ಇಂದು ರಂಜಾನ್ ಸಂಭ್ರಮ; ಸಾಮರಸ್ಯ, ಸಹಬಾಳ್ವೆಯ ಪರ್ವ

Ramzan
Published on
ಅತ್ಯಂತ ಶ್ರದ್ಧೆಯಿಂದ ಯಶಸ್ವಿ ಯಾಗಿ ಒಂದು ತಿಂಗಳಿನ ಉಪವಾಸ ವ್ರತ ಪೂರ್ಣಗೊಳಿಸಿದ್ದಕ್ಕಾಗಿ ಸಂಭ್ರಮ ಪಡುವ ಹಬ್ಬವೇ ರಂಜಾನ್ ಅಥವಾ ಈದುಲ್ ಫಿತ್ರ್. ಉಪವಾಸದಿಂದ ಗಳಿಸಿದ ಮಾನಸಿಕ ಶುದ್ಧತೆ, ಸಹನೆ, ಸಹಿಷ್ಣುತೆ, ಸಹಾನುಭೂತಿ, ಶಿಸ್ತು, ಸಂಯಮ ಮತ್ತು ಸಮಯ ಪ್ರಜ್ಞೆಯನ್ನು ವರ್ಷದುದ್ದಕ್ಕೂ ಕಾಯ್ದುಕೊಳ್ಳಬೇಕೆಂಬ ದೃಢ ನಿರ್ಧಾರದೊಂದಿಗೆ ಈದುಲ್ ಫಿತ್ರ್ ಆಚರಿಸಲ್ಪಡುತ್ತದೆ. ವೈಯಕ್ತಿಕ ಆದಾಯದ ಶೇಕಡ 2.5ರಷ್ಟು ಹಣವನ್ನು ಬಡವ-ಬಲ್ಲಿದರಿಗೆ ‘ಝುಕಾತ್’ ರೂಪದಲ್ಲಿ ನೀಡಬೇಕು. ನಮ್ಮ ಸಂಪತ್ತಿನಲ್ಲಿ ಬಡವರ, ದೀನದಲಿತರ ಹಕ್ಕೂ ಇದೆ. ಝುಕಾತ್ ಮನುಷ್ಯನ ಸಂಪತ್ತನ್ನು ಶುದ್ಧಗೊಳಿಸುತ್ತದೆ. ಅದಲ್ಲದೆ ತಿಂಗಳಿಡೀ ಸ್ವತಃ ಹಸಿವನ್ನು ಅನುಭವಿಸಿದ ನಂತರ ಹಬ್ಬಕ್ಕಿಂತ ಮುಂಚೆಯೇ ಕಡ್ಡಾಯವಾಗಿ ನೀಡಬೇಕಾಗಿರುವ ದಾನ ಸದಕತುಲ್ ಫಿತ್ರ್.

‘ತನ್ನ ನೆರೆಹೊರೆಯವರು ಹಸಿವಿನಿಂದ ಬಳಲುತ್ತಿರುವಾಗ ಹೊಟ್ಟೆ ತುಂಬ ಉಂಡು ತೇಗುವವನು ಮುಸಲ್ಮಾನನಲ್ಲ’ ಎಂಬ ಪ್ರವಾದಿ ಮುಹಮ್ಮದ್​ರ ವಚನದಂತೆ ಈದುಲ್ ಫಿತ್ರ್ ಅನುಕಂಪ, ಸಮಾನತೆ ಹಾಗೂ ಸಹೋದರತ್ವದ ಸಂದೇಶವನ್ನು ನೀಡುತ್ತದೆ. ಈದ್ ನಮಾಜ್ ಈ ಹಬ್ಬದ ವಿಶಿಷ್ಟತೆಯಾಗಿದೆ. ಮಸೀದಿ ಅಥವಾ ಈದ್ಗಾಗಳಲ್ಲಿ ಶ್ರೀಮಂತ-ಬಡವರೆನ್ನದೆ, ಮೇಲು, ಕೀಳೆಂಬ ತಾರತಮ್ಯವಿಲ್ಲದೆ ಎಲ್ಲರೂ ಸಾಲಾಗಿ ನಿಂತು ಪ್ರಾರ್ಥಿಸುವಾಗ ದೇವನ ಮುಂದೆ ಎಲ್ಲರೂ ಸಮಾನರೆಂಬ ಸಂದೇಶ ಸಾರುತ್ತದೆ.

