

ನವದೆಹಲಿ: ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಜೂ.5ರಂದು ಪೂರ್ಣಗೊಳ್ಳಲಿದ್ದು, ಜೂ. 3ರಿಂದಲೇ ರಾಮದರ್ಬಾರ್ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಜೂ.5ರಂದು ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಅದಾಗ್ಯೂ ಈ ಸಲದ ಗಣ್ಯರ ಪಟ್ಟಿ ವಿಭಿನ್ನವಾಗಿರಲಿದೆ ಎಂದು ಹೇಳಿದ್ದಾರೆ. ರಾಮ ದರ್ಬಾರ್ನಲ್ಲಿನ ವಿಗ್ರಹಗಳ ಪ್ರಾಣಪ್ರತಿಷ್ಠಾಪನೆ ಜೂ.5ರಂದು ನಡೆಯಲಿದ್ದು, ಆ ಕುರಿತ ಕಾರ್ಯಕ್ರಮಗಳು ಜೂ.3ರಂದೇ ಆರಂಭವಾಗಲಿವೆ. ಅಲ್ಲದೆ ರಾಮ ಮಂದಿರ ಸಂಕೀರ್ಣದಲ್ಲಿ ಇತರ ಏಳು ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗಿದ್ದು, ಅವುಗಳ ಧಾರ್ವಿುಕ ಕಾರ್ಯಕ್ರಮಗಳು ಕೂಡ ಅಂದೇ ನಡೆಯಲಿವೆ ಎಂದಿದ್ದಾರೆ. ಇದರೊಂದಿಗೆ ರಾಮ ಮಂದಿರ ನಿರ್ಮಾಣ ಜೂ.5ಕ್ಕೆ ಪೂರ್ಣಗೊಳ್ಳಲಿದೆ. ದೇವಸ್ಥಾನದ ಕೆಳಗಿನ ಸ್ತಂಭಗಳಲ್ಲಿನ ಶ್ರೀರಾಮನ ಭಿತ್ತಿಚಿತ್ರ ಅಳವಡಿಕೆಯಷ್ಟೇ ಬಾಕಿ ಉಳಿಯಲಿದೆ ಎಂದು ತಿಳಿಸಿದ್ದಾರೆ. ಈ ಸಲ ಕೇಂದ್ರ ಅಥವಾ ರಾಜ್ಯಗಳ ಗಣ್ಯರ ಬದಲು ವಿವಿಧ ಸಮುದಾಯಗಳ ಆಧ್ಯಾತ್ಮಿಕ ಗುರುಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸುವ ಸಾಧ್ಯತೆ ಇದೆ ಎಂದಿದ್ದಾರೆ.
20 ಕಿ.ಮೀ. ಉದ್ದದ ಭರತ ಪಥ: ಅಯೋಧ್ಯೆಯಲ್ಲಿ ರಾಮ ಮಂದಿರ ಹಾಗೂ ರಾಮನ ಸಹೋದರ ಭರತ ತಪಸ್ಸು ಮಾಡಿದ್ದ ಎನ್ನಲಾದ ಭರತಕುಂಡಕ್ಕೆ ಸಂಪರ್ಕ ಕಲ್ಪಿಸುವ 20 ಕಿ.ಮೀ. ಉದ್ದದ ಭರತ ಪಥವನ್ನು 900 ಕೋಟಿ ರೂ. ವೆಚ್ಚದಲ್ಲಿ ಉತ್ತರಪ್ರದೇಶ ಸರ್ಕಾರ ನಿರ್ಮಾಣ ಮಾಡಲಿದೆ.