ರಾಮ ಮಂದಿರ ಬದಲಾದ ಭಾರತದ ಸಂಕೇತ; ಸಿ.ಟಿ.ರವಿ

ctravi
Published on

ಬೆಂಗಳೂರು: ಭಗವಾನ್ ಶ್ರೀರಾಮ ಎಲ್ಲರಿಗೂ ಸೇರಿದವ. ಎಲ್ಲರಿಗೂ ಪ್ರಿಯವಾದ ಆದರ್ಶಪುರುಷ. ರಾಮನ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ 500 ವರ್ಷಗಳ ಕನಸು ನನಸಾಗುತ್ತಿದ್ದು, ಕಾಂಗ್ರೆಸ್‌ನ ವಿರೋಧ ಅರ್ಥಹೀನವಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.

ಯಶವಂತಪುರದ ಅಂತ್ಯೋದಯ ಭವನದಲ್ಲಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಭಾನುವಾರ ಆಲಿಸಿದ ನಂತರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

ರಾಮಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣಗಳು ಸಮೀಪಿಸುತ್ತಿವೆ. ರಥಯಾತ್ರೆ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು ಎಲ್.ಕೆ.ಅಡ್ವಾಣಿ. ಇದಕ್ಕಾಗಿ ಹೋರಾಡಿದವರಲ್ಲಿ ಸಾರ್ಥಕ ಭಾವ, ಪ್ರಾಣತ್ಯಾಗ ಮಾಡಿದವರ ಆತ್ಮಕ್ಕೆ ಚಿರಶಾಂತಿ ಲಭಿಸಲಿದೆ ಎಂದರು.

ಅಯೋಧ್ಯೆಯ ರಾಮನ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಿಸುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ್ದೆವು, ಅದೀಗ ಈಡೇರುತ್ತಿದೆ. ಮೋದಿಯವರು ಶನಿವಾರ ಅಯೋಧ್ಯೆಗೆ ಭೇಟಿ ನೀಡಿದ ವೇಳೆ ಅರ್ಜಿದಾರ ಇಕ್ಬಾಲ್ ಅನ್ಸಾರಿ ಪುಷ್ಪವೃಷ್ಠಿ ಮಾಡಿದ್ದು, ಬದಲಾದ ಭಾರತದ ಸಂಕೇತವೆಂದು ಬಣ್ಣಿಸಿದರು.

ಸಂಸದ ಪ್ರತಾಪಸಿಂಹ ಸೋದರ ವಿಕ್ರಮಸಿಂಹ ಬಂಧನ ಪ್ರಕರಣದ ಬಗ್ಗೆ ಹೆಚ್ಚಿನ ವಿವರಗಳು ಗೊತ್ತಿಲ್ಲ. ಆದರೆ ಪ್ರಕರಣದಲ್ಲಿ ಸಂಸದನ ಸೋದರ ಎಂಬುದು ಮುಖ್ಯವಾಗಬಾರದು. ರಾಜಕೀಯ ದ್ವೇಷ ಮಾಡಬಾರದು ಎಂದು ಸಿ.ಟಿ.ರವಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net