'ಬಿಗ್' ಮನೆಯಿಂದ ಹೊರಹೋಗಿಲ್ಲ ಮಂಗಳೂರಿನ ರಕ್ಷಿತಾ!? ಒಂದೇ ದಿನಕ್ಕೆ ಎಲಿಮಿನೇಟ್​ ಹೇಗೆ? ಹೀಗಿದೆ ವೀಕ್ಷಕರ ಅಭಿಪ್ರಾಯ | BBK 12

ವಿಜಯವಾಣಿ
Published on

BBK 12: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಜನಪ್ರಿಯತೆ ಗಳಿಸಿರುವ ಬಿಗ್​ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ದೂರಿ ಚಾಲನೆ ದೊರೆಕಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಸುದೀಪ್ ಅವರೇ ನಡೆಸಿಕೊಡುತ್ತಿದ್ದು, ಈ ಬಾರಿ ಬಿಗ್ ಮನೆಯೊಳಗೆ 19 ಸ್ಪರ್ಧಿಗಳನ್ನು ಕಳುಹಿಸಿದ್ದಾರೆ. ಆರಂಭದಲ್ಲಿ ಇದು ವೀಕ್ಷಕರ ಕುತೂಹಲ ಹೆಚ್ಚಿಸಿದ್ದೇ ಆದರೂ ಇದೀಗ ಶಾಕಿಂಗ್ ಟ್ವಿಸ್ಟ್​ಗಳನ್ನು ಕಂಡು ಅಕ್ಷರಶಃ ಗೊಂದಲಕ್ಕೀಡಾಗಿದ್ದಾರೆ.

ಮೊದಲ ದಿನವೇ ಎಲಿಮಿನೇಷನ್ ಶಾಕ್​ ಕೊಟ್ಟ ಬಿಗ್ ಬಾಸ್​, ಎರಡನೇ ದಿನಕ್ಕೆ ಮೆಗಾ ಟ್ವಿಸ್ಟ್​ ಕೊಟ್ಟಿದ್ದಾರೆ. ಬಿಗ್​ಬಾಸ್​ ಕನ್ನಡ ಇತಿಹಾಸದಲ್ಲೇ ಇದು ಮೊದಲು ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು. ಮನೆಯಿಂದ ಯಾರಾದರೂ ಒಬ್ಬರನ್ನು ಒಮ್ಮತದಿಂದ ಮನೆ ಮಂದಿಯೆಲ್ಲ ಸೇರಿ ಹೊರ ಕಳಿಸಬೇಕು ಎಂದು ಬಿಗ್ ಬಾಸ್​ ಸೂಚಿಸಿದ್ದರು. ಅಂತೆಯೇ ಸ್ಪಂದನಾ, ಮಲ್ಲು ಮತ್ತು ರಕ್ಷಿತಾ ಶೆಟ್ಟಿ ಪೈಕಿ ಮಂಗಳೂರಿನ ರಕ್ಷಿತಾಗೆ ಗೇಟ್​ಪಾಸ್​ ನೀಡಲಾಯಿತು. ಸದ್ಯ ಇದು ವೀಕ್ಷಕರ ಅಚ್ಚರಿಗೆ ಕಾರಣವಾಗಿದೆ.

ಈ ಹಿಂದಿನ ಬಿಗ್ ಬಾಸ್​ ಸೀಸನ್​ಗಳಲ್ಲಿ ಮನೆಯೊಳಗೆ ಬಂದ ಸ್ಪರ್ಧಿಗಳು ಒಂದು ವಾರ ಪೂರೈಸಿದ ಬಳಿಕ ಜನರ ಮತಗಳ ಆಧಾರದ ಮೇರೆಗೆ ಎಲಿಮಿನೇಟ್​ ಆಗುತ್ತಿದ್ದರು. ಈ ಒಂದು ವಾರದಲ್ಲಿ ಆ ಸ್ಪರ್ಧಿಗೆ ಮನೆಯವರೊಂದಿಗೆ ಮತ್ತು ವೀಕ್ಷಕರಿಗೆ ಇನ್ನಷ್ಟು ಪರಿಚಯವಾಗಲು ಸಮಯವಾದರೂ ಸಿಗುತ್ತಿತ್ತು. ಆದರೆ, 12ನೇ ಆವೃತ್ತಿಯಲ್ಲಿ ಇದಕ್ಕೆ ಅವಕಾಶವೇ ಇಲ್ಲ. 2ನೇ ದಿನಕ್ಕೆ ರಕ್ಷಿತಾರನ್ನು ಮನೆಯವರ ನಿರ್ಧಾರದ ಮೇಲೆ ಎಲಿಮಿನೇಟ್​ ಮಾಡಿರುವುದು ಹಲವರಿಗೆ ಅಸಮಾಧಾನ ತಂದಿದೆ. ಇದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಹೊರಹಾಕಿದ್ದಾರೆ.

ಈ ಬಾರಿಯ ಬಿಗ್ ಬಾಸ್​ ಸಾಕಷ್ಟು ಟ್ವಿಸ್ಟ್​ಗಳಿಂದ ಕೂಡಿರುವ ಹಿನ್ನೆಲೆ ರಕ್ಷಿತಾ ಇನ್ನೂ ಮನೆಯಿಂದ ಹೊರಹೋಗಿಲ್ಲ. ಅವರನ್ನು ಅಧಿಕೃತವಾಗಿ ಎಲಿಮಿನೇಟ್​ ಮಾಡಿಲ್ಲ. ಸುಮ್ಮನೆ ಪ್ರ್ಯಾಂಕ್ ಮಾಡಲಾಗುತ್ತಿದೆ. ಈ ವಾರದ ಮೊದಲ ಕಿಚ್ಚನ ಪಂಚಾಯಿತಿಯಲ್ಲಿ ಅವರು ರೀ-ಎಂಟ್ರಿ ಕೊಡಬಹುದು ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಈ ಮಧ್ಯೆ, ರಕ್ಷಿತಾ ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಸ್ವತಃ ಕಲರ್ಸ್​ ಕನ್ನಡ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್​ ಮಾಡಿದೆ. ಇದನ್ನು ನೋಡಿದರೆ, ಅವರು ವಾಪಾಸ್​ ಬರುವುದು ಬಹುತೇಕ ಅನುಮಾನ ಎಂಬುದು ಖಚಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net