

ಬೆಂಗಳೂರು: ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಡಿಸೆಂಬರ್ 1 ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಬಿಜೆಪಿಯಿಂದ ರಾಜ್ಯಸಭೆ ಸದಸ್ಯರಾಗಿದ್ದ ಅಶೋಕ್ ಗಸ್ತಿ ಕರೊನಾ ಸೋಂಕಿನಿಂದ ಇತ್ತೀಚಿಗೆ ಮೃತಪಟ್ಟರು. ಪ್ರಮಾಣವಚನ ಸ್ವೀಕರಿಸಿದ್ದ ಗಸ್ತಿ, ಒಂದೇ ಒಂದು ಅಧಿವೇಶನದಲ್ಲೂ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಬಿಜೆಪಿಗೆ ತನ್ನ ಸಂಖ್ಯಾಬಲದ ಮೇಲೆ ಈ ಸ್ಥಾನಕ್ಕೆ ಆಯ್ಕೆ ಮಾಡಲು ಮಾತ್ರ ಅವಕಾಶವಿದೆ. ಹಾಗಾಗಿ ನ.5ರಂದು ಮಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ಹೆಸರು ಶಿಫಾರಸು ಮಾಡುವ ಸಾಧ್ಯತೆಗಳಿವೆ.
ಕಳೆದ ಬಾರಿ ಬಿಜೆಪಿ ಪಕ್ಷದ ಇಬ್ಬರು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ದೆಹಲಿ ಹೈಕಮಾಂಡ್ ಆಯ್ಕೆ ಮಾಡಿತ್ತು. ಈರಣ್ಣ ಕಾಡಾಡಿ ಮತ್ತು ಅಶೋಕ್ ಗಸ್ತಿ ಅವರನ್ನು ಆಯ್ಕೆ ಮಾಡಿ ರಾಜ್ಯ ಬಿಜೆಪಿಯಲ್ಲಿ ಅಚ್ಚರಿ ಮೂಡಿಸಿತ್ತು. ಈ ಬಾರಿ ಪಕ್ಷದ ಪ್ರಮುಖ ನಾಯಕರೇ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದು, ಹೈಕಮಾಂಡ್ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ.
ಚುನಾವಣಾ ದಿನಾಂಕದ ಮಾಹಿತಿ ಇಲ್ಲಿದೆ
ಅಧಿಸೂಚನೆ ಪ್ರಕಟ- ನವೆಂಬರ್ 11
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ನವೆಂಬರ್ 18
ನಾಮಪತ್ರ ಪರಿಶೀಲನೆ- ನವೆಂಬರ್ 19
ನಾಮಪತ್ರ ಹಿಂಪಡೆಯಲು ಕೊನೆಯ ದಿನ- ನವೆಂಬರ್ 23
ಮತದಾನ- ಡಿಸೆಂಬರ್ 1ರ ಬೆಳಗ್ಗೆ 9ರಿಂದ ಸಂಜೆ 4. ಅಂದು ಸಂಜೆ 5ಕ್ಕೆ ಮತಎಣಿಕೆ