

ರಾತ್ರಿ-ಹಗಲೆನ್ನದೆ ಒಂದಲ್ಲ ಒಂದು ಸಭೆ, ಮಂದಿರ ನಿರ್ಮಾಣ ಕಾರ್ಯದಲ್ಲಿ ಸಣ್ಣ ಲೋಪವೂ ಆಗದಂತೆ ನೋಡಿಕೊಳ್ಳುವುದು, ಕಲಾವಿದರು-ಕೆತ್ತನೆಕಾರರ ಜತೆ ನಿರಂತರ ಚರ್ಚೆ,ಪುರುಸೊತ್ತಿಲ್ಲದೆ ಬರುವ ಫೋನ್ ಕರೆಗಳು... ಅಯೋಧ್ಯೆ ರಾಮಮಂದಿರ ನಿರ್ವಣದಲ್ಲಿ ತೊಡಗಿಸಿಕೊಂಡಿರುವ, ಕನ್ನಡಿಗ, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ ಮಹಾಬಲೇಶ್ವರ ಭಟ್ (ಗೋಪಾಲ ನಾಗರಕಟ್ಟೆ) ಅವರ ನಿತ್ಯದ ಚಟುವಟಿಕೆ ಇದು. ಕಳೆದ 3 ವರ್ಷಗಳಿಂದ ಅಯೋಧ್ಯೆಯಲ್ಲೇ ವಾಸ್ತವ್ಯ ಹೂಡಿರುವ ಅವರು ವಿಜಯವಾಣಿ ದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಜತೆ ಮಂದಿರ ನಿರ್ವಣ, ಬಾಲರಾಮನ ಪೂಜಾ ವಿಧಿ-ವಿಧಾನ ಸೇರಿ ಹಲವು ವಿಚಾರಗಳ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ.
* ರಾಮಮಂದಿರ ನಿರ್ಮಾಣ ಕಾರ್ಯ ಯಾವ ಹಂತಕ್ಕೆ ಬಂದಿದೆ?
- ಮಂದಿರದ ಭೂ ಮಹಡಿ ಪೂರ್ಣಗೊಂಡು, ಮೊದಲ ಮಹಡಿ ಕಾರ್ಯವೂ ಮುಗಿಯುತ್ತಾ ಬಂದಿದೆ. ಈಗ ಗರ್ಭಗೃಹದ ಮೇಲ್ಭಾಗದ ಮಹಡಿ ಪೂರ್ಣಗೊಳಿಸುವ (ಮುಚ್ಚುವ) ಕೆಲಸ ನಡೆಯುತ್ತಿದೆ. ಎರಡನೇ ಮಹಡಿ ಶಿಖರ. ಅದರ ನಿರ್ಮಾಣ ಕಾರ್ಯ ಶುರುವಾಗಬೇಕಿದೆ. ಅದರ ಕೆಲಸ ಪ್ರಾಣಪ್ರತಿಷ್ಠೆಗೆ ಮುನ್ನ ಪೂರ್ಣಗೊಳ್ಳುವುದಿಲ್ಲ.
* ಹಾಗಾದರೆ ಪೂರ್ಣ ಪ್ರಮಾಣದಲ್ಲಿ ಮಂದಿರ ನಿರ್ಮಾಣ ಯಾವಾಗ?
