ಟು ಸಲಹೆ ನೀಡಿದ್ದಾರೆ.
ಮನೆಯಲ್ಲೇ ನಮಾಜ್ ಮಾಡಿ | ಖಾರಿ ಜಾಕೀರ್ ಹುಸೇನ್ ಆರೀಫ್ ಖಾನ್
ಇಸ್ಲಾಂ ಧರ್ಮದಲ್ಲಿ ಪ್ರತಿ ಮುಸಲ್ಮಾನರು ನಿತ್ಯ ಐದು ಹೊತ್ತು ಪ್ರಾರ್ಥನೆ(ನಮಾಜ್) ಸಲ್ಲಿಸುವುದು ಕಡ್ಡಾಯ. ಅದರಲ್ಲೂ, ರಂಜಾನ್ ಮಾಸದಲ್ಲಿ ನಿತ್ಯ ರಾತ್ರಿ ಈಶಾ ನಮಾಜ್ ನಂತರ, ವಿಶೇಷ ಪ್ರಾರ್ಥನೆ(ತರಾವೀಹ್ ನಮಾಜ್) ಸಲ್ಲಿಸಲಾಗುತ್ತದೆ. ಪ್ರತಿವರ್ಷ ಈ ಮಾಸವಿಡೀ ಮಸೀದಿಗಳಲ್ಲಿ ನಮಾಜ್ಗೆ ನೂರಾರು ಜನರು ಸೇರುತ್ತಾರೆ. ಶ್ರದ್ಧಾ-ಭಕ್ತಿಯಿಂದ ಪ್ರಾರ್ಥಿಸಿ, ಅಲ್ಲಾಹ್ನ ಕೃಪೆಗೆ ಪಾತ್ರರಾಗುತ್ತಾರೆ.
ಆದರೆ, ಈ ಬಾರಿ ಕರೊನಾ ಭೀತಿಯಿಂದ ದೇಶದಲ್ಲಿ ಲಾಕ್ಡೌನ್ ಜಾರಿಯಾಗಿದೆ. ಮಸೀದಿಗಳಲ್ಲಿ ಜನರ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗಾಗಿ, ಕುಟುಂಬದ ಎಲ್ಲ ಸದಸ್ಯರು ಮನೆಯಲ್ಲೇ ನಮಾಜ್ ಮಾಡಬೇಕು. ಅಲ್ಲಿಯೂ ಸಾಮಾಜಿಕ ಅಂತರ ಕಾಪಾಡಬೇಕು. ಯಾವುದೇ ಕಾರಣಕ್ಕೆ ನಮಾಜ್ಗಾಗಿ ನೆರೆ-ಹೊರೆಯವರನ್ನು ಮನೆಗೆ ಆಹ್ವಾನಿಸಬಾರದು. ಗುಂಪಾಗಿ ಸೇರಬಾರದು. ನಮಾಜ್ ಮಾಡುವ ಸ್ಥಳ ಶುಚಿತ್ವದಿಂದ ಕೂಡಿರಬೇಕು. ‘ಕರೊನಾ ಮಹಾಮಾರಿಯಿಂದ ಜಗತ್ತನ್ನು ಮುಕ್ತಗೊಳಿಸು. ಕರೊನಾ ಸೋಂಕಿತರನ್ನು ಗುಣಮುಖವಾಗಿಸು’ ಎಂದು ಅಲ್ಲಾಹ್ನಲ್ಲಿ ಪ್ರಾರ್ಥಿಸಬೇಕು.
