ಚಪಾತಿ ತಿಂದ ಕೆಲವೇ ಹೊತ್ತಿನಲ್ಲಿ ತಾಯಿ-ಮಗ ದುರಂತ ಸಾವು! ಆ ರಾತ್ರಿ ನಡೆದಿದ್ದೇನು? Chapatis

Chapatis
Published on

Chapatis : ಚಪಾತಿ ತಿಂದ ಸ್ವಲ್ಪ ಹೊತ್ತಿನಲ್ಲೇ ತಾಯಿ ಮತ್ತು ಮಗ ಅಸ್ವಸ್ಥರಾಗಿ, ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ದುರಂತ ಸಾವಿಗೀಡಾಗಿರುವ ಘಟನೆ ತೆಲಂಗಾಣ ರಾಜ್ಯದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ರುದ್ರಂಗಿ ಮಂಡಲದಲ್ಲಿ ಭಾನುವಾರ (ಏಪ್ರಿಲ್​ 06) ನಡೆದಿದೆ.

ಮೃತರನ್ನು ತಾಯಿ ಪುಷ್ಪಲತಾ (35) ಮತ್ತು ಮಗ ನಿಹಾನ್ (6) ಎಂದು ಗುರುತಿಸಲಾಗಿದೆ. ಶುಕ್ರವಾರ (ಏಪ್ರಿಲ್​ 04) ರಾತ್ರಿ ಚಪಾತಿ ತಿಂದ ಕೆಲವೇ ಹೊತ್ತಲ್ಲಿ ಅಮ್ಮ-ಮಗ ಅಸ್ವಸ್ಥರಾಗಿರುವುದನ್ನು ಕುಟುಂಬ ಸದಸ್ಯರು ಗಮನಿಸಿದರು. ಮಧ್ಯರಾತ್ರಿಯ ಸುಮಾರಿಗೆ ಇಬ್ಬರೂ ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿದ್ದರು. ಬಳಿಕ ಅವರನ್ನು ಕೊರುಟ್ಲಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಉತ್ತಮ ಚಿಕಿತ್ಸೆಗಾಗಿ ಕರೀಂನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಇದಾದ ಬಳಿಕ ವೈದ್ಯರು ತಕ್ಷಣವೇ ಚಿಕಿತ್ಸೆಯನ್ನು ಆರಂಭಿಸಿದರು. ಆದರೆ, ಅವರಿಬ್ಬರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ, ಚಿಕಿತ್ಸೆ ಪಡೆಯುತ್ತಿದ್ದಾಗಲೇ ತಾಯಿ ಪುಷ್ಪಲತಾ ಪ್ರಾಣ ಕಳೆದುಕೊಂಡರು. ಭಾನುವಾರ ರಾತ್ರಿ ಪುಷ್ಪಲತಾ ಸಾವಿಗೀಡಾದರೆ, ಮಾರನೇ ದಿನ ಅಂದರೆ ಸೋಮವಾರ (ಏಪ್ರಿಲ್​ 7) ನಿಹಾನ್ (6) ಕೂಡ ಕೊನೆಯುಸಿರೆಳೆದಿದ್ದಾರೆ.

ತಾಯಿ ಮತ್ತು ಮಗನ ಸಾವು ಕುಟುಂಬದಲ್ಲಿ ದುಃಖದ ಛಾಯೆ ಮೂಡಿಸಿದೆ. ತಾಯಿ ಮತ್ತು ಮಗನ ಸಾವಿಗೆ ವಿಷಾಹಾರವೇ ಕಾರಣವಾಗಿರಬಹುದು ಎಂಬ ಅನುಮಾನಗಳಿವೆ. ಹೀಗಾಗಿ ಪುಷ್ಪಲತಾ ಅವರ ಪಾಲಕರು ಆಕೆಯ ಗಂಡನ ಮನೆಯವರ ಮೇಲೆ ದಾಳಿ ಮಾಡಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

ತಾಯಿ ಮತ್ತು ಮಗನ ಸಾವಿಗೆ ಗಂಡನ ಮನೆಯವರೇ ಕಾರಣ. ಪುಷ್ಪಲತಾಗೆ ಆಕೆಯ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ, ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಶಮನಗೊಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net