

ಹೈದರಾಬಾದ್: ಹೈದರಾಬಾದ್ ಸಂಧ್ಯಾ ಥಿಯೇಟರ್ನಲ್ಲಿ ಡಿಸೆಂಬರ್ 04ರಂದು ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಡೆದ ನಾಟಕೀಯ ಬೆಳವಣಿಗೆ ಈಗಲೂ ಚರ್ಚೆಯಲ್ಲಿದ್ದು, ನಟ ಅಲ್ಲು ಅರ್ಜುನ್ ಬಂಧನವನ್ನು ಖಂಡಿಸಿ ಅನೇಕರು ಪೋಸ್ಟ್ ಮಾಡಿ ಕಿಡಿಕಾರುತ್ತಿದ್ದಾರೆ. ಅಲ್ಲು ಅರ್ಜುನ್ ಬಂಧನ ವಿಚಾರವಾಗಿ ನಿರ್ದೇಶಕ ರಾಮ್ಗೋಪಾಲ್ ವರ್ಮಾ (Ram Gopal Varma) ಟ್ವೀಟ್ ಮಾಡಿ ಕಿಡಿಕಾರಿದ್ದು ಶ್ರೀದೇವಿಯವರನ್ನು ಅರೆಸ್ಟ್ ಮಾಡ್ತಾರಾ ಎಂದು ಪ್ರಶ್ನಿಸುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವರ್ಮಾ (Ram Gopal Varma), ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದನ್ನು ಖಂಡಿಸಿ ಪ್ರತಿಯೊಬ್ಬ ನಟರು ಪ್ರತಿಭಟನೆ ನಡೆಸಬೇಕು.ಸಿನಿಮಾದವರು ಆಗಿರಬಹುದು ಅಥವಾ ರಾಜಕೀಯದವರು ಆಗಿರಬಹುದು. ತುಂಬ ಜನಪ್ರಿಯತೆ ಹೊಂದುವುದು ಅಪರಾಧವೇ? ನನ್ನ ಕ್ಷಣ ಕ್ಷಣಂ ಸಿನಿಮಾದ ಚಿತ್ರೀಕರಣದ ವೇಳೆ ಶ್ರೀದೇವಿಯನ್ನು ನೋಡಲು ಲಕ್ಷಾಂತರ ಜನರು ಬಂದಿದ್ದರು. 3 ಜನರು ಸಾವಿಗೀಡಾದರು. ಹಾಗಾದ್ರೆ ಈಗ ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿಯನ್ನು ಬಂಧಿಸ್ತಾರಾ ಎಂದು ಪ್ರಶ್ನಿಸುವ ಮೂಲಕ ಪೊಲೀಸರ ನಡೆಯನ್ನು ಟೀಕಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ನಟ ಅಲ್ಲು ಅರ್ಜುನ್ ವಿಷಾದ ವ್ಯಕ್ತಪಡಿಸಿ ಮೃತ ಮಹಿಳೆ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಇದಲ್ಲದೆ ಮಕ್ಕಳ ಶಿಕ್ಷಣ ಸೇರಿದಂತೆ ಆರ್ಥಿಕ ಸಹಾಯವನ್ನು ಮಾಡುವುದಾಗಿಯೂ ನಟ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದರು.