

ಮುಂಬೈ: ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಹೆಚ್ಚಿನ ತಾಪಮಾನದಿಂದಾಗಿ ಈ ವರ್ಷ ಟೊಮ್ಯಾಟೊ ಉತ್ಪಾದನೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಬೆಲೆ ಏರಿಕೆಗೂ ಇದೇ ಕಾರಣವಾಗಿದೆ. ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಟೊಮ್ಯಾಟೊ ಸಾಮಾನ್ಯವಾಗಿ ದುಬಾರಿಯಾಗುತ್ತವೆ.
ಆದರೆ ಈ ವರ್ಷದ ಬೆಲೆ ಏರಿಕೆ ಕಂಡು ಸಾಮಾನ್ಯ ಜನರು ಬೆಚ್ಚಿಬಿದ್ದಿದ್ದಾರೆ. ಟೊಮ್ಯಾಟೊಗಾಗಿ ಜನ ಕಳ್ಳತನ ಮಾಡುತ್ತಿರುವುದು, ಪೊಲೀಸ್ ಠಾಣೆ ಮೆಟ್ಟಿಲೇರುತ್ತಿರುವ ವಿಚಾರ ನಿಮಗೂ ಗೊತ್ತಿರುವುದೇ. ಆದರೆ ಇದೆಲ್ಲದರ ಮಧ್ಯೆ ನಟಿ ರಾಖಿ ಸಾವಂತ್ “ಟೊಮ್ಯಾಟೊ ವೇಸ್ಟ್” ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ರಾಖಿ ಪಾಟ್ನಲ್ಲಿ ಟೊಮ್ಯಾಟೊ ಸುರಿದು ಅದರ ಮೇಲೆ ಮಣ್ಣು ಹಾಕಿ ಗಿಡ ನೆಡುವುದನ್ನು ಕಾಣಬಹುದು.
ಈ ವಿಡಿಯೋ ನೋಡಿದ ಬಳಕೆದಾರರು "ಆಕೆ ಮೆಂಟಲ್ ಆಗಿದ್ದಾಳೆ. ಜನರು ದರ ಮತ್ತು ಆಹಾರದ ಬಗ್ಗೆ ಉದ್ವಿಗ್ನರಾಗಿದ್ದರೆ ರಾಖಿ ಕೇವಲ ವಿಡಿಯೋಗೋಸ್ಕರ ಆಹಾರವನ್ನು ವ್ಯರ್ಥ ಮಾಡುತ್ತಿದ್ದಾಳೆ" ಎಂದು ಕಿಡಿಕಾರಿದ್ದಾರೆ.
ಕಳೆದ ತಿಂಗಳು, ಸಾವಂತ್ ಅವರನ್ನು ಬಲವಂತವಾಗಿ ಚುಂಬಿಸಿದ ಆರೋಪದ ಮೇಲೆ ಗಾಯಕ ಮಿಕಾ ಸಿಂಗ್ ವಿರುದ್ಧ 2006 ರಲ್ಲಿ ದಾಖಲಾಗಿದ್ದ ಎಫ್‌ಐಆರ್ ಮತ್ತು ಚಾರ್ಜ್‌ಶೀಟ್ ಅನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದ ನಂತರ ರಾಖಿ ಹೆಚ್ಚು ಸುದ್ದಿಯಾಗಿದ್ದರು.
ರಾಖಿ ಸಾವಂತ್ ಅವರ ಒಪ್ಪಿಗೆಯೊಂದಿಗೆ ಎಫ್‌ಐಆರ್ ಮತ್ತು ಚಾರ್ಜ್‌ಶೀಟ್ ಅನ್ನು ರದ್ದುಗೊಳಿಸಲಾಗಿದೆ. ರಾಖಿಯ ವಕೀಲರು ಅರ್ಜಿಯನ್ನು ವಿರೋಧಿಸದ ಹಿನ್ನೆಲೆಯಲ್ಲಿ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ಆದೇಶಿಸಿದೆ.
ಮುಂಬೈ ಉಪನಗರದಲ್ಲಿರುವ ರೆಸ್ಟೋರೆಂಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ಮಿಕಾ ರಾಖಿಯನ್ನು ಹಿಡಿದು ಬಲವಂತವಾಗಿ ಚುಂಬಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಮಿಕಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ದೌರ್ಜನ್ಯ) ಮತ್ತು 323 (ಹಲ್ಲೆ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.
ಈ ವರ್ಷದ ಏಪ್ರಿಲ್‌ನಲ್ಲಿ ಮಿಕಾ, ಪೊಲೀಸರು ಸಲ್ಲಿಸಿದ ಎಫ್‌ಐಆರ್ ಮತ್ತು ಆರೋಪಪಟ್ಟಿಯನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದರು.
ರಾಖಿ ಅವರು ಸಲ್ಲಿಸಿದ ಅಫಿಡವಿಟ್ ಅನ್ನು ಹೈಕೋರ್ಟ್ ಪರಿಶೀಲಿಸಿತು. ಅದರಲ್ಲಿ ರಾಖಿ ಮತ್ತು ಮಿಕಾ ತಮ್ಮ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.