ಒಂದು ತಿಂಗಳಿನ ಕಠಿಣ ತರಬೇತಿಯ ನಂತರವೂ ಉಪವಾಸ ನೀಡುವ ಸಂಯಮ, ಸಹನೆ ಮತ್ತು ಶಿಸ್ತು ನಮ್ಮಲ್ಲಿ ಬರದಿದ್ದರೆ ನಾವು ಈದುಲ್ ಫಿತ್ರ್ ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮಾನವರೆಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳು. ವಿವಿಧ ಸಂಸ್ಕೃತಿ, ಭಾಷೆ, ಜನಾಂಗಗಳು ನಾವು ಪರಸ್ಪರ ಅರಿಯಲಿಕ್ಕಾಗಿಯೇ ಹೊರತು ಅವುಗಳ ಆಧಾರದ ಮೇಲೆ ಮೇಲು-ಕೀಳು ಮಾಡಲಿಕ್ಕಲ್ಲ. ದೇವರಲ್ಲಿ ಭಯ-ಭಕ್ತಿಯಿರುವ ಮತ್ತು ಉತ್ತಮ ಚಾರಿತ್ರ್ಯವಿರುವವರೇ ನೈಜ ರೂಪದಲ್ಲಿ ಶ್ರೇಷ್ಠರು.

‘ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ, ಗೋತ್ರಗಳನ್ನೂ ಮಾಡಿದೆವು, ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ’. (ಪವಿತ್ರ ಕುರಾನ್ 49:13)

ಸಾವಿರ ವರ್ಷಗಳ ಮುಂಚೆಯೇ ಅಲ್-ಬಿರುನಿ ಭಾರತಕ್ಕೆ ಬಂದು ಸಂಸ್ಕೃತ, ಗಣಿತ, ತತ್ತ್ವಜ್ಞಾನ ಮತ್ತು ಭೂಗೋಳ ಕಲಿತು ‘ಇಂಡಿಯಾ’ ಎಂಬ ಪುಸ್ತಕ ಬರೆದ. ಈ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿಶ್ವದ ಇತರ ಭಾಗಗಳಿಗೂ ಹರಡಿದ. ಸಂಸ್ಕೃತದಲ್ಲಿದ್ದ ಪತಂಜಲಿ ಯೋಗವನ್ನು ಅರೇಬಿಕ್ ಭಾಷೆಗೆ ಅನುವಾದಿಸಿದ. ಅದೇ ರೀತಿ ಗ್ರೀಕ್ ಮತ್ತು ಅರೇಬಿಕ್ ತತ್ತ್ವಜ್ಞಾನವನ್ನು ಸಂಸ್ಕೃತಕ್ಕೆ ಅನುವಾದಿಸುವ ಮೂಲಕ ಅದನ್ನು ಭಾರತಕ್ಕೆ ಪರಿಚಯಿಸಿದ.

ಆದರೆ, ಬೆರಳ ತುದಿಯಲ್ಲಿ ಯಾವುದೇ ಮಾಹಿತಿ ಪಡೆಯಬಹುದಾದ ಆಧುನಿಕ ಯುಗದಲ್ಲಿ ನಮ್ಮ ನಡುವೆ ಪರಸ್ಪರ ಅಪನಂಬಿಕೆ, ತಪ್ಪು ಕಲ್ಪನೆಗಳು ಮತ್ತು ಅಪಪ್ರಚಾರಗಳು ಹರಡಿಕೊಂಡಿರುವುದು ದುಃಖದ ಸಂಗತಿ. ನಾವು ಹೆಚ್ಚು ಹೆಚ್ಚು ಪರಸ್ಪರ ಬೆರೆಯುವ ಮತ್ತು ಅರಿಯುವ ಮೂಲಕ ಮಾತ್ರ ಇವುಗಳನ್ನು ಹೋಗಲಾಡಿಸಬಹುದು.

