ದಲೇರ್​ ಮೆಹಂದಿ ಪರ ಬ್ಯಾಟ್ ಬೀಸಿದ ರಾಜ್‌ಪಾಲ್ ಯಾದವ್; ಸಚಿವರ ಮಾತಿಗೆ ಖಡಕ್ ಟಾಂಗ್​! Daler Mehndi Controversy

ದಲೇರ್​ ಮೆಹಂದಿ ಅವರನ್ನು ವೇದಿಕೆಯಲ್ಲೇ ಪ್ರಶ್ನಿಸಿದ ಉತ್ತರಾಖಂಡ ಸಚಿವ ಸುಬೋಧ್ ಉನಿಯಾಲ್ ವಿರುದ್ಧ ನಟ ರಾಜ್‌ಪಾಲ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಯಕನ ಆರೋಗ್ಯದ ಸ್ಥಿತಿಯ ಬಗ್ಗೆಯೂ ಮಾತನಾಡಿರುವ ಅವರು, ಹಿರಿಯ ಕಲಾವಿದರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದ್ದಾರೆ.
 Daler Mehndi Controversy
ದಲೇರ್​ ಮೆಹಂದಿ ವಿವಾದ
Published on: 
Summary

ದಲೇರ್​ ಮೆಹಂದಿ ಬೆಂಬಲಕ್ಕೆ ನಿಂತ ನಟ ರಾಜ್‌ಪಾಲ್ ಯಾದವ್

ಸಚಿವರು ವೇದಿಕೆಯಲ್ಲಿ ಅಸಭ್ಯವಾಗಿ ಮಾತನಾಡುವುದು ಸರಿಯಲ್ಲ ಎಂದ ನಟ

ದಲೇರ್​ಮೆಹಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ

Rajpal Yadav and Daler Mehndi: ಖ್ಯಾತ ಪಂಜಾಬಿ ಗಾಯಕ ದಲೇರ್​ ಮೆಹಂದಿ ಅವರ ಪ್ರದರ್ಶನದ ವಿಚಾರವಾಗಿ ಉಂಟಾಗಿರುವ ವಿವಾದಕ್ಕೆ ಇದೀಗ ನಟ ರಾಜ್‌ಪಾಲ್ ಯಾದವ್ ಪ್ರತಿಕ್ರಿಯಿಸಿದ್ದಾರೆ. ಉತ್ತರಾಖಂಡ ಸಚಿವ ಸುಬೋಧ್ ಉನಿಯಾಲ್ ಅವರು ವೇದಿಕೆಯಲ್ಲೇ ಗಾಯಕನನ್ನು ಪ್ರಶ್ನಿಸಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಹಿರಿಯ ಕಲಾವಿದರಿಗೆ ಗೌರವ ನೀಡಬೇಕು ಎಂದು ಹೇಳಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ರಾಜ್‌ಪಾಲ್, ಡೇಲರ್ ಮೆಹಂದಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಕಲಾವಿದನಾಗಿ ಮಾತನಾಡುತ್ತಿದ್ದೇನೆ ಎಂದಿರುವ ರಾಜ್‌ಪಾಲ್ ಯಾದವ್, ದಶಕಗಳಿಂದ ಜನರನ್ನು ರಂಜಿಸಿರುವ ಖ್ಯಾತ ಗಾಯಕನ ಬಗ್ಗೆ ಸಚಿವರು ನೋವುಂಟುಮಾಡುವ ರೀತಿಯಲ್ಲಿ ಮಾತನಾಡಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಲೆಯನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ. ಕಲೆ ಎಂದರೆ ಜೀವನ, ಅದಕ್ಕೆ ಗೌರವ ನೀಡಬೇಕು ಎಂದು ಅವರು ಹೇಳಿದ್ದಾರೆ.