- ಮಂದಿರ ನಿರ್ಮಾಣ ಪೂರ್ಣಗೊಳ್ಳಲು 5 ವರ್ಷ ಬೇಕು. ಭವ್ಯ ಮಂದಿರ ನೋಡಬೇಕೆಂಬ ಜನಾಪೇಕ್ಷೆ ಬೆಟ್ಟದಷ್ಟಿದ್ದುದರಿಂದ ಯಥಾಶೀಘ್ರ ರಾಮನನ್ನು ಅವನ ಸ್ಥಾನದಲ್ಲೇ ಜನರಿಗೆ ದರ್ಶನ ಮಾಡಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ, ಮೊದಲ ಮಹಡಿ ಪೂರ್ಣಗೊಳ್ಳುತ್ತಿದ್ದಂತೆಯೇ ಪ್ರಾಣಪ್ರತಿಷ್ಠೆ ನಡೆಸಲು ಮುಂದಾದೆವು. ಮೊದಲ ಮಹಡಿಗೆ ಕಲ್ಲಿಡುವ ಕೆಲಸ ಜೂನ್- ಜುಲೈನಲ್ಲೇ ಪೂರ್ಣಗೊಂಡಿತ್ತು. ಆದರೆ, ಬರೀ ಕಲ್ಲಿಟ್ಟ ತಕ್ಷಣ ಕೆಲಸ ಪೂರ್ಣವಾಗುವುದಿಲ್ಲ. ಅದಕ್ಕಾಗಿ ಡಿಸೆಂಬರ್ವರೆಗೆ ಕಾಯಬೇಕಾಯ್ತು. 2024ರ ಒಳಗೆ ಮಂದಿರ ನಿರ್ಮಾಣ ಮಾಡುತ್ತೇವೆಂದು ಭರವಸೆ ನೀಡಿದ್ದರಿಂದ ಜ. 22ರ ದಿನಾಂಕ ಆಯ್ಕೆ ಮಾಡಿದೆವು. ಜನರ ನಂಬಿಕೆ ಹುಸಿ ಮಾಡಬಾರದೆನ್ನುವುದು ನಮ್ಮ ಆಶಯ. ಎಲ್ಲಿಂದ ಭಗವಂತನ ದರ್ಶನ ಸಿಗುತ್ತದೋ, ಆ ಭಾಗದ ಕೆಲಸ ಶೇ. 90ರಷ್ಟು ಪೂರ್ಣವಾಗಿದೆ. ಜ. 23ರಿಂದಲೇ ಜನರಿಗೆ ರಾಮನ ಮೂಲಸ್ಥಾನದಲ್ಲಿ ದರ್ಶನ ಸಿಗಲಿದೆ.
* 16ರಿಂದ ಶುರುವಾಗುವ ಧಾರ್ವಿುಕ ಕೈಂಕರ್ಯಗಳ ಬಗ್ಗೆ ಮಾಹಿತಿ ನೀಡುವುದಾದರೆ...
- ಹೋಮಹವನ 16ಕ್ಕೆ ಶುರುವಾಗಲಿದೆ. ಗರ್ಭಗುಡಿಗೆ ಆಯ್ಕೆಯಾಗುವ ಬಾಲರಾಮನ ಮೂರ್ತಿಯ ದೇವದರ್ಶನ ಯಾತ್ರೆ ಜ. 17ರಂದು ನಡೆಯಲಿದೆ. ಈಗ ನಮ್ಮಲ್ಲಿರುವುದು ಕೇವಲ ಮೂರ್ತಿ ಮಾತ್ರ. ಅದು ಭಗವಂತ ಅಲ್ಲ. ರಾಮ ತನ್ನ ಮೂಲಸ್ಥಾನಕ್ಕೆ ಹೋಗುವ ಮುನ್ನ ಬೇರೆ ಬೇರೆ ದೇವರ ದರ್ಶನ ಮಾಡಬೇಕು ಎಂಬ ಪರಂಪರೆಯಿದೆ. ಹೀಗಾಗಿ, ಈಗಿರುವ ರಾಮಸೇವಕಪುರದಿಂದ ಸರಯೂ ನದಿವರೆಗೆ ರಾಮನನ್ನು ಕರೆದುಕೊಂಡು ಹೋಗುತ್ತೇವೆ. ಅಲ್ಲಿ ಸ್ನಾನ ಮಾಡಿಸುತ್ತೇವೆ. ಅಲ್ಲಿಂದ ಮುಖ್ಯರಸ್ತೆ ಮೂಲಕ ಪ್ರದಕ್ಷಿಣೆ ಹಾಕುತ್ತಾ, ಭಗವಂತನ ಸನ್ನಿಧಾನಕ್ಕೆ ತಲುಪಿಸುತ್ತೇವೆ. ಅಂದರೆ, 17ರ ಇಡೀ ದಿನದಂದು ಶ್ರೀರಾಮನ ದೇವದರ್ಶನ ಯಾತ್ರೆ ಅಯೋಧ್ಯೆಯಲ್ಲಿ ನಡೆಯಲಿದೆ.
