

ಶಿವಮೊಗ್ಗ: ನಗರದ ಗುಂಡಪ್ಪ ಶೆಡ್‌ನ ರಾಮರಾವ್ ಬಡಾವಣೆಯ ತುಂಗಾ ನದಿ ತಟದ ವಿಶಾಲ ಸೂರ್ಯ ಉದ್ಯಾನದಲ್ಲಿ ಪರೋಪಕಾರಂ ತಂಡದ ಪದಾಧಿಕಾರಿಗಳು ಭಾನುವಾರ ಬೆಳಗ್ಗೆ ರಕ್ಷಾ ಬಂಧನದ ಅಂಗವಾಗಿ ಗಿಡಗಳಿಗೆ ರಾಖಿ ಕಟ್ಟುವ ಮೂಲಕ ಅವುಗಳ ಆರೈಕೆ ಮತ್ತು ರಕ್ಷಣೆಯ ಸಂಕಲ್ಪ ಮಾಡಿದರು.
ಪರೋಪಕಾರಂನ ಎನ್.ಎಂ.ಶ್ರೀಧರ್ ಮಾತನಾಡಿ, ಈ ಪಾರ್ಕ್‌ನಲ್ಲಿ ವರ್ಷಗಳ ಹಿಂದೆ ಪರೋಪಕಾರಂನಿಂದ ಹಲವು ಜಾತಿಯ ಗಿಡಗಳನ್ನು ನೆಟ್ಟಿದ್ದು, ಅವು ವೃಕ್ಷಗಳಾಗಿ ಬೆಳೆದಿವೆ. ಈ ವೃಕ್ಷಗಳು ಹಾಗೂ ಗಿಡಗಳಿಗೆ ರಾಖಿ ಕಟ್ಟಿ ಅವುಗಳನ್ನು ರಕ್ಷಣೆ ಮಾಡಬೇಕೆನ್ನುವ ಭಾವ ಬಿತ್ತುವ ಪ್ರಯತ್ನ ಇದಾಗಿದೆ ಎಂದರು.
ಶ್ರಾವಣ ಹುಣ್ಣಿಮೆಯಂದು ರಕ್ಷಾ ಬಂಧನದ ಸೊಬಗು ಅರಳುತ್ತದೆ. ಸಹೋದರತ್ವದ ಬಾಂಧವ್ಯಕ್ಕೆ ಮೆರುಗು ನೀಡುತ್ತದೆ. ಸಹೋದರನ ಆರೋಗ್ಯ, ಆಯುಷ್ಯವನ್ನು ಸಹೋದರಿ ಬಯಸಿದರೆ, ಸಹೋದರಿಯನ್ನು ಸದಾ ಕಾಲ ರಕ್ಷಿಸುವ ಮತ್ತು ಪ್ರೀತಿಸುವ ಭರವಸೆಯನ್ನು ಸಹೋದರ ನೀಡುತ್ತಾನೆ. ಅಂತೆಯೇ ಪ್ರಕೃತಿಯೊಂದಿಗೂ ಮನುಷ್ಯ ಅವಿನಾಭಾವ ಸಂಬಂಧ ಹೊಂದಿದ್ದಾನೆ. ಪ್ರಕೃತಿಯನ್ನು ಪೂಜಿಸಿದರಷ್ಟೇ ಸಾಲದು ಅದನ್ನು ಸಂರಕ್ಷಿಸುವುದು ಅಗತ್ಯ ಎಂದು ತಿಳಿಸಿದರು.
ಅನಿಲ್ ಹೆಗಡೆ, ಎಂ.ಶ್ರೀಕಾಂತ್, ಕೃಷ್ಣಮೂರ್ತಿ, ಅಶೋಕ್, ಎನ್.ಎಂ.ಲೀಲಾಬಾಯಿ, ಅಪ್ಪಣ್ಣ ಗಸ್ತಿ, ರಫಿಕ್ ಖಾನ್, ವಚನಾ ಜಗದೀಶ್, ಬಿ.ಕೆ.ನಾಗರಾಜ್, ಎನ್.ರೇಣುಕಾ, ಕಾವೇರಿ ಐ. ಬಿರಾದಾರ್, ವಿದ್ಯಾರ್ಥಿಗಳಾದ ವಿಜಯ ಕಾರ್ತಿಕ್, ವೈಶಾಖಾ, ಪ್ರಶಾಂತ್, ಚರಿತಾ, ಪ್ರಿಯಾಂಕಾ, ಜಯಂತ್, ಎನ್.ಮನು, ಸಾಯಿ ಸಮರ್ಥ್ ಇತರರಿದ್ದರು.