ಬನ್ನಿ ಬ್ರದರ್​, ರಾಮಮಂದಿರಕ್ಕೆ ಹೋಗಿ ಬರೋಣ: ಎಚ್​ಡಿಕೆಯನ್ನು ಶ್ರೀರಾಮುಲು ಕರೆದಿದ್ದೇಕೆ?

sriramulu hdk
Published on

ಬೆಂಗಳೂರು: 'ನನ್ನ ಸಹೋದರನ ಮನದಲ್ಲಿ ಏನಿದೆಯೆಂದು ನಾನು ಬಲ್ಲೆ' ಎಂದಿರುವ ಸಚಿವ ಬಿ.ಶ್ರೀರಾಮುಲು, 'ನಾವಿಬ್ಬರೂ ಸಹೋದರರು. ಒಟ್ಟಾಗಿ ಮಂದಿರಕ್ಕೆ ಹೋಗಿ ಬರೋಣ ಬನ್ನಿ' ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿಯನ್ನು ಕರೆದಿದ್ದಾರೆ.

‘ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ ಮತ್ತು ಕೊಡದವರ ಮನೆ ಗುರುತು ಮಾಡಲಾಗುತ್ತಿದೆ…’ ಎಂದು ಮೊನ್ನೆ ಟ್ವೀಟ್​ ಮೂಲಕ ಕುಮಾರಸ್ವಾಮಿ ಕಿಡಿಕಾರಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಶ್ರೀರಾಮುಲು, ಪಬ್ಲಿಸಿಟಿಗಾಗಿ ಹೇಳಿಕೆ ಎಂದು ಟೀಕಿಸಿದ್ದರು. ಇದೀಗ, 'ನನ್ನ ಸಹೋದರನ(ಎಚ್​ಡಿಕೆ) ಮನದಲ್ಲಿ ಏನಿದೆಯೆಂದು ನಾನು ಬಲ್ಲೆ' ಎಂದಿದ್ದಾರೆ. ಇದನ್ನೂ ಓದಿರಿ ಪಾಸ್​ಪೋರ್ಟ್- ಬೋರ್ಡಿಂಗ್​ ಪಾಸ್​ ಕೊಟ್ಟು ಮದ್ವೆಗೆ ಆಹ್ವಾನಿಸಿದ ನವಜೋಡಿ! ಸಖತ್​ ವೈರಲ್​ ಆಗ್ತಿದೆ ಈ ಮದ್ವೆ

'ಪಬ್ಲಿಸಿಟಿಗಾಗಿ ಹೇಳಿಕೆ ಕೊಟ್ಟಿದ್ದಾರೆ' ಎಂದಿದ್ದ ಶ್ರೀರಾಮುಲು ವಿರುದ್ಧ ಟ್ವೀಟ್​ ಮೂಲಕ ಕಿಡಿಕಾರಿದ್ದ ಎಚ್​ಡಿಕೆ, 'ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ ಎಂದು ಸೋದರ ಶ್ರೀರಾಮುಲು ಹೇಳಿದ್ದಾರೆ. ಪಾಪ ಅವರು ಮುಗ್ಧರು. ದೈವಬಲ, ಜನಾSIರ್ವಾದದಿಂದ 2 ಬಾರಿ ಸಿಎಂ ಆದ ನಾನು ಇನ್ನು ಯಾವ ಪಬ್ಲಿಸಿಟಿ ಪಡೆಯಬೇಕಿದೆ? ನನಗೆ ಅದರ ಅಗತ್ಯವೇನಿದೆ? ರಾಮ ಮಂದಿರ ಆಗಬೇಕೆಂದು ಕುಮಾರಸ್ವಾಮಿ ಅವರ ಮನಸ್ಸಲ್ಲೂ ಇದೆ ಎಂಬ ಅವರ ಮಾತನ್ನು ಮಾತ್ರ ಅನುಮೋದಿಸುತ್ತೇನೆ' ಎಂದಿದ್ದರು. ಇದಕ್ಕೆ ರೀ ಟ್ವೀಟ್​ ಮಾಡಿರುವ ಶ್ರೀರಾಮುಲು, 'ನನ್ನ ಸಹೋದರನ ಮನಸ್ಸಲ್ಲಿ ಏನಿದೆಯೆಂದು ನಾನು ಬಲ್ಲೆ.‌ ನೀವೇ ಒಪ್ಪಿದಂತೆ ನಿಮಗೆ ರಾಮ‌ ಮಂದಿರ ನಿರ್ಮಾಣವಾಗಲಿ ಎಂದಿದೆ. ದೇಣಿಗೆಯನ್ನೂ ಕೊಡುತ್ತೇನೆಂದು ಹೇಳಿದ್ದೀರಿ. ಇನ್ನೇನು ಸಮಸ್ಯೆ? ಕೇವಲ ಒಂದು ವರ್ಗವನ್ನು ಓಲೈಸಲು ಇಷ್ಟೆಲ್ಲ ಹೇಳಿಕೆಗಳ ಅಗತ್ಯವಿರಲಿಲ್ಲ. ಬನ್ನಿ ನಾವು ಸಹೋದರರು ಒಟ್ಟಾಗಿ ಮಂದಿರಕ್ಕೆ ಹೋಗಿ ಬರೋಣ. ಜನ-ಮತ ಆಮೇಲೆ' ಎಂದು ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.

ಇದಕ್ಕೂ ಮುನ್ನ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಎಚ್​ಡಿಕೆ, 'ರಾಮ ಮಂದಿರ ನಿರ್ಮಾಣಕ್ಕೆ ನನ್ನ ಕಡೆಯಿಂದ ಯಾವುದೇ ವಿರೋಧವಿಲ್ಲ. ಆದ್ರೆ ಧಾರ್ಮಿಕ ಭ್ರಷ್ಟಾಚಾರ ಸಹಿಸಲ್ಲ' ಎಂದಿದ್ದರು. ಅಲ್ಲದೆ, 'ರಾಮಮಂದಿರ ನಿರ್ಮಾಣಕ್ಕಾಗಿ ದೇಣಿ ಕೊಡುವಂತೆ ಅಧಿಕೃತ ವ್ಯಕ್ತಿ ಬಂದು ಕೇಳಿದರೆ ನಾನು ಖಂಡಿತ ಹಣ ಕೊಡುತ್ತೇನೆ. ಒಂದು ಬಾರಿ ಅಲ್ಲದಿದ್ರೆ, ಎರಡು ಬಾರಿ ಕೊಡ್ತೀನಿ' ಎಂದೂ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net