* 18ರಂದು ಏನು ನಡೆಯಲಿದೆ?
ಅಂದು ಗರ್ಭಗೃಹದಲ್ಲಿ ರಾಮನ ಮೂರ್ತಿ ಪ್ರವೇಶವಾಗಲಿದೆ. ಬಳಿಕ, ಜಲಾಧಿವಾಸ, ಅನ್ನಾಧಿವಾಸ, ಫಲಾಧಿವಾಸ, ಆಜ್ಜಾಧಿವಾಸ ನಡೆಯಲಿದೆ. ಜಲಾಧಿವಾಸ ಎಂದರೆ ನೀರಿನಲ್ಲಿ ಮೂರ್ತಿಯನ್ನು ಮುಳುಗಿಸುವುದು. ನಂತರ, ಅಕ್ಕಿ, ಅನ್ನ, ಜೋಳಗಳಲ್ಲಿ ಮುಚ್ಚಿಡುತ್ತೇವೆ. ಮೂರನೇ ದಿನ ಎಲ್ಲಾ ಫಲಗಳಲ್ಲಿ ಮೂರ್ತಿಯನ್ನು ಮುಚ್ಚಿಡುತ್ತೇವೆ. ನಂತರ ಆಜ್ಜಾಧಿವಾಸ. ಅಂದರೆ ತುಪ್ಪದಲ್ಲಿ ಮುಳುಗಿಸುವುದು. ಕೊನೆಗೆ ಮೂರ್ತಿ ಪ್ರತಿಷ್ಠಾಪನೆ. 18ರಿಂದ ಆರಂಭಗೊಳ್ಳುವ ಪ್ರತಿಷ್ಠಾ ಪ್ರಕ್ರಿಯೆಗಳು 21ಕ್ಕೆ ಪೂರ್ಣಗೊಳ್ಳುತ್ತವೆ. 22ರ ಮಧ್ಯಾಹ್ನ 12.20ರ ಅಭಿಜಿತ್ ಮುಹೂರ್ತದಲ್ಲಿ ಶ್ರೀರಾಮನಿಗೆ ಪ್ರಾಣಪ್ರತಿಷ್ಠೆಯಾಗಲಿದೆ.
* ರಾಮಮಂದಿರದಲ್ಲಿ ರಾಮನ ಕುಟುಂಬಸ್ಥರು ಎಲ್ಲಿ ನೆಲೆಗೊಳ್ಳುತ್ತಾರೆ? ಅವರ ಮೂರ್ತಿಗಳೂ ಇರಲಿವೆಯೇ?
- ಈಗಲೂ ಸೀತಾಮಾತೆಯ ಮೂರ್ತಿ ಮಂದಿರದ ಗರ್ಭಗುಡಿಯಲ್ಲಿಲ್ಲ. ಇದು ರಾಮ ಹುಟ್ಟಿದ ಸ್ಥಾನ. ಬಾಲಸ್ವರೂಪದಲ್ಲಿ ರಾಮ ಗರ್ಭಗುಡಿಯೊಳಗಿರುತ್ತಾನೆ. ಆದರೆ, ಭಕ್ತಾದಿಗಳು ಈಗಿರುವ ಮಂದಿರದಲ್ಲೇ ಲಕ್ಷ್ಮಣ, ಭರತ, ಶತ್ರುಘ್ನ, ಹನುಮಂತ, ಸಾಲಿಗ್ರಾಮವನ್ನೆಲ್ಲಾ ಇಟ್ಟಿದ್ದಾರೆ. ಅವುಗಳನ್ನು ಸಣ್ಣ ಸ್ವರೂಪದಲ್ಲಿ ಹೊಸ ಮಂದಿರದಲ್ಲೂ ಇಡಲಾಗುವುದು. ಈಗಿನ ರಾಮಮಂದಿರದಲ್ಲಿರುವ ಶ್ರೀರಾಮನ ಸಣ್ಣ ಮೂರ್ತಿ ಕೂಡ ನೂತನ ಮಂದಿರದ ಗರ್ಭಗುಡಿ ಸೇರಲಿದೆ. ಈ ಮೂರ್ತಿಗೆ ಪೂಜಾ ಕಾರ್ಯ ನಿತ್ಯವೂ ನಡೆಯುತ್ತಿದೆ. ಪೂಜೆಯಾಗಿರುವ ಮೂರ್ತಿಯನ್ನು ಸುಮ್ಮನೆ ಬಿಡಬಾರದು. ಹಾಗಾಗಿ, ಅದನ್ನೂ ಗರ್ಭಗುಡಿಯಲ್ಲಿರಿಸುತ್ತೇವೆ.
