ಬಂಡೆದ್ದ ಶಾಸಕರಿಗೆ ಅನರ್ಹತೆ ಭೀತಿ: ಪೈಲಟ್ ಸಹಿತ 19 ಎಂಎಲ್​ಎಗಳಿಗೆ ನೋಟಿಸ್ ನೀಡಿದ ಸ್ಪೀಕರ್ ಜೋಶಿ

Rajasthan
Published on

ಜೈಪುರ: ಪಕ್ಷದ ವಿರುದ್ಧ ಬಂಡಾಯ ಎದ್ದಿರುವುದು ಹಾಗೂ ಎರಡು ಬಾರಿ ಪಕ್ಷದ ಶಾಸಕಾಂಗ ಸಭೆಗೆ ಗೈರಾಗಿರುವ ಸಚಿನ್ ಪೈಲಟ್ ಹಾಗೂ 18 ಶಾಸಕರಿಗೆ ರಾಜಸ್ಥಾನದ ವಿಧಾನಸಭೆ ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದು, ಇನ್ನೆರಡು ದಿನದಲ್ಲಿ ಇದಕ್ಕೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ. ಬಂಡಾಯ ಶಾಸಕರ ಸದಸ್ಯತ್ವ ರದ್ದು ಮಾಡಬೇಕು ಎಂದು ಕಾಂಗ್ರೆಸ್ ಮಾಡಿದ ಮನವಿ ಹಿನ್ನೆಲೆಯಲ್ಲಿ ಸ್ಪೀಕರ್ ಈ ನೋಟಿಸ್ ಜಾರಿ ಮಾಡಿದ್ದಾರೆ.

ಸಚಿನ್ ಪೈಲಟ್ ತಮ್ಮ ಬೆಂಬಲಿಗ ಶಾಸಕರ ಜತೆ ದೆಹಲಿಗೆ ತೆರಳಿದ ಬಳಿಕ ಎರಡು ಬಾರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿತ್ತು. ಇದರಲ್ಲಿ ಹಾಜರಾಗುವಂತೆ ಎಲ್ಲ ಶಾಸಕರಿಗೆ ವಿಪ್ ನೀಡಿದಂತೆ ಪೈಲಟ್ ಹಾಗೂ ಅವರ ಬೆಂಬಲಿಗ ಶಾಸಕರಿಗೂ ವಿಪ್ ಜಾರಿ ಮಾಡಲಾಗಿತ್ತು. ಆದರೆ ಎರಡೂ ಸಭೆಗೆ ಅವರು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಸಂವಿಧಾನದ 10ನೇ ಪರಿಚ್ಛೇದ ಅನ್ವಯ ಕ್ರಮ ಜರುಗಿಸುವಂತೆ ಕಾಂಗ್ರೆಸ್​ನ ಮುಖ್ಯ ಸಚೇತಕ ಮಹೇಶ್ ಜೋಶಿ ಸ್ಪೀಕರ್​ಗೆ ಮನವಿ ಮಾಡಿದ್ದರು.

ಬಂಡಾಯ ಶಾಸಕರು ಕಾಂಗ್ರೆಸ್ ಸರ್ಕಾರ ವಿರುದ್ಧ ಉದ್ದೇಶಪೂರ್ವಕವಾಗಿ ಪಿತೂರಿ ನಡೆಸಿದ್ದಾರೆ. ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಭ್ರಷ್ಟಾಚಾರ ಹಾಗೂ ಅಕ್ರಮ ಮಾರ್ಗದಿಂದ ಸರ್ಕಾರವನ್ನು ಉರುಳಿಸಲು ಯತ್ನಿಸಲಾಗುತ್ತಿದೆ. ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯತ್ನಿಸಿದ ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಚೇತಕ ಮಹೇಶ್ ಜೋಶಿ ಸ್ಪೀಕರ್ ಸಿ.ಪಿ. ಜೋಶಿ ಅವರಿಗೆ ದೂರು ನೀಡಿದ್ದಾರೆ.

