ಹೊಸ ಸಿಎಂ ಆಯ್ಕೆ ವೀಕ್ಷಕರ ಹೆಗಲಿಗೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮನೋಹರ್ ಲಾಲ್ ಖಟ್ಟರ್​ಗೂ ಸ್ಥಾನ

BJP Leaders
Published on

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ರಾಜ್ಯಗಳಲ್ಲಿನ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಬಿಜೆಪಿ ವೀಕ್ಷಕರನ್ನು ನೇಮಕ ಮಾಡಿದೆ. ಈ ಮೂಲಕ ಮೂರು ರಾಜ್ಯಗಳ ಸಿಎಂ ಆಯ್ಕೆ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ತಲುಪಿರುವ ಲಕ್ಷಣಗಳು ಗೋಚರಿಸಿವೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸರೋಜ್ ಪಾಂಡೆ, ವಿನೋದ್ ತಾವ್ಡೆ ಅವರನ್ನು ರಾಜಸ್ಥಾನ ಸಿಎಂ ಆಯ್ಕೆಗೆ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಒಬಿಸಿ ಮೋರ್ಚಾ ಮುಖ್ಯಸ್ಥ ಕೆ.ಲಕ್ಷ್ಮಣ್, ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಕ್ರಾ ಅವರನ್ನು ಮಧ್ಯಪ್ರದೇಶ ಸಿಎಂ ಆಯ್ಕೆ ಕುರಿತು ವೀಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಛತ್ತೀಸ್​ಗಢದ ಮುಖ್ಯಮಂತ್ರಿ ಆಯ್ಕೆ ಸಂಬಂಧ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಸರ್ಬಾನಂದ ಸೊನೊವಾಲ್ ಮತ್ತು ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಈ ಎಲ್ಲ ವೀಕ್ಷಕರು ಆಯಾ ರಾಜ್ಯಗಳಿಗೆ ತೆರಳಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಯ ನೇತೃತ್ವ ವಹಿಸಲಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿರುವ ವಸುಂಧರಾ ರಾಜೇಗೆ ಆಪ್ತರಾಗಿರುವ ರಾಜನಾಥ್ ಸಿಂಗ್ ಅವರನ್ನು ರಾಜಸ್ಥಾನ ಸಿಎಂ ಆಯ್ಕೆಗೆ ವೀಕ್ಷಕರಾಗಿ ನೇಮಿಸಿರುವುದು ಗಮನ ಸೆಳೆದಿದೆ.

ಮಿಜೋರಾಂ ನೂತನ ಮುಖ್ಯಮಂತ್ರಿ ಪ್ರಮಾಣ

ಐಜಾಲ್: ಮಿಜೋರಾಂ ನೂತನ ಮುಖ್ಯಮಂತ್ರಿಯಾಗಿ ಜೋರಂ ಪೀಪಲ್ಸ್ ಮೂವ್​ವೆುಂಟ್ (ಜೆಡ್​ಪಿಎಂ) ಪಕ್ಷದ ನಾಯಕ ಲಾಲ್​ದುಹೊಮಾ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲಾಲ್​ದುಹೊಮಾ ಜತೆ ಹನ್ನೊಂದು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಜೆಡ್​ಪಿಎಂ ಶಾಸಕಾಂಗ ಪಕ್ಷವು ಮಂಗಳವಾರ ಲಾಲ್​ದುಹೊಮಾ ತಮ್ಮ ನಾಯಕ ಹಾಗೂ ಕೆ. ಸಪ್ದಂಗ ಉಪ ನಾಯಕ ಎಂದು ಆಯ್ಕೆ ಮಾಡಿತ್ತು.

ಮಾಜಿ ಸಿಎಂ ಕೆಸಿಆರ್ ಆಸ್ಪತ್ರೆಗೆ ದಾಖಲು

ಹೈದರಾಬಾದ್: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ತೆಲಂಗಾಣದ ಎರ›ವಲ್ಲಿ ಎಂಬಲ್ಲಿ ಇರುವ ತಮ್ಮ ಫಾಮರ್್​ಹೌಸ್​ನಲ್ಲಿ ತಂಗಿದ್ದರು. ಪಕ್ಷದ ನಾಯಕರ ಜತೆ ಸಭೆ, ಕಾರ್ಯಕರ್ತರನ್ನು ಭೇಟಿ ಆಗುವ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದರು ಎನ್ನಲಾಗಿದ್ದು, ಗುರುವಾರ ರಾತ್ರಿ ಬಿದ್ದು ಗಾಯಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net