* ಬಾಲರಾಮನ ಕೆತ್ತನೆಗಾಗಿ ಅಯೋಧ್ಯೆಗೆ ತಂದ ಕಲ್ಲುಗಳಲ್ಲಿ ಆಯ್ಕೆಯಾಗಿದ್ದು ಯಾವುದು?
- ಕರ್ನಾಟಕದ ಹೆಗ್ಗಡದೇವನ ಕೋಟೆಯ 2 ಮತ್ತು ರಾಜಸ್ಥಾನದ ಬಿಳಿಬಣ್ಣದ ಶಿಲೆ ಆಯ್ಕೆಯಾಗಿದ್ದವು. ಕಾರ್ಕಳದ ನೆಲ್ಲಿಕಾರಿನಿಂದ ಬಂದ ಕಲ್ಲಿನಲ್ಲಿ ಬಿರುಕು ಮೂಡಿದ್ದವು. ಹಾಗಾಗಿ, ಅದನ್ನು ಪರಿಗಣಿಸಲಿಲ್ಲ. ಆಯ್ಕೆಯಾಗದ ಕಲ್ಲುಗಳನ್ನು ಮುಂದೆ ಬಳಸಲಾಗುವುದು. ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಲಾಗುವುದು. ನೇಪಾಳದ ಗಂಡಕಿ ಶಿಲೆಯಲ್ಲಿ ಹೆಚ್ಚು ಗೆರೆಗಳು ಮೂಡಿದ್ದವು. ಹಾಗಾಗಿ ಅದು ಮೂರ್ತಿ ಕೆತ್ತನೆಗೆ ಯೋಗ್ಯವಾಗಿರಲಿಲ್ಲ. ಇದು ಸಾಲಿಗ್ರಾಮ ಶಿಲೆಯಲ್ಲ. ಗಂಡಕಿ ನದಿಯ ಶಿಲೆ ದೇವ ಶಿಲೆ. ಇದರಲ್ಲಿ ಮೂರ್ತಿ ಮಾಡಬೇಕೆಂದು ಯೋಚಿಸಿದಾಗ ಶಿಲೆಯ ಒಳಗೆ ಬಿಳಿ ಗೆರೆಗಳು ಮೂಡಿದ್ದವು. ರಾಮನ ಮುಖದ ಮೇಲೆ ಬಿಳಿ ಗೆರೆಗಳಿದ್ದರೆ ಚೆನ್ನಾಗಿ ಕಾಣಿಸುವುದೇ?
* ಹನುಮಾನ್ ಗಡಿ, ಸೀತಾರಸೋಯಿ ಕೂಡ ಅಭಿವೃದ್ಧಿಗೊಳ್ಳುವುದೇ?
ಸೀತಾರಸೋಯಿ ರಾಮಮಂದಿರದ ವ್ಯಾಪ್ತಿಯಲ್ಲೇ ಇದೆ. ಸೀತಾ ರಸೋಯಿ ಎಂದರೆ ಸೀತೆಯ ಅಡುಗೆ ಮನೆ. ಈ ಅಡುಗೆ ಮನೆಯಿಂದಲೇ ರಾಮನಿಗೆ ಪ್ರಸಾದ (ನೈವೇದ್ಯ) ಹೋಗಲಿದೆ. ಹನುಮಾನ್ಗಡಿ ಅಭಿವೃದ್ಧಿ ಈಗಾಗಲೇ ಆರಂಭಗೊಂಡಿದೆ.
