ಸರ್ವಪಕ್ಷ ಸಭೆ; ಪ್ರಧಾನಿ ಮಾತನಾಡುವಾಗ ಅಡ್ಡಿಪಡಿಸದಂತೆ ಪ್ರತಿಪಕ್ಷಗಳಿಗೆ ರಾಜನಾಥ್​ ಸಿಂಗ್​ ಮನವಿ

Untitled-design-48
Published on

ನವದೆಹಲಿ: ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಸಂಸತ್ತಿನಲ್ಲಿ ಯಾವುದೇ ಸದಸ್ಯರು ಮಾತನಾಡುವಾಗ ನಾವು ಮಧ್ಯಪ್ರವೇಶಿಸಬಾರದು ಮತ್ತು ಅಡ್ಡಿಪಡಿಸಬಾರದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ವಪಕ್ಷ ಸಭೆಯಲ್ಲಿ ಮನವಿ ಮಾಡಿದರು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ(ಜುಲೈ 21) ಹೇಳಿದ್ದಾರೆ.

ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ರಾಷ್ಟ್ರಪತಿಗಳಿಗೆ ಧನ್ಯವಾದ ನಿರ್ಣಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಡ್ಡಿಪಡಿಸಲಾಯಿತು. ಇದು ಸಂಸತ್ತಿನ ಸಂಪ್ರದಾಯಕ್ಕೆ ಸರಿಹೊಂದುವುದಿಲ್ಲ. ಪ್ರಧಾನಿ ಮಾತನಾಡುವಾಗ ಸದನ ಮತ್ತು ದೇಶ ಕೇಳಬೇಕು. ಅಲ್ಲದೆ ಯಾವುದೇ ಸಂಸದರು ಮಾತನಾಡುವಾಗ ಮಧ್ಯಪ್ರವೇಶಿಸದೆ ಅವರ ಮಾತನ್ನು ಕೇಳಬೇಕೆಂದು ಸಲಹೆ ನೀಡಿದರು ಎಂದು ಅವರು ತಿಳಿಸಿದರು.

ಸಂಸತ್ತಿನ ಕಲಾಪಕ್ಕೆ ಒಮ್ಮತ ಮೂಡಿಸುವ ವಿಚಾರವಾಗಿ ಈ ಸಭೆ ನಡೆದಿದೆ. ಕೇಂದ್ರ ಸಚಿವ ರಾಜನಾಥ್​​ ಸಿಂಗ್​​ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಭೆಯನ್ನು ಆಯೋಜಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್‌ನ ಜೈರಾಮ್ ರಮೇಶ್ ಮತ್ತು ಕೆ.ಸುರೇಶ್, ಎಐಎಂಐಎಂನ ಅಸಾದುದ್ದೀನ್ ಓವೈಸಿ, ಆರ್‌ಜೆಡಿಯ ಅಭಯ್ ಕುಶ್ವಾಹ, ಜೆಡಿಯು ಸಂಜಯ್ ಝಾ, ಎಎಪಿಯ ಸಂಜಯ್ ಸಿಂಗ್, ಎಸ್‌ಪಿ ನಾಯಕ ರಾಮಗೋಪಾಲ್ ಯಾದವ್ ಮತ್ತು ಎನ್‌ಸಿಪಿಯ ಪ್ರಫುಲ್ ಪಟೇಲ್ ಉಪಸ್ಥಿತರಿದ್ದರು.

ಬಿಜೆಪಿ ಸೇರಿದಂತೆ ಒಟ್ಟು 44 ರಾಜಕೀಯ ಪಕ್ಷಗಳ 55 ನಾಯಕರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು. ಬಜೆಟ್ ಅಧಿವೇಶನಕ್ಕೆ ಸಂಬಂಧಿಸಿದಂತೆ ಹಲವು ಉತ್ತಮ ಸಲಹೆಗಳನ್ನೂ ನಾಯಕರು ನೀಡಿದ್ದಾರೆ. ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಸಮಸ್ಯೆಗಳನ್ನು ಮಂಡಿಸಿವೆ. ಉಭಯ ಸದನಗಳ ಬಿಎಸಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಎಲ್ಲ ವಿಷಯಗಳ ಕುರಿತು ಚರ್ಚಿಸಿ, ಲೋಕಸಭೆಯಲ್ಲಿ ಸ್ಪೀಕರ್ ಮತ್ತು ರಾಜ್ಯಸಭೆಯಲ್ಲಿ ಸಭಾಪತಿಯೊಂದಿಗೆ ಚರ್ಚಿಸಿ, ಸದನದಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net