

ಚೆನ್ನೈ: ಬೆಳಗ್ಗೆಯಿಂದ ಎಡೆಬಿಡದೆ ಧಾರಾಕಾರವಾಗಿ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ಜಲಾವೃತವಾಗಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಚೆನ್ನೈ ನಗರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಜನಸಾಮಾನ್ಯರು ಹಾಗೂ ಸೆಲೆಬ್ರಿಟಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡು ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಹಲವು ಸಂಸ್ಥೆಗಳು ಬುಧವಾರ ಮನೆಯಿಂದಲೇ ಕೆಲಸ ಮಾಡಲು ಆದೇಶ ಹೊರಡಿಸಿವೆ.
ರಜನಿಕಾಂತ್ ಅವರ ಪೋಯಸ್ ಗಾರ್ಡನ್ ನಿವಾಸವೂ ( Rajinikanth House) ಪ್ರವಾಹದಲ್ಲಿ ಸಿಲುಕಿದೆ. ತಗ್ಗು ಪ್ರದೇಶದಲ್ಲಿ ಮನೆ ಇರುವುದರಿಂದ ಆವರಣದ ತುಂಬೆಲ್ಲಾ ನೀರು ತುಂಬಿಕೊಂಡಿತ್ತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ವಿಡಿಯೋದಲ್ಲಿ ರಜನಿಕಾಂತ್ ಅಥವಾ ಅವರ ಕುಟುಂಬ ಸದಸ್ಯರು ಕಾಣಿಸಿಕೊಂಡಿಲ್ಲ. ರಜನಿಕಾಂತ್ ಅವರ ಮನೆ ಪ್ರವಾಹದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. ಈ ಹಿಂದೆ ಚೆನ್ನೈನಲ್ಲಿ ಭಾರಿ ಮಳೆಯಾದಾಗಲೆಲ್ಲಾ ಸೂಪರ್‌ಸ್ಟಾರ್ ಮನೆಗೆ ನೀರು ನುಗ್ಗುತ್ತಿತ್ತು.
ರಜನಿಕಾಂತ್ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಟ್ಟೆ ನೋವಿನಿಂದಾಗಿ ಕೆಲ ದಿನ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚೆಗಷ್ಟೇ ಡಿಸ್ಚಾರ್ಜ್ ಆಗಿ ಮನೆ ತಲುಪಿದೆ. ಕೆಲ ದಿನಗಳ ವಿಶ್ರಾಂತಿಯ ನಂತರ ರಜನಿ ಮತ್ತೆ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇದೆಯಂತೆ.