

ಬೆಂಗಳೂರು: ಆನ್‌ಲೈನ್‌ನಲ್ಲಿ ಖರೀದಿ ಮಾಡಿರುವ ವಸ್ತುವೊಂದನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಒಬ್ಬನು ಯುವತಿಯನ್ನು ತಬ್ಬಿ ಲೈಂಗಿಕ ಕಿರುಕುಳ ನೀಡಿದ್ದಾನೆ!
ಈ ಘಟನೆ ನಡೆದಿರುವುದು ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ. ಈ ಸಂಬಂಧ 25 ವರ್ಷದ ಯುವತಿ ಡೆಲಿವರಿ ಬಾಯ್ ಅರುಣ್ ಕುಮಾರ್ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಯುವತಿ ಆನ್‌ಲೈನ್‌ನಲ್ಲಿ ವಸ್ತುವೊಂದನ್ನು ಖರೀದಿಸಿದ್ದರು. ವಸ್ತು ಮನೆಗೆ ಸಾಗಿಸಿದ ಬಳಿಕ ಹಣವನ್ನು (ಕ್ಯಾಷ್ ಆನ್ ಡೆಲಿವರಿ) ನೀಡಬೇಕಿತ್ತು. ಆನ್‌ಲೈನ್ ಮೂಲಕ ಹಣ ಪಾವತಿ ಮಾಡಲು ಯುವತಿ ಟ್ರೈ ಮಾಡುತ್ತಿದ್ದಾಗ ನೆಟ್‌ವರ್ಕ್ ಸಮಸ್ಯೆಯಿಂದ ಹಣ ಪಾವತಿ ಕಷ್ಟವಾಗಲಿಲ್ಲ.
ಅಷ್ಟರಲ್ಲಿಯೇ ಹೊಂಚುಹಾಕುತ್ತಿದ್ದ ಡೆಲಿವರಿ ಬಾಯ್ ನನಗೆ ತುರ್ತಾಗಿ ಬಾತ್‌ರೂಂಗೆ ಹೋಗಬೇಕಿದೆ, ನಿಮ್ಮ ಮನೆಯ ಶೌಚಗೃಹ ಬಳಸಬಹುದೇ ಕೇಳಿದ್ದಾನೆ. ಮಾನವೀಯತೆಯ ದೃಷ್ಟಿಯಿಂದ ಯುವತಿ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ವಿಚಿತ್ರವಾಗಿ ವರ್ತಿಸಿರುವ ಯುವಕ, ಅಲ್ಲಿರುವ ಸೋಫಾದ ಮೇಲೆ ಕುಳಿತುಕೊಂಡಿದ್ದಾನೆ. ಇದರಿಂದ ಸಿಟ್ಟುಗೊಂಡ ಯುವತಿ, ಹೀಗೆಲ್ಲಾ ಮಾಡಿದರೆ ತಾವು ಆರ್ಡರ್ ಕ್ಯಾನ್ಸಲ್ ಮಾಡುವುದಾಗಿ ಹೇಳಿದ್ದಾರೆ.
ನಂತರ ಹಾಗೆ ಮಾಡಲು ಸಾಧ್ಯವಿಲ್ಲ, ನೆಟ್‌ವರ್ಕ್ ಸಮಸ್ಯೆ ಇದ್ದರೆ ದುಡ್ಡು ಕೊಡಿ ಎಂದು ಯುವಕ ಕೇಳಿದ್ದಾನೆ. ದುಡ್ಡು ತರಲು ಯುವತಿ ಒಳಗೆ ಹೋದಾಗ ಹಿಂದಿನಿಂದ ಬಂದ ಯುವಕ ಯುವತಿಯನ್ನು ತಬ್ಬಿಕೊಂಡಿದ್ದಾನೆ. ತನ್ನತ್ತ ಸೆಳೆದುಕೊಳ್ಳಲು ಬಯಸಿದಾಗ ತಾನು ಅಲ್ಲಿಂದ ತಪ್ಪಿಸಿಕೊಂಡು ಹೊರಕ್ಕೆ ಓಡಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಯುವತಿ ತಿಳಿಸಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.