ಕರೊನಾ ಹೋಗಲಿ ಎಂದು ಸಾವಿರಾರು ಮಹಿಳೆಯರಿಂದ ಪೂಜೆ! ವೈರಲ್​ ಆಯ್ತು ವಿಡಿಯೋ

poojy
Published on

ಅಹಮದಾಬಾದ್​: ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸಾರ್ವಜನಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡದಂತೆ ಬಹುತೇಕ ರಾಜ್ಯಗಳು ಆದೇಶ ಹೊರಡಿಸಿವೆ. ಆದರೆ ಅದನ್ನೆಲ್ಲ ಗಾಳಿಗೆ ತೂರಿದ ಗ್ರಾಮವೊಂದು ಕರೊನಾ ಹೋಗಲಿ ಎನ್ನುವ ನಿಟ್ಟಿನಲ್ಲಿ ಸಾವಿರಾರು ಮಹಿಳೆಯರನ್ನು ಸೇರಿಸಿ ಪೂಜೆ ಮಾಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

ಗುಜರಾತ್​ನ ಸನಂದ ತಾಲೂಕಿನ ನವಪುರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಕರೊನಾ ಬೇಗ ಹೋಗಲಿ ಎನ್ನುವ ಕಾರಣಕ್ಕೆ ಅಲ್ಲಿನ ಸರ್​ಪಂಚ್​ ಮೇ 3ಕ್ಕೆ ದೊಡ್ಡ ಪೂಜೆ ನಡೆಸಿದ್ದಾರೆ. ಸಾವಿರಾರು ಮಹಿಳೆಯರು ಮಾಸ್ಕ್​ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ತಲೆ ಮೇಲೆ ಕೊಡ ಹೊತ್ತು ದೇವಸ್ಥಾನಕ್ಕೆ ಮೆರವಣಿಗೆ ಬಂದಿದ್ದಾರೆ. ಒಂದಿಷ್ಟು ಹುಡುಗರು ಆ ಕೊಡದ ನೀರನ್ನು ತೆಗೆದು ದೇವಸ್ಥಾನಕ್ಕೆ ಎರೆದಿದ್ದಾರೆ. ಮೆರವಣಿಗೆಯಲ್ಲಿ ದೊಡ್ಡ ಸೌಂಡ್ ಸಿಸ್ಟಮ್​ ಅಳವಡಿಕೆ ಮಾಡಿದ್ದು ವಿಡಿಯೋದಲ್ಲಿ ಕಾಣಬಹುದು.

ಗ್ರಾಮದಲ್ಲಿ ಈ ರೀತಿಯ ಕಾರ್ಯಕ್ರಮವೊಂದು ನಡೆಯುತ್ತಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸರ್​ಪಂಚ್​ ಸೇರಿ 23 ಜನರನ್ನು ವಶಕ್ಕೆ ಪಡೆಯಲಾಗಿದೆ. ಸೌಂಡ್​ ಸಿಸ್ಟಮ್​ ಅನ್ನೂ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net