ಪೈಲಟ್​ಗೆ ಪಕ್ಷದ ಬಾಗಿಲು ತೆರೆದಿದೆ

ಸಿಎಂ ಗೆಹ್ಲೋಟ್ ವಿರುದ್ಧ ಮುನಿಸಿಕೊಂಡಿರುವ ಸಚಿನ್ ಪೈಲಟ್ ಮನವೊಲಿಕೆ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮುಂದುವರಿಸಿದ್ದಾರೆ. ಪೈಲಟ್​ಗೆ ಕಾಂಗ್ರೆಸ್ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಅವರು ಬಿಜೆಪಿಯ ಬಲೆಗೆ ಬೀಳುವುದಿಲ್ಲ ಎಂಬ ನಂಬಿಕೆ ಇದೆ. ವಾಸ್ತವತೆಯ ಅರಿವಾಗಿ ಅವರು ವಾಪಸ್ ಪಕ್ಷಕ್ಕೆ ಬರುವ ನಂಬಿಕೆ ಇದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ, ರಾಜಸ್ಥಾನ ಉಸ್ತುವಾರಿ ಅವಿನಾಶ ಪಾಂಡೆ ತಿಳಿಸಿದ್ದಾರೆ.

ಸಚಿನ್​ಗೆ ರಾಷ್ಟ್ರೀಯ ನಾಯಕತ್ವ?

ಬಂಡಾಯದ ಹೊರತಾಗಿಯೂ, ತಾವು ಕಾಂಗ್ರೆಸ್ ತೊರೆದಿಲ್ಲ ಎಂದು ಸಚಿನ್ ಪೈಲಟ್ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಈವರೆಗೆ ಪೈಲಟ್ ವಿರುದ್ಧ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಈಗಿರುವ ಸ್ಥಿತಿಯಲ್ಲಿ ಅವರಿಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸುವುದು ಕಷ್ಟ. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಜವಾಬ್ದಾರಿ ನೀಡಲು ದೆಹಲಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪೈಲಟ್ ಮನವೊಲಿಕೆ ಕಾರ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸ್ಪೀಕರ್ ನೀಡಿರುವ ನೋಟಿಸ್ ಕಾನೂನು ಬಾಹಿರ. ಇದಕ್ಕೆ ನಾವು ಸೂಕ್ತ ಉತ್ತರ ಕೊಡುತ್ತೇವೆ. ವಕೀಲರ ಜತೆ ಸಮಾಲೋಚನೆ ನಡೆಸಿ, ಕಾನೂನು ಹೋರಾಟ ನಡೆಸುತ್ತೇವೆ. ನಾವು ಇನ್ನೂ ಪಕ್ಷದಲ್ಲೇ ಇದ್ದೇವೆ. ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. | ಸಚಿನ್ ಪೈಲಟ್ ಬೆಂಬಲಿತ ಶಾಸಕರ ಪ್ರತಿಕ್ರಿಯೆ

ಕೈ ಸಂಪರ್ಕದಲ್ಲಿ ಬಂಡಾಯ ಶಾಸಕರು ಸಿಎಂ ಗೆಹ್ಲೋಟ್ ವಿರುದ್ಧದ ಬಂಡಾಯ ತುಸು ತಣ್ಣಗಾಗುವ ಲಕ್ಷಣ ಗೋಚರಿಸಿದೆ. ಪೈಲಟ್ ಪಾಳಯದಲ್ಲಿರುವ ಕೆಲ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದು, ಇನ್ನು ಒಂದೆರಡು ದಿನದಲ್ಲಿ ಅವರು ಮರಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಬಹುಮತಕ್ಕೆ ಅಗತ್ಯವಾದ ಶಾಸಕರು ತಮ್ಮ ಬಳಿ ಇದ್ದಾರೆ ಎಂದು ಸಿಎಂ ಗೆಹ್ಲೋಟ್ ಮತ್ತೆ ಸ್ಪಷ್ಟ ಪಡಿಸಿದ್ದಾರೆ.

