

ಜೈಪುರ: ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಕಾಂಗ್ರೆಸ್ ಶಾಸಕ, ಬಾಬುಲಾಲ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜತೆ ಸಾಕಷ್ಟು ಗುರುತಿಸಿಕೊಂಡಿರುವ ಬಾಬುರಾವ್, ಇತರ ಶಾಸಕರೊಂದಿಗೆ ಇಲ್ಲಿನ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರು.
ಸಚಿನ್ ಪೈಲಟ್ ನೇತೃತ್ವದಲ್ಲಿ 18 ಶಾಸಕರು ಮುಖ್ಯಮಂತ್ರಿ ವಿರುದ್ಧ ಬಂಡಾಯ ಎದ್ದ ಹಿಂದೆಯೇ ಮುಖ್ಯಮಂತ್ರಿಗೆ ನಿಷ್ಠರಾಗಿರುವ ಶಾಸಕರನ್ನು ಇಲ್ಲಿನ ಪಂಚತಾರಾ ಹೋಟೆಲ್‍ಗೆ ಸ್ಥಳಾಂತರಿಸಲಾಗಿದೆ.
ಅವರು ಆಸ್ತಮಾದಿಂದ ಬಳಲುತ್ತಿದ್ದರು. ಇವರನ್ನು ಬೆಳಗ್ಗೆ ಹೋಟೆಲ್‍ನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಉಪ ಮುಖ್ಯ ಸಚೇತಕ ಮಹೇಂದ್ರ ಚೌಧರಿ ತಿಳಿಸಿದ್ದಾರೆ. ಸದ್ಯ ಇವರು ಸವಾಯ್ ಮಾನ್‍ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದು ವೇಳೆ ಇವರಿಗೆ ಕರೊನಾ ಸೋಂಕು ಎಂದೇನಾದರೂ ವರದಿಯಾದರೆ, ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿಸಿರುವ ಇತರ ಕೈ ಮುಖಂಡರಿಗೂ ಆತಂಕ ಎದುರಾಗಲಿದೆ.