ದಲೇರ್​ ಮೆಹಂದಿ ಮದ್ಯ ಸೇವಿಸುವುದಿಲ್ಲ

ದಲೇರ್​ ಮೆಹಂದಿ ಅವರ ಆರೋಗ್ಯದ ಬಗ್ಗೆಯೂ ರಾಜ್‌ಪಾಲ್ ಯಾದವ್ ಮಾತನಾಡಿದ್ದಾರೆ. ಗಾಯಕ ಅನಾರೋಗ್ಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ಕೆಲವರು ನೆರವಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

‘ವೆಲ್‌ಕಮ್ ಟು ದಿ ಜಂಗಲ್’ ಸಿನಿಮಾದಲ್ಲಿ ಡೇಲರ್ ಮೆಹಂದಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರು ಮದ್ಯ ಸೇವಿಸುವುದಿಲ್ಲ ಎಂಬುದು ನನಗೆ ಗೊತ್ತು ಎಂದು ರಾಜ್‌ಪಾಲ್ ಹೇಳಿದ್ದಾರೆ. ಅಧಿಕಾರ ಮತ್ತು ಸ್ಥಾನಮಾನಗಳು ಶಾಶ್ವತವಲ್ಲ, ಆದರೆ ಕಲೆಗೆ ಸದಾ ಉನ್ನತ ಸ್ಥಾನವಿದೆ. ಹೀಗಾಗಿ ಕಲಾವಿದರನ್ನು ಗೌರವಿಸಬೇಕು ಎಂದು ಸಚಿವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ದಲೇರ್​ ಮೆಹಂದಿ ಕಾರ್ಯಕ್ರಮದಲ್ಲಿ ನಡೆದಿದ್ದೇನು?

ಉತ್ತರಾಖಂಡದ ನ್ಯೂ ತೆಹ್ರಿಯಲ್ಲಿ ಭಾನುವಾರ ರಾತ್ರಿ ನಡೆದ ಸಿದ್ಧಪೀಠ್ ಮಾ ಕುಂಜಾಪುರಿ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಮೇಳದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡೇಲರ್ ಮೆಹಂದಿ ಪ್ರದರ್ಶನ ನೀಡಿದ್ದರು. ಈ ವೇಳೆ ವೇದಿಕೆಗೆ ಬಂದ ಸಚಿವ ಸುಬೋಧ್ ಉನಿಯಾಲ್, ಗಾಯಕನ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಸರಿಯಾಗಿ ಮಾತನಾಡಲೂ ಆಗುತ್ತಿಲ್ಲ, ಇನ್ನು ಹೇಗೆ ಹಾಡುತ್ತೀರಿ?’ ಎಂದು ಸಚಿವರು ಪ್ರಶ್ನಿಸಿದ್ದರು. ಇದರಿಂದ ಗಾಯಕ ಮದ್ಯದ ಅಮಲಿನಲ್ಲಿದ್ದರೇ ಎಂಬ ಚರ್ಚೆಯೂ ಶುರುವಾಗಿತ್ತು.

ನವರಾತ್ರಿ ಕಾರ್ಯಕ್ರಮದಲ್ಲಿ ಪ್ರದರ್ಶನ

ನಂತರ ಮಾತನಾಡಿದ ಸಚಿವರು, ನವರಾತ್ರಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ದಲೇರ್​ ಮೆಹಂದಿ ಅವರಿಗೆ 35 ಲಕ್ಷ ರೂಪಾಯಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಗಾಯಕ ವೇದಿಕೆಯಲ್ಲಿ ಗೊಂದಲದಲ್ಲಿದ್ದಂತೆ ಕಂಡುಬಂದರು ಮತ್ತು ಲೈವ್ ಹಾಡುವ ಬದಲು ಹಾಡುಗಳಿಗೆ ತುಟಿ ಚಲಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Fact Check: ಎಮ್ಮೆ ಹೊಟ್ಟೆಯಲ್ಲಿ ಹಸುವಿನ ಕರು ಹುಟ್ಟಿದ್ಯಾ? ಈ ಅಚ್ಚರಿ ಘಟನೆಯ ಹಿಂದಿನ ಸತ್ಯವೇನು?

ಈ ವಿವಾದದ ಬೆನ್ನಲ್ಲೇ ಹಲವು ಚಿತ್ರರಂಗದ ಗಣ್ಯರು ದಲೇರ್​ ಮೆಹಂದಿ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ರಾಜ್‌ಪಾಲ್ ಯಾದವ್ ಕೂಡ ಗಾಯಕನ ಪರವಾಗಿ ಮಾತನಾಡಿದ್ದು, ಕಲಾವಿದರ ಗೌರವದ ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net