ರಾಜಕುಮಾರ್ ಪಾಟೀಸವಾಲು: ವಕೀಲ ಉಜ್ವಲ್ ನಿಕಂ ಬಯೋಪಿಕ್‌ನಲ್ಲಿ ಬಾಲಿವುಡ್ ನಟ

ರಾಜಕುಮಾರ್ ರಾವ್​
ರಾಜಕುಮಾರ್ ರಾವ್​
Published on

ಪ್ರಮುಖ ಮುಖ್ಯಾಂಶಗಳು

  • ಬ್ಯಾಕ್ ಟು ಬ್ಯಾಕ್ ಬಯೋಪಿಕ್ ನಲ್ಲಿ ರಾಜಕುಮಾರ್ ರಾವ್​
  • ಉಜ್ವಲ್​ ನಿಕಂ ಅವತಾದಲ್ಲಿ ಶಾಹಿದ್ ಹೀರೋ
  • ಟೀಸರ್ ನಲ್ಲಿ ವಾದ-ವಿವಾದಕ್ಕಿಳಿದ ಬಾಲಿವುಡ್ ನಟ
‘ಶಾಹಿದ್’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ಬಾಲಿವುಡ್ ನಟ ರಾಜಕುಮಾರ್ ರಾವ್ ಬ್ಯಾಕ್ ಟು ಬ್ಯಾಕ್ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪಾತ್ರದಲ್ಲಿ ರಾಜ್ ಕಾಣಿಸಿಕೊಳ್ಳುತ್ತಿದ್ದು, ಕೆಲ ದಿನಗಳ ಹಿಂದೆಯಷ್ಟೇ ಚಿತ್ರದ ಫಸ್ಟ್-ಲುಕ್ ರಿವೀಲ್ ಮಾಡಲಾಗಿತ್ತು. ಈ ಮಧ್ಯೆ ಅವರು ಮತ್ತೊಂದು ಜೀವನಾಧಾರಿತ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದು, ತೆರೆಗೆ ಬರಲು ಸಿದ್ಧತೆ ನಡೆಸಿದ್ದಾರೆ. ಆ ಚಿತ್ರದ ಹೆಸರು ‘ಪ್ರಹಾರ್’. ಹಿರಿಯ ವಕೀಲ, ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2008ರ ನ.26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ಮಾಡಿದಾಗ ಸೆರೆಸಿಕ್ಕ ಉಗ್ರ ಅಜ್ಮಲ್ ಕಸಬ್ ವಿರುದ್ಧ ಉಜ್ವಲ್ ವಾದ ಮಾಡಿ, ಆತನ ಮರಣದಂಡನೆಗೆ ಕಾರಣವಾಗಿದ್ದರು. ಇಂತಹ ಗಟ್ಟಿ ವಕೀಲರ ಪಾತ್ರದಲ್ಲಿ ರಾಜಕುಮಾರ್ ರಾವ್ ಇದ್ದಾರೆ. ಈಗಾಗಲೇ ರಿಲೀಸ್ ಮಾಡಿರುವ ಟೀಸರ್‌ನಲ್ಲೂ ಕಪ್ಪು ಕೋಟ್ ಧರಿಸಿ, ವಾದಕ್ಕಿಳಿದಿದ್ದಾರೆ. ಈ ಕೋರ್ಟ್ ರೂಮ್ ಡ್ರಾಮಾಕ್ಕೆ ‘ಪಾತಾಳ್ ಲೋಕ್’ ಖ್ಯಾತಿಯ ಅವಿನಾಶ್ ಅರುಣ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ರಾಜಕುಮಾರ್ ರಾವ್ ಜತೆಗೆ ವಾಮಿಕಾ ಗಾಬ್ಬಿ, ಜೈದೀಪ್ ಅಹ್ಲಾವತ್, ಸಿಕಂದರ್ ಖೇರ್ ಕಲಾಬಳಗದಲ್ಲಿದ್ದಾರೆ. ಇದೇ ಆಗಸ್ಟ್ 7ಕ್ಕೆ ‘ಪ್ರಹಾರ್’ ರಿಲೀಸ್ ಆಗಲಿದೆ. -ಏಜೆನ್ಸೀಸ್

ಯಾರೀ ಉಜ್ವಲ್?

ಮೂಲತಃ ಮಹಾರಾಷ್ಟ್ರದ ಜಲ್ಗಾಂವ್‌ನವರಾದ ವಕೀಲ ಉಜ್ವಲ್ ನಿಕಂ ಕ್ರಿಮಿನಲ್ ಲಾಯರ್‌ಆಗಿ ಕಾರ್ಯನಿರ್ವಹಿಸಿದ್ದಾರೆ. 30 ವರ್ಷಗಳ ಸೇವೆಯಲ್ಲಿ ಹಲವು ಹೈಪ್ರೊಫೈಲ್ ಪ್ರಕರಣಗಳಲ್ಲಿ ವಾದ ಮಂಡಿಸಿ ಗೆದ್ದಿದ್ದಾರೆ. ಪ್ರಮೋದ್ ಮಹಾಜನ್ ಹತ್ಯೆ ಮಾಡಿದವರಿಗೆ ಜೀವವಾಧಿ, 26/11 ಭಯೋತ್ಪಾದಕ ದಾಳಿ ನೇತೃತ್ವ ವಹಿಸಿದ್ದ ಉಗ್ರ ಅಜ್ಮಲ್ ಕಸಬ್‌ಗೆ ಮರಣದಂಡನೆಗೆ ಶಿಕ್ಷೆ ಕೊಡಿಸಲು ವಾದ ಮಂಡಿಸಿದವರು ಇದೇ ಉಜ್ವಲ್ ನಿಕಂ. ತಮ್ಮ ವೃತ್ತಿ ಜೀವನದಲ್ಲಿ ಅವರು 628 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 37 ಅಪರಾಧಿಗಳಿಗೆ ಮರಣದಂಡನೆ ಆಗುವಂತೆ ವಾದ ಮಂಡಿಸಿದ್ದಾರೆ. ಉಜ್ವಲ್ ಸೇವೆ ಮೆಚ್ಚಿ ಕೇಂದ್ರ ಸರ್ಕಾರವು 2016ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಸದ್ಯ ಅವರು ಕಾನೂನು ಕ್ಷೇತ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net