* ಮಂದಿರದಲ್ಲಿ ಉತ್ತರ ಭಾರತದ ಪೂಜಾಶೈಲಿ ಇರುವುದೇ ಅಥವಾ ದಕ್ಷಿಣ ಭಾರತದ ಶೈಲಿಯನ್ನೂ ಕಾಣಬಹುದೇ?
- ಇಲ್ಲಿರುವುದು ರಾಮಾನಂದಿ ಸಂಪ್ರದಾಯ. ನೂರಾರು ವರ್ಷಗಳಿಂದ ಈ ಸಂಪ್ರದಾಯದ ಪಾಲನೆಯಾಗಿದೆ. ಅದೇ ಪೂಜಾ ಪದ್ಧತಿ ಮುಂದುವರಿಯಲಿದೆ. ರಾಮಾನಂದರು ವೈಷ್ಣವ ಪರಂಪರೆಯವರು. 13-14ನೇ ಶತಮಾನದಲ್ಲಿ ಇದ್ದರು. ಆಗಿನ ಆಕ್ರಮಣದ ಸಂದರ್ಭದಲ್ಲಿ ಹಿಂದು ಧರ್ಮ ಉಳಿಸುವ ಕಾರ್ಯವನ್ನು ಅವರು ಭಕ್ತಿ ಪರಂಪರೆ ಮೂಲಕ ಶುರು ಮಾಡುತ್ತಾರೆ. ಕಬೀರ, ತುಳಸೀದಾಸ, ಮೀರಾ... ಎಲ್ಲರೂ ಅವರ ಶಿಷ್ಯರಾಗಿದ್ದರು. ಹೀಗೆ ಬೇರೆ ಬೇರೆ ಸಮಾಜದ ಜನರಲ್ಲಿ ರಾಮನ ಕುರಿತು ಭಕ್ತಿಭಾವ ಬೆಳೆಸುವ ಸಂಪ್ರದಾಯ ಶುರು ಮಾಡಿದರು. ಅಲ್ಲಿ ಮಂತ್ರಕ್ಕಿಂತ ಭಕ್ತಿಗೆ ಹೆಚ್ಚು ಮಹತ್ವ. ಉತ್ತರ ಭಾರತದಲ್ಲಿ ರಾತ್ರಿ ಮಲಗುವ ಮುನ್ನ ಮೂರ್ತಿಯ ಕೆಳಗೆ ಒಂದು ಗ್ಲಾಸು ನೀರನ್ನು ಇಡುತ್ತಾರೆ. ಅಂದರೆ, ಮನುಷ್ಯರಂತೆ ದೇವರಿಗೂ ನೀರಡಿಕೆಯಾಗುತ್ತದೆ ಎಂಬುದು ನಂಬಿಕೆ. ದಕ್ಷಿಣದಲ್ಲಿ ಇದನ್ನು ನಾನು ಕೇಳಿಲ್ಲ.
* ರಾಮ ಮಂದಿರ ಹೊರತುಪಡಿಸಿ ಈ ಸಮುಚ್ಚಯದಲ್ಲಿ ಬೇರೆ ಏನೇನಿರಲಿದೆ?
