ಸುಪ್ರೀಂಕೋರ್ಟ್‌ ಅಂಗಳಕ್ಕೆ ರಾಜಸ್ಥಾನದ ರಾಜಕೀಯ?

rajasthan
Published on

ನವದೆಹಲಿ: ರಾಜಸ್ಥಾನದ ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಆದೇಶಿಸಿ ವಿಚಾರಣೆ ಮುಂದೂಡಿರುವ ಬೆನ್ನಲ್ಲೇ ಇದರ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗಲು ಸ್ಪೀಕರ್ ಸಿ ಪಿ ಜೋಶಿ ನಿರ್ಧರಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ ಕಾಂಗ್ರೆಸ್ ಬಂಡಾಯ ನಾಯಕರ ವಿರುದ್ಧ ತೀರ್ಪನ್ನು ಸುಪ್ರೀಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಲಾಗಿದ್ದು, ಈ ಮೂಲಕ ರಾಜ್ಯ ಸರ್ಕಾರದಲ್ಲಿ ಉಂಟಾಗಿರುವ ಸಾಂವಿಧಾನಿಕ ಬಿಕ್ಕಟ್ಟನ್ನು ವಿಳಂಬ ಮಾಡದೆ ಶೀಘ್ರವೇ ಬಗೆಹರಿಸಲು ಮನವಿ ಮಾಡಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಸೇರಿದಂತೆ 19 ಮಂದಿ ಶಾಸಕರ ವಿರುದ್ಧ ಅನರ್ಹತೆ ನೋಟಿಸ್‌ ನೀಡಿದ್ದ ಸ್ಪೀಕರ್ ಸಿ.ಪಿ ಜೋಶಿ ಅವರು ಸದ್ಯ ಯಾವುದೇ ಕ್ರಮಕೈಗೊಳ್ಳಬಾರದು ಎಂದು ಹೈಕೋರ್ಟ್ ಆದೇಶಿಸಿ ವಿಚಾರಣೆ ಮುಂದೂಡಿದೆ. ಶುಕ್ರವಾರದವರೆಗೆ (ಜುಲೈ24) ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಅದು ನಿರ್ದೇಶಿಸಿದೆ. ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಸ್ಪೀಕರ್‌ ಮುಂದಾಗಿದ್ದಾರೆ.

ಇದನ್ನೂ ಓದಿ: ಸಚಿನ್ ಪೈಲಟ್​ ನಿಷ್ಪ್ರಯೋಜಕ…ಪಕ್ಷದ ಬೆನ್ನಿಗೇ ಚೂರಿ ಹಾಕಿದರು: ಅಶೋಕ್​ ಗೆಹ್ಲೋಟ್​

ಕ್ಷ ವಿರೋಧಿ ಚಟುವಟಿಕೆ ನಡೆಸುವ ಯಾವುದೇ ಶಾಸಕರ ವಿರುದ್ಧ ಏನೇನು ಕ್ರಮ ಕೈಗೊಳ್ಳಬಹುದು ಎಂದು ಇದಾಗಲೇ ಸುಪ್ರೀಂಕೋರ್ಟ್‌ ಬೇರೆ ಬೇರೆ ಪ್ರಕರಣಗಳಲ್ಲಿ ಹೇಳಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಶಾಸಕರಿಗೆ ನೋಟಿಸ್‌ ನೀಡುವ ಸಂಪೂರ್ಣ ಅಧಿಕಾರ ಕೂಡ ಸ್ಪೀಕರ್ ಅವರಿಗಿದೆ. ಸ್ಪೀಕರ್ ಅವರ ತೀರ್ಮಾನದ ನಂತರ ನ್ಯಾಯಾಂಗ ಅದನ್ನು ಪರಿಶೀಲನೆ ಮಾಡುವ ಅವಕಾಶ ಕಾನೂನಿನ ಅಡಿ ಇದೆ. ಇದರ ನಡುವೆಯೂ ಬಂಡಾಯ ಶಾಸಕರ ಅನರ್ಹತೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಅಪಾಯಕಾರಿ ನಡೆಯಾಗಿದೆ. ಇದು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುತ್ತದೆ, ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಜೋಶಿ ಹೇಳಿದ್ದಾರೆ.

ನಾಡಿದ್ದು ಹೈಕೋರ್ಟ್ ನೀಡಲಿರುವ ತೀರ್ಪು ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೊಟ್ ಸರ್ಕಾರ, ವಿಧಾನಸಭೆಯಲ್ಲಿ ಬಹುಮತ ಸಾಬೀತು ಮೇಲೆ ತೀವ್ರ ಪರಿಣಾಮ ಬೀರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net