ಇಂದಿನ ಸನ್ನಿವೇಶದಲ್ಲಿ ಈದುಲ್ ಫಿತ್ರ್ ಇದಕ್ಕೆ ನಾಂದಿಯಾಗಲಿ, ಈದುಲ್ ಫಿತ್ರ್ ಬೋಧಿಸುವ ಶಾಂತಿ, ಸಹೋದರತೆ ಮತ್ತು ಸೌಹಾರ್ದತೆಯನ್ನು ನಮ್ಮಲ್ಲಿ ರೂಢಿಸಿಕೊಳ್ಳೋಣ. ಈ ಹಬ್ಬವು ದೇಶದಲ್ಲಿ ಶಾಂತಿ, ನೆಮ್ಮದಿ, ಐಕ್ಯತೆ, ಸುಭಿಕ್ಷೆ ಮತ್ತು ಸಮೃದ್ಧಿ ತರಲೆಂದು ಪ್ರಾರ್ಥಿಸೋಣ ಮತ್ತು ಅದಕ್ಕಾಗಿ ಶ್ರಮಿಸೋಣ.

ರಂಜಾನ್ ವ್ರತಾಚರಣೆ

ಇಸ್ಲಾಂ ಧರ್ಮದ ಪ್ರಮುಖ 5 ಸ್ತಂಭಗಳಲ್ಲಿ ಮೊದಲನೆಯದು ದೇವರ ಮೇಲಿನ ನಂಬಿಕೆ (ಕಲಿಮ), ಎರಡನೆಯದು ನಮಾಜ್, ಮೂರನೆಯದು ಝುಕಾತ್, ನಾಲ್ಕನೆಯದು ರಂಜಾನ್ ತಿಂಗಳ ಉಪವಾಸ ಮತ್ತು ಐದನೆಯದು ಹಜ್ ಯಾತ್ರೆ. ಇದರಲ್ಲಿ ಪ್ರಮುಖವಾಗಿ ನಾಲ್ಕನೆಯ ಸ್ತಂಭವಾದ ರಂಜಾನ್ ತಿಂಗಳ ಉಪವಾಸ ಆಚರಣೆಗಾಗಿ ಮುಸಲ್ಮಾನರು ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧಗೊಳ್ಳುತ್ತಾರೆ. ಕಾರಣ, ಒಬ್ಬ ವ್ಯಕ್ತಿ ಹೊಟ್ಟೆ ಹಸಿವಿನಿಂದ ಇದ್ದ ಮಾತ್ರಕ್ಕೆ ಆತನ ಉಪವಾಸ ಪೂರ್ಣಗೊಳ್ಳುವುದಿಲ್ಲ. ಅದರ ಜತೆಗೆ ಆತ ತನ್ನ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಅಂತರಂಗ ಶುದ್ಧಿ ಮಾಡಿಕೊಳ್ಳಬೇಕು. ಉಪವಾಸನಿರತ ವ್ಯಕ್ತಿ ಸಂಪೂರ್ಣವಾಗಿ ದೇವರ ಆಜ್ಞೆಗೆ ಶರಣಾಗುತ್ತಾನೆ. ಇದರಿಂದಾಗಿ ಆತ ಎಲ್ಲ ರೀತಿಯ ದುಶ್ಚಟ ಮತ್ತು ದುಷ್ಕೃತ್ಯಗಳಿಂದಲೂ ದೂರ ಉಳಿಯುತ್ತಾನೆ. ದೇವರ ಆರಾಧನೆಗಾಗಿ ಒಂದು ತಿಂಗಳು ಮೀಸಲಿಟ್ಟು ತಾನು ಮಾಡಿದ ಪಾಪಕ್ಕೆ ಪಶ್ಚಾತ್ತಾಪಪಟ್ಟುಕೊಳ್ಳುತ್ತಾನೆ. ರಂಜಾನ್ ತಿಂಗಳ ವ್ರತಾಚರಣೆಯು- ಬಡವನೇ ಆಗಿರಲಿ ಬಲಾಢ್ಯರೇ ಆಗಿರಲಿ, ಹೊಟ್ಟೆ ಹಸಿವಿನ ಕಷ್ಟ ಅರಿತುಕೊಳ್ಳಬೇಕೆಂಬ ಉದ್ದೇಶ ಹೊಂದಿದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net