

ಚೆನ್ನೈ: ಸಿರುತೈ ಶಿವ ನಿರ್ದೇಶನದ ಸೂರ್ಯ ಅಭಿನಯದ ಕಂಗುವಾ ಸಿನಿಮಾ ನವೆಂಬರ್ 14ರಂದು ಬಿಡುಗಡೆಯಾಗಲಿದೆ. ಕಳೆದ ಎರಡೂವರೆ ವರ್ಷದಿಂದ ಸೂರ್ಯ ಅಭಿನಯದ ಸಿನಿಮಾ ಬಿಡುಗಡೆಯಾಗದ ಕಾರಣ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಇತ್ತೀಚೆಗೆ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಮಾರಂಭದಲ್ಲಿ ನಟ ಸೂರ್ಯ, ನಿರ್ದೇಶಕ ಶಿವ, ನಟ ಬಾಬಿ ಡಿಯೋಲ್, ಮದನ್ ಕರ್ಕಿ, ನಟ ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು. (Rajinikanath)
ಕಂಗುವಾ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಸೂಪರ್ಸ್ಟಾರ್ ರಜನಿಕಾಂತ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಆದರೆ ಕೂಲಿ ಸಿನಿಮಾದ ಶೂಟಿಂಗ್ ಕಮಿಟ್ಮೆಂಟ್ನಿಂದಾಗಿ ಖುದ್ದು ಹಾಜರಾಗಲು ಸಾಧ್ಯವಾಗದೇ ಇರುವುದಕ್ಕೆ ರಜನಿಕಾಂತ್ ವಿಷಾದ ವ್ಯಕ್ತಪಡಿಸಿದರು. ಬದಲಾಗಿ ರಜನಿಕಾಂತ್ ಅವರು ಸೂರ್ಯ ಹಾಗೂ ಇಡೀ ಕಂಗುವ ತಂಡಕ್ಕೆ ಉತ್ತಮ ಯಶಸ್ಸನ್ನು ಬಯಸಿ ಹೃತ್ಪೂರ್ವಕ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ.
ವಿಡಿಯೋದಲ್ಲಿ ರಜನಿಕಾಂತ್ ಅವರು, ಈ ಹಿಂದೆ 2021ರಲ್ಲಿ ಅಣ್ಣಾತ್ತೆ ಸಿನಿಮಾ ಮಾಡುವಾಗಲೇ ಶಿವ ಬಳಿ ನನಗಾಗಿ ನೀವು ಪಿರಿಯಾಡಿಕ್ ಕಥೆಯೊಂದನ್ನು ಮಾಡಿ. ಆ ರೀತಿ ಸಿನಿಮಾ ಮಾಡಿದರೆ ಬಹಳ ಚೆನ್ನಾಗಿರುತ್ತದೆ. ನಮ್ಮಿಬ್ಬರ ಕಾಂಬಿನೇಷನ್ನಲ್ಲಿ ಮಾಡೋಣ ಎಂದು ಹೇಳಿದ್ದೆ. ಅದರ ಬಗ್ಗೆ ಯೋಚಿಸುವುದಾಗಿ ಶಿವ ಭರವಸೆ ನೀಡಿದ್ದರು. ಕಂಗುವಾ ನನಗಾಗಿ ಅಭಿವೃದ್ಧಿಪಡಿಸಿದ ಕಥೆ ಎಂಬುದು ಖಚಿತವಾಗಿದೆ. ಶಿವ ಆ ಕಥೆಯನ್ನು ಜ್ಞಾನವೇಲ್ ರಾಜಾ ಅವರಿಗೆ ಹೇಳಿರಬಹುದು. ಆಗ ಅವರು ಸರ್ ಈ ಕಥೆ ಬಹಳ ಚೆನ್ನಾಗಿದೆ ಸ್ವಲ್ಪ ಬದಲಾಯಿಸಿ ನಾವೇ ಮಾಡೋಣ ಎಂದು ಹೇಳಿ ಸೂರ್ಯನನ್ನು ಆಯ್ಕೆ ಮಾಡಿರಬಹುದು ಎಂದು ಹೇಳಿದ್ದಾರೆ. ನನಗಾಗಿ ಶಿವ ಇನ್ನೊಂದು ಕಥೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ನಟ ಸೂರ್ಯ ಕುರಿತು ಮಾತನಾಡಿದ ತಲೈವಾ, ಅವರ ತಂದೆ ಶಿವಕುಮಾರ್ ಅವರ ಶಿಸ್ತು, ಬುದ್ಧಿವಂತಿಕೆ ಮತ್ತು ಶ್ರೇಷ್ಠ ಮೌಲ್ಯಗಳನ್ನು ನಟ ಸೂರ್ಯ ಆನುವಂಶಿಕವಾಗಿ ಪಡೆದಿದ್ದಾರೆ. ಸೂರ್ಯ ಅವರಿಗೆ ವಿಶಿಷ್ಟವಾದ ಸಿನಿಮಾಗಳನ್ನು ಮಾಡುವ ಆಸೆ ಇದೆ. ಕಮರ್ಷಿಯಲ್ ಚಿತ್ರಗಳಲ್ಲಿಯೂ ಅವರು ಹೊಸತನವನ್ನು ಹುಡುಕುತ್ತಾರೆ. ಕಂಗುವಾ ಚಿತ್ರಕ್ಕೆ ಭರ್ಜರಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಶುಭ ಹಾರೈಸಿದರು.(ಏಜೆನ್ಸೀಸ್)