ಸದನದಲ್ಲಿ ರಾಮ, ಹನುಮ; ಕೆರಳಿದ ಬಿಜೆಪಿ, ಉರಿದ ಕಾಂಗ್ರೆಸ್

Governor Speech
Published on

ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಲೋಕಾರ್ಪಣೆ, ಮಂಡ್ಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿದ ವಿಚಾರ ವಿಧಾನಸಭೆಯಲ್ಲಿ ಬುಧವಾರ ಕೋಲಾಹಲಕ್ಕೆ ಕಾರಣವಾಯಿತು. ಪ್ರತಿಪಕ್ಷ ಬಿಜೆಪಿ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ನಡುವೆ ಸೇರಿಗೆ ಸವ್ವಾಸೇರೆಂಬಂತೆ ಮಾತಿನ ಮಲ್ಲಯುದ್ಧ ನಡೆಯಿತು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ವಿಚಾರವಾಗಿ ಸರ್ಕಾರದ ಗಮನ ಸೆಳೆಯಲು ನಿಲುವಳಿ ಸೂಚನೆ ಮಂಡಿಸಿದ್ದ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯದಲ್ಲಿ ಇತ್ತೀಚಿನ ಕೆಲವು ಪ್ರಕರಣ ಉದಾಹರಿಸಿ ಸರ್ಕಾರವನ್ನು ತಿವಿದರು. ಕರಸೇವಕ ಶ್ರೀಕಾಂತ ಬಂಧನ ಪ್ರಕರಣ, ಮಂಡ್ಯ ಕೆರಗೋಡು ಹನುಮಧ್ವಜ ಪ್ರಕರಣದ ಪ್ರಸ್ತಾಪ ಮಾಡಿದ್ದು ಕಾಂಗ್ರೆಸ್ ಶಾಸಕರನ್ನು ಕೆರಳಿಸಿತು. ನಿಮಗೆ ಹನುಮ ಧ್ವಜ ಮುಖ್ಯವೋ? ರಾಷ್ಟ್ರಧ್ವಜ ಮುಖ್ಯವೋ? ಎಂದು ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ರವಿ ಗಣಿಗ ಪ್ರಶ್ನಿಸಿದರೆ, ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದು ನಾವು, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಅಡೆತಡೆ ಮೀರಿ ರಾಷ್ಟ್ರ ಧ್ವಜ ಹಾರಿಸಿದ್ದು ನಾವು, ಬೆಂಗಳೂರು ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರುವಂತೆ ಮಾಡಿದ್ದು, ನೀವು ರಾಷ್ಟ್ರಧ್ವಜ, ರಾಷ್ಟ್ರ ಭಕ್ತಿ ಬಗ್ಗೆ ನಮಗೆ ಪಾಠ ಮಾಡಲು ಬರಬೇಡಿ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. ವಿವಿಧ ರೂಪ ಪಡೆದುಕೊಂಡ ಚರ್ಚೆ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ವಿಚಾರದ ಕಡೆಯೂ ತಿರುಗಿತು. ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದರೆ ಬರುವುದಿಲ್ಲ ಎಂದು ಹೇಳಿದವರು ಕಾಂಗ್ರೆಸ್​ನವರು ಮಾತ್ರ ಎಂದು ಬಿಜೆಪಿ ತಿವಿದಾಗ, ದಲಿತ ಸಮುದಾಯಕ್ಕೆ ಸೇರಿದ ರಾಷ್ಟ್ರಪತಿಯವರನ್ನು ಉದ್ಘಾಟನೆಗೆ ಕರೆದಿಲ್ಲ, ಅವರಿಗೆ ಗೌರವ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಕುಟುಕಿತು. ಗೌರವ ತರುವ ವಿಚಾರವೇ ಎಂದು ಬಿಜೆಪಿ ತೀಕ್ಷ್ಣಮಾತುಗಳಲ್ಲಿ ಚುಚ್ಚಿತು.

ಜಟಾಪಟಿ ಇಷ್ಟಕ್ಕೆ ನಿಲ್ಲದೇ, ರಾಮ ಮಂದಿರ ನಿಮಗೆ ರಾಜಕೀಯ ವಿಷಯ ಎಂದು ಕಾಂಗ್ರೆಸ್ ಕಡೆಯಿಂದ ಟೀಕೆ ವ್ಯಕ್ತವಾದಾಗ, ಹೌದು ಶ್ರೀರಾಮ ಮಂದಿರ ನಮ್ಮ ಬದ್ಧತೆ, ಅದನ್ನು ಕಟ್ಟುತ್ತೇವೆಂದು ಹೇಳಿದ್ದೆವು. ಕಟ್ಟಿದ್ದೇವೆ. ಅದು ನಮ್ಮ ಬದ್ಧತೆ ಎಂದು ಸುನಿಲ್​ಕುಮಾರ್ ಗಡಸು ದನಿಯಲ್ಲಿ ಪ್ರತಿಕ್ರಿಯಿಸಿದರು.

