ರಾಜೇಶ್​ ಖನ್ನಾ ತಲೆಯಲ್ಲಿ ಅದೇ... ಬಾಲಿವುಡ್​ ದಿಗ್ಗಜ ನಟನ ಬಗ್ಗೆ ಮೌಶುಮಿ ಚಟರ್ಜಿ ಶಾಕಿಂಗ್ ಹೇಳಿಕೆ

ರಾಜೇಶ್​ ಖನ್ನಾ ಮತ್ತು ಮೌಶುಮಿ ಚಟರ್ಜಿ
ರಾಜೇಶ್​ ಖನ್ನಾ ಮತ್ತು ಮೌಶುಮಿ ಚಟರ್ಜಿ
Published on
ಮುಂಬೈ: 70-80ರ ದಶಕದಲ್ಲಿ ಬಾಲಿವುಡ್​ನ ಆಳಿದ ಹಿರಿಯ ನಟಿ ಮೌಶುಮಿ ಚಟರ್ಜಿ, ತಮ್ಮ ಬಹುಪಾಲು ಸಿನಿಮಾಗಳನ್ನು ಅಮಿತಾಭ್​ ಬಚ್ಚನ್​ ಮತ್ತು ರಾಜೇಶ್​ ಖನ್ನಾರಂತಹ ಸ್ಟಾರ್​ ನಟರೊಂದಿಗೆ ಅಭಿನಯಿಸಿದ್ದಾರೆ. ಆ ಕಾಲಕ್ಕೆ ಸೂಪರ್​ಹಿಟ್​ ಚಿತ್ರಗಳನ್ನು ನೀಡಿದ ನಟಿ ಹಲವು ವರ್ಷಗಳ ಬಳಿಕ ತಮ್ಮ ಸಹ ನಟನ ಬಗ್ಗೆ ಒಂದಷ್ಟು ಅಚ್ಚರಿ ಸಂಗತಿಗಳನ್ನು ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಹಿಂದಿ ಚಿತ್ರೋದ್ಯಮದ ಮೊದಲ ಸೂಪರ್‌ಸ್ಟಾರ್ ಎಂದೇ ಕರೆಯಲ್ಪಡುವ ರಾಜೇಶ್ ಖನ್ನಾ ಅವರಿಗೆ ಸಿಕ್ಕಾಪಟ್ಟೆ ಮಹಿಳಾ ಅಭಿಮಾನಿಗಳಿದ್ದರು. ಆ ಮಟ್ಟಿಗೆ ಅವರು ತಮ್ಮ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದ್ದರು. ಈ ಕುರಿತಾಗಿ ಮಾತನಾಡಿದ ಮೌಶುಮಿ ಚಟರ್ಜಿ, ಖನ್ನಾರನ್ನು ಒಬ್ಬ ಹಾಳಾದ ಯುವಕ ಎಂದು ಹೇಳುವ ಮೂಲಕ ಸಿನಿಪ್ರಿಯರನ್ನು ಅಚ್ಚರಿಗೊಳಿಸಿದ್ದಾರೆ.
ಉತ್ತುಂಗದಲ್ಲಿದ್ದ ಸ್ಟಾರ್​ ಹೀರೋಗೆ ಸ್ಟಾರ್​ಡಮ್ ಒಂದೆಡೆಯಾದರೆ, ಭಾರೀ ವಿವಾದಗಳು ಮತ್ತೊಂದೆಡೆ. ಇದರಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಅವರು, ಕೊನೆ ಕ್ಷಣಗಳಲ್ಲಿ ಏಕಾಂಗಿಯಾಗಿದ್ದರು ಎನ್ನಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಸ್ಟಾರ್​ ಹೀರೋ ಜೊತೆಗಿನ ಸಿನಿ ಪಯಣದ ಅನುಭವಗಳನ್ನು ಮೆಲುಕು ಹಾಕಿದ ಚಟರ್ಜಿ, ಖನ್ನಾ ಒಬ್ಬ ಹಾಳಾದ ಹುಡುಗ. ಅವರ ತಲೆಯಲ್ಲಿ ಸದಾ ಸಕ್ಸಸ್​ ಎಂಬುದೇ ತುಂಬಿತ್ತು ಎಂದಿದ್ದಾರೆ. 
ಖನ್ನಾ ಅವರು ಏಕಾಂಗಿಯಾಗಿದ್ದ ಸಮಯವನ್ನು ನೋಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹಿರಿಯ ನಟಿ, "ಇಲ್ಲ, ಇದೆಲ್ಲವೂ ಕರ್ಮ. ನೀವು ನಿಮ್ಮ ಜೀವನವನ್ನು ಹೇಗೆ ನೋಡಿಕೊಳ್ಳುತ್ತೀರಿ ಎಂಬುದರ ಮೇಲಿರುತ್ತೆ. ಎಲ್ಲಾ ಸಂಬಂಧಗಳಿಗೆ ನೀವ್ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತೀರಿ ಅನ್ನೋದು ಮುಖ್ಯ. ನಿಮ್ಮ ಒಂಟಿ ಸಮಯವನ್ನು ಹೇಗೆ ಆನಂದಿಸಬೇಕೆಂದು ನಿಮಗೆ ಗೊತ್ತಿರಬೇಕು ಎಂದರು.
ನಾನು ನನ್ನ ಒಂಟಿತನವನ್ನು ಎಂಜಾಯ್​ ಮಾಡ್ತಿದ್ದೇನೆ. ಏಕಾಂಗಿ ಅನ್ನೋ ಭಾವನೆಯಲ್ಲಿ ಬದುಕಬೇಡಿ. ಪ್ರತಿಯೊಬ್ಬರೂ ಜೀವನದಲ್ಲಿ ಇಂತಹ ಸಂದರ್ಭಗಳನ್ನು ಎದುರಿಸುತ್ತಾರೆ. ಕಿಶೋರ್ ಕುಮಾರ್, ಮಧುಬಾಲಾ ಇವರಲ್ಲಿ ಯಾರನ್ನಾದರೂ ತೆಗೆದುಕೊಳ್ಳಿ, ಅವರೆಲ್ಲರೂ ಇಂತಹ ಸನ್ನಿವೇಶಗಳನ್ನು ನೋಡಿದ್ದಾರೆ. ಏನು ನಡೆಯುತ್ತಿದೆಯೋ ಅದು ನಿಮ್ಮ ಜೀವನದ ಒಂದು ಭಾಗವಷ್ಟೇ. ಅದೇ ಸಂಪೂರ್ಣ ಜೀವನವಲ್ಲ ಎಂದು ಹೇಳಿದ್ದಾರೆ.
ಪ್ರೇಮ್ ಬಂಧನ್ (1979) ಮತ್ತು ಅನುರಾಗ್ (1972), ಭೋಲಾ ಭಲಾ (1978), ಹಮ್ಶಕಲ್ (1974), ಘರ್ ಪರಿವಾರ (1991) ಸೇರಿದಂತೆ ಇನ್ನೂ ಒಂದಷ್ಟು ಚಿತ್ರಗಳಲ್ಲಿ ರಾಜೇಶ್ ಖನ್ನಾ ಮತ್ತು ಮೌಶುಮಿ ಚಟರ್ಜಿ ಒಟ್ಟಿಗೆ ಅಭಿನಯಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net