- ಈಗಿರುವ ಸುಮಾರು 70 ಎಕರೆಯಲ್ಲಿ ಮಂದಿರದ ಹೊರತಾಗಿ ಹೊರಗಡೆ 75 ಅಡಿ ಅಂತರದಲ್ಲಿ ಪ್ರಾಕಾರ ಬರಲಿದೆ. ಪ್ರಾಕಾರ ಎಂದರೆ ಹೊರಗಿನಿಂದ ಗೋಡೆ ಇರಲಿದ್ದು, ಒಳಗಿನಿಂದ ನಡೆದುಕೊಂಡು ಹೋಗುವ ವ್ಯವಸ್ಥೆ. ಪ್ರದಕ್ಷಿಣೆ ಮಾರ್ಗ ಎನ್ನಬಹುದು. ಅದು 750 ಮೀಟರ್ ಸುತ್ತಳತೆಯಲ್ಲಿದ್ದು, ಅಲ್ಲಿ 6 ದೇವಸ್ಥಾನಗಳಿರುತ್ತವೆ. ಶಿವ, ಗಣೇಶ, ಸೂರ್ಯ, ಅನ್ನಪೂರ್ಣ, ಭಗವತಿ ಮತ್ತು ಹನುಮಂತನ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ. ಋಷಿ ಪರಿಸರವೂ ನಿರ್ವಣಗೊಳ್ಳಲಿದ್ದು, ಅಲ್ಲಿ ವಾಲ್ಮೀಕಿ, ವಿಶ್ವಾಮಿತ್ರ, ವಸಿಷ್ಠ, ದೇವಿ ಅಹಲ್ಯೆ, ಮಾತಾ ಶಬರಿ ಸೇರಿ ಅನೇಕರ ಮೂರ್ತಿಗಳು ಇರಲಿವೆ. ಇವುಗಳೆಲ್ಲವೂ ಸುಮಾರು 10 ಎಕರೆ ಭೂಮಿಯಲ್ಲಿ ನಿರ್ವಣಗೊಳ್ಳಲಿವೆ. ಗರ್ಭಗುಡಿಯ ಮೇಲ್ಭಾಗದಲ್ಲಿ ರಾಮ ಪರಿವಾರ. ಅಲ್ಲಿ ಸೀತಾಮಾತೆಯೂ ಇರುತ್ತಾಳೆ.
* ನೀವು ಅಯೋಧ್ಯೆಗೆ ಬಂದು 3 ವರ್ಷವಾಯ್ತು. ಅಂದಿನ ಅಯೋಧ್ಯೆಗೂ ಈಗಿನ ಅಯೋಧ್ಯೆಗೂ ಯಾವ ವ್ಯತ್ಯಾಸ ಕಾಣುತ್ತೀರಿ?
- 3 ವರ್ಷಗಳಲ್ಲಿ ಮಂದಿರದ ದರ್ಶನಾರ್ಥಿಗಳ ಸಂಖ್ಯೆ ಬಹಳ ಹೆಚ್ಚಾಗಿದೆ. ರಸ್ತೆಗಳನ್ನು ಅಗಲ ಮಾಡಲಾಗಿದೆ. 2020ರಲ್ಲಿ ನಿತ್ಯಕ್ಕೆ 6000 ಇದ್ದ ಯಾತ್ರಿಕರ ಸಂಖ್ಯೆ ಈಗ 20000ಕ್ಕೇರಿದೆ. ಅಂದರೆ ಮೂರು ಪಟ್ಟು ಹೆಚ್ಚಳ. ಜ. 22ರ ಪ್ರಾಣಪ್ರತಿಷ್ಠೆ ನಂತರ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ಇಡೀ ಅಯೋಧ್ಯೆಯಲ್ಲಿ ಒಂದು ರೀತಿಯ ರಾಮರಾಜ್ಯದ ಉತ್ಸಾಹ ಕಾಣುತ್ತಿದೆ.
* ಸ್ಥಳೀಯರ ಸ್ಪಂದನೆ ಹೇಗಿದೆ? ಮನೆ, ಭೂಮಿ ಕಳೆದುಕೊಂಡವರಲ್ಲಿ ಈಗಲೂ ಬೇಸರವಿದ್ದಂತಿದೆ...