ಕುರಾನ್ ಆವಿರ್ಭವಿಸಿದ ತಿಂಗಳು ರಂಜಾನ್. 30 ಪಾರೆ(ಭಾಗ)ಗಳನ್ನು ಹೊಂದಿರುವ ಈ ಗ್ರಂಥದಲ್ಲಿ ಇಸ್ಲಾಂ ಧರ್ಮದ ಇತಿಹಾಸ ಅಡಗಿದೆ. ನಿತ್ಯ ಕುರಾನ್ನ ಒಂದು ಭಾಗ ಓದುವ ಮೂಲಕ ಇಸ್ಲಾಂ ಧರ್ಮದಲ್ಲಿ ಅನುಸರಿಸಬೇಕಾದ ಪ್ರತಿ ಆಚರಣೆಯ ಮಾಹಿತಿ ಅರಿಯಬೇಕು. ದಿನದ ಬಹುತೇಕ ಸಮಯವನ್ನು ದೇವರ ಸ್ಮರಣೆಗೆ ಮೀಸಲಿಡಬೇಕು. ಮನರಂಜನಾ ಚಟುವಟಿಕೆಯಿಂದ ದೂರವಿರಬೇಕು. ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಹೊರಡಿಸಿವ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು. ಈ ಕುರಿತು ಇತರ ಮುಸ್ಲಿಮರಿಗೂ ತಿಳಿವಳಿಕೆ ಮೂಡಿಸಬೇಕು. ಯಾವುದೇ ಪ್ರಚೋದನಾತ್ಮಕ ಹೇಳಿಕೆ ಅಥವಾ ವದಂತಿಗೆ ಕಿವಿಗೊಡಬಾರದು.
(ಧರ್ಮಗುರುಗಳು, ಪೊಲೀಸ್ ಹೆಡ್ಕ್ವಾರ್ಟರ್ಸ್ ಮಸೀದಿ, ಬೆಳಗಾವಿ)
ಇಫ್ತಾರ್ ಕೂಟ ಕಡ್ಡಾಯವಲ್ಲ
| ಮುನೀರ್ ಅಹ್ಮದ್
ರಂಜಾನ್ ಮಾಸದಲ್ಲಿ ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ವ್ರತ(ರೋಜಾ) ಕೈಗೊಂಡು ಅಲ್ಲಾಹ್ನ ಪ್ರೀತಿಗೆ ಪಾತ್ರರಾಗುತ್ತಾರೆ. ಕೆಲವೆಡೆ ಸರ್ವಧರ್ವಿುಯರು ರೋಜಾ ಮಾಡಿ ಭಾವೈಕ್ಯತೆ ಮೆರೆಯುತ್ತಾರೆ. ರೋಜಾ ಕೈಗೊಳ್ಳುವ ಒಬ್ಬ ವ್ಯಕ್ತಿಗೆ ರಾತ್ರಿ ಊಟದ ವ್ಯವಸ್ಥೆ ಮಾಡಿದರೆ, 70 ಜನರಿಗೆ ಊಟ ಮಾಡಿಸಿದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಇದೇ ಕಾರಣಕ್ಕೆ ಮುಸ್ಲಿಮರು ತಿಂಗಳಿಡೀ ತಮ್ಮ ಮನೆಗಳಲ್ಲಿ ಊಟದ ವ್ಯವಸ್ಥೆ ಮಾಡಿ ರೋಜಾ ಕೈಗೊಂಡವರಿಗೆ ಆಮಂತ್ರಣ ನೀಡುತ್ತಾರೆ. ಕೆಲವೆಡೆ ಮಸೀದಿಗಳು ಮತ್ತು ಮನೆಗಳಲ್ಲೂ ಇಫ್ತಾರ್ ಕೂಟ ಆಯೋಜಿಸಲಾಗುತ್ತದೆ. ಇದರಿಂದ ಪರಸ್ಪರರ ಮಧ್ಯೆ ಬಾಂಧವ್ಯ ವೃದ್ಧಿಯಾಗುತ್ತದೆ.