ಶಾಸಕರ ಖರೀದಿಗೆ ಯತ್ನ ನಡೆದಿರುವ ಬಗ್ಗೆ ಸಾಕ್ಷಿ್ಯದೆ. ಸದ್ಯದಲ್ಲೇ ಇದನ್ನು ಬಹಿರಂಗ ಪಡಿಸಲಾಗುತ್ತದೆ. ಸರ್ಕಾರವನ್ನು ಉರುಳಿಸಲು ಶಾಸಕರ ಖರೀದಿಯಲ್ಲಿ ತೊಡಗಿದ್ದ ಬಿಜೆಪಿ ಜತೆಗೆ ಸಚಿನ್ ಪೈಲಟ್ ಕೈಜೋಡಿಸಿದ್ದರು. ಈಗ ನಮ್ಮ ಶಾಸಕರನ್ನು ರಕ್ಷಿಸಿಕೊಳ್ಳದಿದ್ದರೆ ಮಧ್ಯಪ್ರದೇಶದಂತೆ ಇಲ್ಲೂ ಸರ್ಕಾರ ಬದಲಾಗಲಿದೆ. | ಅಶೋಕ್ ಗೆಹ್ಲೋಟ್ ರಾಜಸ್ಥಾನ ಸಿಎಂ

ಪೈಲಟ್​ಗೆ ಪರೋಕ್ಷ ಚಾಟಿ

ಪಕ್ಷ ತ್ಯಜಿಸಲು ಬಯಸಿದವರು, ಹೊರಹೋಗ ಬಹುದು. ಇದರಿಂದ ಅನೇಕ ಯುವ ನಾಯಕರು ಪಕ್ಷಕ್ಕೆ ಬರಲು ಅವಕಾಶವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್ ಪೈಲಟ್ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಅವರಿಗೆ ಸಂದೇಶ ರವಾನಿಸಿದ್ದಾರೆ. ಪೈಲಟ್ ಬಗ್ಗೆ ರಾಹುಲ್ ಮೃದು ಧೋರಣೆ ಹೊಂದಿದ್ದಾರೆ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ರಾಹುಲ್ ಈ ಹೇಳಿಕೆ ಮಹತ್ವ ಪಡೆದಿದೆ.

ಬಿಹಾರದ ಕಾಂಗ್ರೆಸ್ ಶಾಸಕರು ಜೆಡಿಯುಗೆ?

ಪಟನಾ: ರಾಜಸ್ಥಾನದಲ್ಲಿ ಬಂಡಾಯ ಬಿಸಿ ಎದುರಿಸುತ್ತಿರುವ ಕಾಂಗ್ರೆಸ್​ಗೆ ಬಿಹಾರದಲ್ಲೂ ಹಿನ್ನಡೆ ಉಂಟಾಗಿದೆ. ಈ ವರ್ಷದ ಅಂತ್ಯದಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹಲವು ಕಾಂಗ್ರೆಸ್ ಶಾಸಕರು, ನಾಯಕರು ಜೆಡಿಯು ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜೆಡಿಯು ಪ್ರಮುಖರ ಜತೆ ಈಗಾಗಲೇ ಮಾತುಕತೆ ನಡೆಯುತ್ತಿದೆ. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ವಲಸೆ ಪರ್ವ ಆರಂಭವಾಗಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಇಬ್ಬರು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. 2015ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 27 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಆಗ ನಿತೀಶ್ ಕುಮಾರ್ ಮಹಾಮೈತ್ರಿ ನಾಯಕತ್ವ ವಹಿಸಿದ್ದರು. ಕಾಂಗ್ರೆಸ್ ಇಷ್ಟು ಸ್ಥಾನ ಗೆಲ್ಲಲು ನಿತೀಶ್ ಪ್ರಭಾವ ಪ್ರಮುಖ ಪಾತ್ರ ವಹಿಸಿತ್ತು. ಈಗ ಕಾಂಗ್ರೆಸ್ ಸ್ಥಿತಿ ರಾಜ್ಯದಲ್ಲಿ ಬಲವಾಗಿಲ್ಲದ ಕಾರಣ ಕಾಂಗ್ರೆಸ್​ನ 15ಕ್ಕೂ ಹೆಚ್ಚು ಶಾಸಕರು, ನಾಯಕರು ಜೆಡಿಯುಗೆ ಗುಳೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net