- ಸ್ಥಳೀಯರಲ್ಲಿ ಅತೀವ ಉತ್ಸಾಹವಿದೆ. ಅನುಮಾನ ಬೇಡ. 3 ವರ್ಷದಿಂದ ನಾನು ನೋಡುತ್ತಿದ್ದೇನೆ. ಜಮೀನು ಕೊಟ್ಟವರಲ್ಲಿ ಪ್ರಾರಂಭದಲ್ಲಿ ಸ್ವಲ್ಪ ದುಃಖವಿತ್ತು. ದಿನಕಳೆದಂತೆ ಅವರ ತಲಾ ಆದಾಯದ ಹೆಚ್ಚಾಗಿರುವುದರಿಂದ ಅವರೂ ಸಮಾಧಾನಗೊಂಡಿದ್ದಾರೆ. ಸರ್ಕಾರ ಪರಿಹಾರವನ್ನೂ ನೀಡಿದೆ. ಶೇ. 90ರಷ್ಟು ಅಯೋಧ್ಯಾ ನಿವಾಸಿಗರು ನವ ಅಯೋಧ್ಯೆ ನಿರ್ವಣವನ್ನು ಸ್ವಾಗತಿಸಿದ್ದಾರೆ.
* ಮಂದಿರ ನಿರ್ಮಾಣದಿಂದ ಜನರ ಜೀವನದಲ್ಲಿ ಏನು ಬದಲಾವಣೆ ಆಗುತ್ತೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ...
- ಯಾವುದೇ ಊರಾಗಿರಲಿ, ಆರ್ಥಿಕತೆ, ಸಂಪನ್ನತೆ ಇಲ್ಲದಿದ್ದಾಗ ಮನೆ, ಆಹಾರ ಪದ್ಧತಿ, ಜೀವನಶೈಲಿ ಸಾದಾ ಇರುತ್ತವೆ. ಉದ್ಯೋಗವಿರುವುದಿಲ್ಲ. ಆದರೆ, ಈಗ ಹಾಗಿಲ್ಲ. ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಸ್ಥಳೀಯರ ಆದಾಯ ಹೆಚ್ಚಾಗಲಿದೆ. ಹೊಟೇಲ್, ವಾಹನ ಸೇರಿ ಹತ್ತು ಹಲವು ಅಂಶಗಳ ಬೇಡಿಕೆ ಹೆಚ್ಚಾಗಿ ಕಾರ್ವಿುಕರಿಗೂ ಬೇಡಿಕೆ ಹೆಚ್ಚಲಿದೆ. ವ್ಯಾಪಾರ, ಉದ್ಯೋಗದಿಂದ ಆದಾಯವೂ ಹೆಚ್ಚಿ, ಜನರ ಜೀವನದಲ್ಲೂ ಪರಿವರ್ತನೆಯಾಗುತ್ತಿದೆ. ಮಂದಿರ ನಿರ್ವಣದ ಪರಿಣಾಮ ಪ್ರತ್ಯಕ್ಷ/ಪರೋಕ್ಷವಾಗಿ ಅಯೋಧ್ಯೆಯಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಸಿಕ್ಕಿದೆ.
* ಮಂದಿರ ನಿರ್ಮಾಣ ಕಾರ್ಯಕ್ಕೆ ಗೋಪಾಲ್ ನಾಗರಕಟ್ಟೆಯವರನ್ನೇ ಸಂಘಟನೆ ಆಯ್ಕೆ ಮಾಡಿದ್ದೇಕೆ?
- ಕೆಲಸ ಮಾಡಬಲ್ಲೆ ಎಂದು ಅನಿಸಿದ್ದರಿಂದ ಸಂಘ ಕಳುಹಿಸಿಕೊಟ್ಟಿರಬೇಕು. ಅಯೋಧ್ಯೆಯಲ್ಲಿ ಕೆಲಸ ಮಾಡು ಎಂದು ಶ್ರೀರಾಮ ಆಶೀರ್ವಾದ ಮಾಡಿದ್ದಾನೆ. ಇದು ನನ್ನ ಭಾಗ್ಯ.
* ಜ. 22ರ ಪ್ರಾಣಪ್ರತಿಷ್ಠೆ ಬಳಿಕವೂ ನಿಮ್ಮ ಕಾರ್ಯ ಇಲ್ಲಿ ಮುಂದುವರಿಯುವುದೇ?
- ಸಂಘ ಹೇಗೆ ಹೇಳುತ್ತದೋ ಹಾಗೆ. ನನ್ನ ಸ್ವಂತದ್ದು ಏನಿದೆ ಹೇಳಿ...?