ಆದರೆ, ಇಫ್ತಾರ್ ಕೂಟ ಆಯೋಜಿಸುವುದು ಮತ್ತು ರೋಜಾದಾರರಿಗೆ ಊಟದ ವ್ಯವಸ್ಥೆ ಮಾಡುವುದು ನಮ್ಮಲ್ಲಿ ಕಡ್ಡಾಯವಲ್ಲ. ಪ್ರಸ್ತುತ ಕಾಲಘಟ್ಟದಲ್ಲಂತೂ ಕರೊನಾ ಸೋಂಕು ಹರಡದಂತೆ ತಡೆಯಲು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಹಾಗಾಗಿ, ಪ್ರತಿಯೊಬ್ಬರೂ ಮನೆಗಳಲ್ಲೇ ನಸುಕಿನ ಜಾವ ಮಂತ್ರ (ನಿಯತ್) ಹೇಳಿ ರೋಜಾ ಆರಂಭಿಸಬೇಕು. ಸಂಜೆ ಮನೆಯಲ್ಲೇ ರೋಜಾ ಮುಕ್ತಾಯ ಗೊಳಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಆಹಾರ ಪದಾರ್ಥ ಹೆಚ್ಚಾಗಿ ಸೇವಿಸಬೇಕು. ಇಸ್ಲಾಂ ಧರ್ಮದ ಆಶಯಗಳು ಸರ್ವರ ಲೇಸನ್ನೇ ಬಯಸಿವೆ. ಇದನ್ನರಿತು ಬದುಕಿನಲ್ಲಿ ನಾವು ಮುನ್ನಡೆಯಬೇಕು. ಗಲಾಟೆ-ಗದ್ದಲಗಳಿಂದ ದೂರವಿರಬೇಕು. ಕೆಟ್ಟ ವಿಚಾರಗಳಿಂದ ಅಂತರ ಕಾಯ್ದುಕೊಳ್ಳಬೇಕು. ಮತ್ತೊಬ್ಬರ ಭಾವನೆಗಳಿಗೆ ಚ್ಯುತಿ ತರಬಾರದು. ಪ್ರತಿವರ್ಷ ಬಟ್ಟೆಗಳು ಮತ್ತು ಅಲಂಕಾರಿಕ ವಸ್ತುಗಳ ಖರೀದಿಗೆ ಸಾವಿರಾರು ರೂಪಾಯಿ ವ್ಯಯಿಸುತ್ತಿದ್ದೆವು. ಆದರೆ, ಕರೊನಾದಿಂದ ಈಗ ಇಕ್ಕಟ್ಟಿಗೆ ಸಿಲುಕಿದ ಕುಟುಂಬಗಳಿಗೆ ನೆರವಾಗಲು ಆ ಹಣ ವಿನಿಯೋಗಿಸಬೇಕು. ಸಾಮಾಜಿಕ ಸ್ವಾಸ್ಥ್ಯವೇ ನಮ್ಮ ಧ್ಯೇಯವಾಗಬೇಕು. ಸರ್ಕಾರಿ ಆದೇಶಕ್ಕೆ ವಿಧೇಯವಾಗಿ ಮುನ್ನಡೆಯಬೇಕು. ಆಗ, ಅಲ್ಲಾಹ್ ನಮ್ಮನ್ನು ಆಶೀರ್ವದಿಸುತ್ತಾನೆ. ಇಡೀ ಜಗತ್ತನ್ನೇ ಸಂಕಷ್ಟದ ಸುಳಿಯಿಂದ ಪಾರಾಗಿಸಿ, ಎಲ್ಲರನ್ನೂ ಸಂತಸದಿಂದ ಮುನ್ನಡೆಸುತ್ತಾನೆ.
(ಧರ್ಮಗುರುಗಳು ಜಾಮೀಯಾ ಮಸೀದಿ, ಶಿರಹಳ್ಳಿ, ಬು.ಅರಳೀಕಟ್ಟಿ, ಧಾರವಾಡ ಜಿಲ್ಲೆ)
ಸಹಾಯಹಸ್ತ ಚಾಚಿ
| ಹಜರತ್ ಸೈಯ್ಯದ್ ಷಾ ಮುಸ್ತಫಾ ಖಾದ್ರಿ
ಇಸ್ಲಾಂ ಧರ್ಮದಲ್ಲಿ ಐದು ಕಡ್ಡಾಯಗಳಿವೆ. ಅದರಲ್ಲಿ ಜಕಾತ್(ದಾನ) ಕೂಡ ಒಂದು. ಆರ್ಥಿಕವಾಗಿ ಸದೃಢವಾಗಿರುವವರು ತಮ್ಮ ನಿರ್ದಿಷ್ಟ ಆದಾಯದಲ್ಲಿ ಶೇಕಡ 2.5 ಮೊತ್ತವನ್ನು ಬಡವರಿಗೆ ದಾನದ ರೂಪದಲ್ಲಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದನ್ನು ಪಾಲಿಸದವರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ಕುರಾನ್ನಲ್ಲಿ ಎಚ್ಚರಿಸಲಾಗಿದೆ. ಈಗ ಲಾಕ್ಡೌನ್ನಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿವೆ. ಹಾಗಾಗಿ, ಜಾತಿಭೇದ ಮರೆತು ನಾವು ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೆ ಸಹಾಯಹಸ್ತ ಚಾಚಬೇಕು. ಪ್ರತಿವರ್ಷ ಸಂಭ್ರಮಾಚರಣೆಗೆ ವ್ಯಯಿಸುತ್ತಿದ್ದ ಹೆಚ್ಚಿನ ಹಣವನ್ನು ಸಾಮಾಜಿಕ ಕೆಲಸಕ್ಕೆ ಬಳಸಬೇಕು.
