ರಾಜ್ಯಸಭೆಗೆ ಬಿಜೆಪಿಯಲ್ಲಿ ಪೈಪೋಟಿ

BJP 1 download
Published on

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಗಮನಿಸಿದ ಬಳಿಕ ಮೂರನೇ ಅಭ್ಯರ್ಥಿಯನ್ನು ನಿಲ್ಲಿಸಬೇಕೇ ಬೇಡವೇ ಎಂಬ ಬಗ್ಗೆ ಬಿಜೆಪಿ ನಿರ್ಧರಿಸಲಿದೆ. ಬಿಜೆಪಿ ತನ್ನ ಸಂಖ್ಯಾಬಲದಿಂದ ಸುಲಭವಾಗಿ 2 ಸ್ಥಾನ ಗೆಲ್ಲಲು ಅವಕಾಶಗಳಿವೆ. ಆದರೆ ಮೂರನೇ ಸ್ಥಾನಕ್ಕೆ ಸ್ಪರ್ಧಿಸಿದರೆ ಮತಗಳು ಕಡಿಮೆ ಬೀಳಲಿದ್ದು, ಜೆಡಿಎಸ್- ಕಾಂಗ್ರೆಸ್ ಮತಬ್ಯಾಂಕ್​ಗೆ ಕೈ ಹಾಕಬೇಕಾಗುತ್ತದೆ. ಆದ್ದರಿಂದ 2 ಪಕ್ಷದಲ್ಲಿ ಮೈತ್ರಿ ಗೊಂದಲಗಳಿದ್ದರಷ್ಟೇ ನಿಲ್ಲಿಸುವುದು, ಇಲ್ಲದಿದ್ದರೆ 2 ಸ್ಥಾನಕ್ಕೆ ಸ್ಪರ್ಧಿಸಿ ಸುಲಭವಾಗಿ ಗೆಲ್ಲುವುದು ಎಂಬುದು ಬಿಜೆಪಿ ಲೆಕ್ಕಾಚಾರ.

ದೇವೇಗೌಡರ ಸ್ಪರ್ಧೆಗೆ ಆಗ್ರಹ ರಾಜ್ಯಸಭೆಯಲ್ಲಿ ನಿರಂತರ ಪ್ರಾತಿನಿಧ್ಯ ಉಳಿಸಿಕೊಳ್ಳಲು ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವ ಒತ್ತಡ ಜೆಡಿಎಸ್​ನಲ್ಲಿ ಹೆಚ್ಚುತ್ತಿದೆ. ಪ್ರಸ್ತುತ ವಿಧಾನಸಭೆ ಯಲ್ಲಿ ಜೆಡಿಎಸ್ 34 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್ ಜತೆ ಮೈತ್ರಿ ಸಾಧಿಸಿ 14 ಮತ ಪಡೆದರೆ ರಾಜ್ಯಸಭೆ ಪ್ರವೇಶ ಸಾಧ್ಯ. ಈಗಾಗಲೇ ಕಾಂಗ್ರೆಸ್ ವಿಧಾನ ಪರಿಷತ್​ಗೆ ಜೆಡಿಎಸ್ ಬೆಂಬಲ ಪಡೆದು ರಾಜ್ಯಸಭೆಗೆ ಗೌಡರನ್ನು ಬೆಂಬಲಿಸುವ ಬಗ್ಗೆ ಒಂದು ಸುತ್ತಿನ ಮಾತುಕತೆ ಮಾಡಿದ್ದು, ಡಿ.ಕೆ.ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗುತ್ತಿದೆ. ವಿಧಾನಪರಿಷತ್- ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆದರಷ್ಟೇ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯನ್ನು ಕಣಕ್ಕಿಳಿಸಲಿದೆ ಎನ್ನಲಾಗುತ್ತಿದೆ. ಆದಾಗ್ಯೂ ಕಾಂಗ್ರೆಸ್ ಹೈಕಮಾಂಡ್ ಹೇಗೆ ಸ್ಪಂದಿಸುತ್ತದೆ ಎಂಬುದು ನಿರ್ಣಾಯಕ. ದೇವೇಗೌಡರ ಸ್ಪರ್ಧೆಗೆ ಹೈಕಮಾಂಡ್ ಅವಕಾಶ ಕೊಡಬೇಕು ಎಂದು ಕೆ.ಎಚ್. ಮುನಿಯಪ್ಪ ಕೂಡ ಹೇಳಿದ್ದಾರೆ.

ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ, ನಟಿ ಮಾಳವಿಕಾ, ತೇಜಸ್ವಿನಿ ಅನಂತಕುಮಾರ್, ವಕೀಲ ಶಂಕರಪ್ಪ, ಪ್ರಭಾಕರ ಕೋರೆ, ರಮೇಶ್ ಕತ್ತಿ, ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಸೇರಿ ಅನೇಕರ ಹೆಸರು ರಾಜ್ಯಸಭೆಗ ಕೇಳಿ ಬರುತ್ತಿದೆ. ಪ್ರಕಾಶ್ ಶೆಟ್ಟಿ ಪರ ಕೆಲ ಸಚಿವರು, ರಾಜ್ಯದ ಮುಖಂಡರು ಬಲವಾದ ಲಾಬಿ ನಡೆಸಿದ್ದಾರೆ. ಹೈಕಮಾಂಡ್​ನ ಅಭ್ಯರ್ಥಿಯಾಗಿ ಬಹುತೇಕ ಮುರಳೀಧರ ರಾವ್ ಆಯ್ಕೆ ಆಗಬಹುದು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ರ್ಚಚಿಸಲು ಬಿಜೆಪಿ ಕೋರ್ ಕಮಿಟಿ ಜೂ. 6ಕ್ಕೆ ಸಭೆ ಸೇರಿ, ಸದ್ಯ ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆ ಬಗ್ಗೆ ರ್ಚಚಿಸಿ ಪಟ್ಟಿ ವರಿಷ್ಠರಿಗೆ ಕಳುಹಿಸುವ ಸಾಧ್ಯತೆಗಳಿವೆ. ವಿಧಾನಪರಿಷತ್ ಚುನಾವಣೆ ಘೋಷಣೆ ಬಳಿಕ ಮತ್ತೆ ಕೋರ್ ಕಮಿಟಿ ಸಭೆ ನಡೆಯಲಿದೆ ಎನ್ನಲಾಗಿದೆ.

ಎಂಟಿಬಿ, ಶಂಕರ್​ಗೆ ಅವಕಾಶ ಖಚಿತ?: ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆವ ಚುನಾವಣೆಯಲ್ಲಿ 4 ಸ್ಥಾನ ಗೆಲ್ಲಲು ಅವಕಾಶ ಇದ್ದು, ಆರ್.ಶಂಕರ್, ಎಂ.ಟಿ.ಬಿ. ನಾಗರಾಜ್​ಗೆ ಅವಕಾಶ ಖಚಿತ ಎನ್ನಲಾಗುತ್ತಿದೆ. ಉಪ ಚುನಾವಣೆಯಲ್ಲಿ ಎಂಟಿಬಿ ಸೋಲಿಗೆ ಪಕ್ಷದ ಮುಖಂಡರೇ ಕಾರಣವಾಗಿದ್ದರಿಂದ ಪರಿಷತ್​ನಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿದೆ. ಆದರೆ ವಿಶ್ವನಾಥ್​ಗೆ ಅವಕಾಶ ಇಲ್ಲ ಎನ್ನಲಾಗಿದೆ. ರಾಜ್ಯಸಭೆಗೆ ಅವಕಾಶ ಸಿಗದಿದ್ದರೆ ಶಂಕರಪ್ಪ, ಮಾಳವಿಕಾ ಹೆಸರನ್ನು ಪರಿಷತ್​ಗೂ ಪರಿಗಣಿಸುವ ಸಾಧ್ಯತೆಗಳಿವೆ. ಹಿಂದೆ ಸದಾನಂದಗೌಡ ಅವರಿಗಾಗಿ ಶಂಕರಪ್ಪ ಪರಿಷತ್ ಸದಸ್ಯ ಸ್ಥಾನ ತ್ಯಾಗ ಮಾಡಿದ್ದರು. ಹಿಂದೆ ಒಂದು ಅವಧಿಗೆ ಪರಿಷತ್ ಸದಸ್ಯರಾಗಿದ್ದ ಭಾರತಿ ಶೆಟ್ಟಿ, ಜಗ್ಗೇಶ್, ತಾರಾ, ಶಾಸಕರಾಗಿದ್ದ ನಿರ್ಮಲಕುಮಾರ್ ಸುರಾನ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಧ್ಯಮ ವಕ್ತಾರ ಎ.ಎಚ್. ಆನಂದ್ ಸೇರಿ ಅನೇಕರು ಪ್ರಯತ್ನಿಸಿದ್ದಾರೆ. ಹಿಂದೆ ಒಂದು ಅವಧಿಗೆ ಅವಕಾಶ ಪಡೆದವರಿಗೆ ಮತ್ತೊಂದು ಅವಧಿಗೆ ನೀಡದೆ ಹೊಸಬರಿಗೆ ಮನ್ನಣೆ ನೀಡಲಾಗುತ್ತದೆ ಎಂದೂ ಹೇಳಲಾಗುತ್ತಿದೆ.

ಕತ್ತಿಗೆ ಸಚಿವ ಸ್ಥಾನ ಖಚಿತ: ಇತ್ತೀಚೆಗೆ ಅತೃಪ್ತ ಶಾಸಕರ ಸಭೆ ನಡೆಸಿದ್ದ ಶಾಸಕ ಉಮೇಶ್ ಕತ್ತಿ, ಬುಧವಾರ ಬೆಳಗ್ಗೆಯೇ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ವಾಕಿಂಗ್ ವೇಳೆ ಭೇಟಿ ಮಾಡಿ ರ್ಚಚಿಸಿದರು. ಸಹೋದರ ರಮೇಶ್ ಕತ್ತಿಗೆ ಹಿಂದೆ ಭರವಸೆ ನೀಡಿದಂತೆ ರಾಜ್ಯಸಭೆ ಟಿಕೆಟ್ ನೀಡಲೇಬೇಕು ಎಂದರು. ಆದರೆ ರಾಜ್ಯಸಭೆಗೆ ಟಿಕೆಟ್ ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಮುಂದಿನ ಸಂಪುಟ ವಿಸ್ತರಣೆ ಯಲ್ಲಿ ಉಮೇಶ್​ಗೆ ಮಂತ್ರಿ ಸ್ಥಾನ ಖಚಿತ ಎಂಬ ಭರವಸೆ ನೀಡಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net