

ಕೊಪ್ಪ: ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ವಿಚಾರದಲ್ಲಿ ಶಂಕರ ಗುರು ಪರಂಪರೆಯ ಯಾವ ಮಠದವರಿಗೂ ಕಿಂಚಿತ್ತೂ ಭಿನ್ನಾಭಿಪ್ರಾಯ, ಅಸಮಾಧಾನಗಳಿಲ್ಲ. ಇಂತಹ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಈ ಸಂಬಂಧ ವೀಡಿಯೋ ಹೇಳಿಕೆ ಬಿಡುಗಡೆಗೊಳಿಸಿರುವ ಸ್ವಾಮೀಜಿ ಅವರು, ಎಲ್ಲ ಶಂಕರ ಪರಂಪರೆಯ ಮಠದವರು ಈ ಕಾರ್ಯಕ್ರಮಕ್ಕೆ ಪರಿಪೂರ್ಣ ಆಶೀರ್ವಾದ ತಿಳಿಸಿದ್ದಾರೆ. ಆ ಶುಭದಿನದಂದು ಪ್ರತಿ ಮಠದಲ್ಲಿ ಶ್ರೀರಾಮನ ಆರಾಧನೆ ಮಾಡುವ ಸಂಕಲ್ಪ ಮಾಡಿದ್ದಾರೆ. ಸನಾತನ ಹಿಂದು ಧರ್ಮದ ಎಲ್ಲರೂ ಸೇರಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಟ್ಟಾಗಿ ಇದನ್ನು ಆಚರಿಸಬೇಕು. ಇದರಲ್ಲಿ ಜಾತಿ ಮತ್ತು ಪಕ್ಷವನ್ನು ಯಾವುದೇ ಕಾರಣಕ್ಕೆ ತರಬಾರದು ಎಂದು ಹೇಳಿದ್ದಾರೆ.