ರಂಜಾನ್ ಮಾಸವಿಡೀ ದಾನ ಮಾಡಲು ಅವಕಾಶವಿದೆ. ಈ ವೇಳೆ ಸಂಕಷ್ಟದಲ್ಲಿರುವ ಇತರ ಧರ್ವಿುಯರಿಗೂ ನೆರವಾದರೆ, ಪರಸ್ಪರರ ಮಧ್ಯೆ ಬಾಂಧವ್ಯ ವೃದ್ಧಿಯಾಗುತ್ತದೆ. ಕೋಮುಸೌಹಾರ್ದತೆ ಮೂಡುತ್ತದೆ. ಸಂಭವನೀಯ ಅಪಾಯದಿಂದಲೂ ಅಲ್ಲಾಹ್ ನಮ್ಮನ್ನು ಪಾರಾಗಿಸುತ್ತಾನೆ.
ಈ ಹಿಂದೆ ಹತ್ತಾರು ಕಾಯಿಲೆಗಳು ದೇಶವನ್ನು ಕಾಡಿದಾಗಲೂ, ದೇವರು ನಮ್ಮನ್ನು ಸಂಕಷ್ಟದಿಂದ ಪಾರುಮಾಡಿದ್ದಾನೆ. ಸತ್ಯದ ದಾರಿಯಲ್ಲಿ ಸಾಗಿದರೆ ಈಗಲೂ ಇಡೀ ಜಗತ್ತನ್ನೇ ಕರೊನಾ ಮುಕ್ತವಾಗಿಸುತ್ತಾನೆ. ಈ ಆಶಯದೊಂದಿಗೆ ನಾವು ಬದುಕಿನಲ್ಲಿ ಮುಂದೆ ಸಾಗಬೇಕು. ಬಡವರಿಗೆ ಸಹಾಯ ಮಾಡುವ ಭರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗುಂಪಾಗಿ ಸೇರಬಾರದು. ಕರೊನಾ ಸೋಂಕು ಹರಡುವಿಕೆಗೆ ನಾವು ಕಾರಣವಾಗಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒತ್ತು ನೀಡಬೇಕು. ಸರ್ವರ ಬಾಳು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕು.
ಜೀವನಾವಶ್ಯಕ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗೆ ತೆರಳಿದಾಗ, ಸರ್ಕಾರ ವಿಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿನಾಕಾರಣ ರಸ್ತೆಗಳಲ್ಲಿ ತಿರುಗಾಡಿ ಗೊಂದಲ ಸೃಷ್ಟಿಸಬಾರದು. ಬದಲಿಗೆ, ಕರೊನಾ ಸೋಂಕು ತಡೆಗಟ್ಟಲು ನಿರಂತರವಾಗಿ ಶ್ರಮಿಸುತ್ತಿರುವ ಸಿಬ್ಬಂದಿಗೆ ಸಹಕಾರ ನೀಡಬೇಕು. ಸಾಧ್ಯವಾದರೆ ಅವರಿಗೂ ಅನ್ನ-ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆಯಬೇಕು. ಆಗ, ಅರ್ಥಪೂರ್ಣವಾಗಿ ರಂಜಾನ್ ಆಚರಿಸಿದ ಸಾರ್ಥಕಭಾವ ನಮ್ಮದಾಗುತ್ತದೆ. ದೇವರಿಂದ ಆಶೀರ್ವಾದವೂ ದೊರೆಯುತ್ತದೆ.
(ಧರ್ಮಗುರುಗಳು, ಮಳಖೇಡ್ ದರ್ಗಾ ಕಲಬುರಗಿ ಜಿಲ್ಲೆ)