ಬಳಿಕ ಮಂಡ್ಯ ಕೆರಗೋಡು ವಿಚಾರ ಮಾತನಾಡಲು ಆರ್. ಅಶೋಕ ಪ್ರಾರಂಭಿಸುತ್ತಿದ್ದಂತೆ ಸಚಿವ ಚಲುವರಾಯಸ್ವಾಮಿ ಹಾಗೂ ರವಿ ಗಣಿಗ ಅಡ್ಡಿಪಡಿಸಲಾರಂಭಿಸಿದರು. ಈ ವೇಳೆ ಸಾಕಷ್ಟು ಗದ್ದಲ ಉಂಟಾಯಿತು. ಸ್ಪೀಕರ್ ಮಧ್ಯ ಪ್ರವೇಶಿಸಿ ಪ್ರತಿಪಕ್ಷ ನಾಯಕರಿಗೆ ಮಾತನಾಡುವ ಹಕ್ಕಿದೆ, ಮಾತನಾಡಲು ಬಿಡಿ, ನಂತರ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸೂಚನೆ ನೀಡಿದರೂ ಚೆಲುವರಾಯಸ್ವಾಮಿ, ರವಿ ಗಣಿಗ ಅವರಿಗೆ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ಇರಲಿಲ್ಲ. ಹೀಗಾಗಿ ಗದ್ದಲದ ನಡುವೆಯೇ ಆರ್. ಅಶೋಕ ಅಲ್ಲಿನ ಘಟನೆಯನ್ನು ಹೇಳುತ್ತ ಸರ್ಕಾರ ಪರಿಸ್ಥಿತಿ ನಿಭಾಯಿಸಿದ ರೀತಿಯನ್ನು ಟೀಕಿಸಿದರು.

ಕಾಂಗ್ರೆಸ್​ಗೆ ರಾಮ, ಹನುಮರ ಮೇಲೆ ದ್ವೇಷ ಎಂಬ ಪ್ರತಿಪಕ್ಷ ನಾಯಕರ ಮಾತಿಗೆ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿ, ನಮಗೂ ರಾಮ, ಹನುಮರ ಮೇಲೆ ಭಕ್ತಿ ಇದೆ. ನೀವು ಪ್ರಚಾರ ಪಡೆದುಕೊಳ್ಳುತ್ತೀರಷ್ಟೆ ಎಂದು ತಿವಿದರು.

ಅಶೋಕಣ್ಣ ಈ ಶ್ಲೋಕ ಹೇಳಿ ನೋಡೋಣ!: ಮಂಡ್ಯ ಶಾಸಕ ರವಿ ಗಣಿಗ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರಿಗೆ ಶ್ಲೋಕ ಹೇಳುವ ಸವಾಲು ಹಾಕಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ರಾಮಮಂದಿರ ವಿಚಾರವಾಗಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದಾಗ, ಶ್ಲೋಕ ಹೇಳಿದ ರವಿ ಗಣಿಗ, ‘ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ’ ಇದನ್ನು ನೀವೊಮ್ಮೆ ಹೇಳಿ ನೋಡೋಣ ಎಂದು ಪದೇಪದೆ ಹೇಳಿ ಪ್ರತಿಪಕ್ಷ ನಾಯಕರ ಕಾಲೆಳೆದರು. ಅಶೋಕ ಮಾತ್ರ ಅವರ ಮಾತನ್ನು ಕೇಳಿಯೂ ಕೇಳಿಸಿಕೊಳ್ಳದಂತೆ ಮಾತು ಮುಂದುವರಿಸಿದ್ದರು.

ಕರಸೇವಕ ವ್ಯಾಖ್ಯಾನ: ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ ಪ್ರಸ್ತಾಪ ಮಾಡುತ್ತಲೇ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕೆರಳಿದರು. ಈ ವೇಳೆ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, 31 ವರ್ಷಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪೂಜಾರಿಯನ್ನು ಬಂಧಿಸಿದ್ದು, ಬೇರೆ ಪ್ರಕರಣಗಳಲ್ಲಿ ಬಂಧಿಸಿದ್ದರೆ ಅಭ್ಯಂತರವಿರುತ್ತಿರಲಿಲ್ಲ ಎಂದರು. ಸಚಿವ ಎಂ.ಬಿ. ಪಾಟೀಲ್ ಮಧ್ಯ ಪ್ರವೇಶಿಸಿ, ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವನನ್ನು ಕರಸೇವಕ, ರಾಮ ಭಕ್ತ ಅನ್ನುತ್ತೀರಲ್ಲ? ಕರಸೇವಕರಿಗೆ ಅಪಮಾನ ಮಾಡಿದ್ದೀರಿ ಎಂದು ಕಿಡಿಕಾರಿದರು. ಪುನಃ ಮಧ್ಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ಪೂಜಾರಿ ವಿರುದ್ಧ ಸುಲಿಗೆ, ವಂಚನೆ ಪ್ರಕರಣಗಳಿವೆ, ಜೂಜು, ಮಟ್ಕಾ ದಂಧೆಯಲ್ಲಿ ಭಾಗಿಯಾಗಿದ್ದವ. ಅಂಥವನನ್ನು ನೀವು ಕರಸೇವಕ ಅಂತ ಕರೆದರೆ ತಮಗೇನು ಅಭ್ಯಂತರವಿಲ್ಲ. ಕರಸೇವಕನ ವ್ಯಾಖ್ಯಾನ ಏನು ಎನ್ನುವುದನ್ನು ಬಿಜೆಪಿ ನಾಯಕರು ಹೇಳಬೇಕು ಎಂದರು. ಶ್ರೀಕಾಂತ್ ಪೂಜಾರಿ ಸಮರ್ಥಿಸಿಕೊಳ್ಳುವವರಿಗೆ ನಾಚಿಕೆ ಆಗಬೇಕು ಎಂದು ಕಾಂಗ್ರೆಸ್​ನ ನಯನ ಮೋಟಮ್ಮ ಮೊಟಕಿದರು. ಇದಕ್ಕೆ ಬಿಜೆಪಿಯಿಂದ ತೀಕ್ಷ್ಣಪ್ರತಿಕ್ರಿಯೆ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net