

ನಂಜನಗೂಡು: ತಾಲೂಕಿನ ಕಸುವಿನಹಳ್ಳಿ ಮತ್ತು ಕುರಿಹುಂಡಿ ಗ್ರಾಮಗಳಲ್ಲಿ ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರಗಳ ನೂತನ ಕಟ್ಟಡಗಳನ್ನು ಶಾಸಕ ಬಿ.ಹರ್ಷವರ್ಧನ್ ಗುರುವಾರ ಉದ್ಘಾಟಿಸಿದರು.
ಕಸುವಿನಹಳ್ಳಿ ಗ್ರಾಮದಲ್ಲಿ 17 ಲಕ್ಷ ರೂ. ಹಾಗೂ ಕುರಿಹುಂಡಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಕೇವಲ 3 ತಿಂಗಳ ಅವಧಿಯಲ್ಲಿ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. ಸಾರ್ವಜನಿಕರು ಈ ಕೇಂದ್ರಗಳ ಸದುಪಯೋಗ ಪಡೆಯಬೇಕು ಎಂದು ಅವರು ಹೇಳಿದರು.
ಕರೊನಾ ಪಿಡುಗಿನಿಂದಾಗಿ ಸರ್ಕಾರ ಹೊಸ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕಡಿತಗೊಳಿಸಿದೆ. ಆದಗ್ಯೂ ಸಚಿವರ ಮನವೊಲಿಸಿ, ಅನುದಾನವನ್ನು ಬಿಡುಗಡೆಗೊಳಿಸುತ್ತಿದ್ದೇನೆ. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ಮನವಿ ಮಾಡಿ ಹಲ್ಲರೆ ಗ್ರಾಮದ ಮಠದ ಕಾಮಗಾರಿ ಪೂರ್ಣಗೊಳಿಸುತ್ತೇನೆ. ಜತೆಗೆ, ಅರ್ಧದಲ್ಲೇ ನಿಂತಿರುವ ಹೆಡಿಯಾಲ ಭಾಗದ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಬಳಿಕ ಹಲ್ಲರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ಮತ್ತು ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ಶಾಸಕ ಹರ್ಷವರ್ಧನ ವಿತರಿಸಿದರು.
ಜಿಪಂ ಸದಸ್ಯರಾದ ಮಂಗಳಾ ಸೋಮಶೇಖರ್, ಮಧು ಸುಬ್ಬಣ್ಣ, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಸದಸ್ಯರಾದ ಹೆಮ್ಮರಗಾಲ ಸೋಮಣ್ಣ, ಬಸವರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಮಹೇಶ್, ಮುಖಂಡರಾದ ಕೆಂಡಗಣ್ಣಪ್ಪ, ಪುಟ್ಟಸ್ವಾಮಿ, ರಜಾಕ್, ಕಸುವಿನಹಳ್ಳಿ ಗ್ರಾಪಂ ಅಧ್ಯಕ್ಷ ಮಂಜುನಾಥ್, ಕುರಿಹುಂಡಿ ಗ್ರಾಪಂ ಅಧ್ಯಕ್ಷೆ ಸಾಕಮ್ಮ, ಪಿಡಿಒ ಮಹದೇವಸ್ವಾಮಿ, ತಾಪಂ ಇಒ ಶ್ರೀಕಂಠರಾಜೇ ಅರಸ್ ಇತರರು ಭಾಗವಹಿಸಿದ್ದರು.