

ಬೆಂಗಳೂರು: ಕರ್ನಾಟಕವನ್ನು ಸಮೃದ್ಧವಾಗಿಸಲು ಮತ್ತು ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಹಾಗೂ 'ಸಮರ್ಥ ಭಾರತ'ವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ ನೀಡಿದರು.
ರಾಜಭವನ, ಕರ್ನಾಟಕ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಜಭವನದ ಸಭಾಂಗಣದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಸ್ತ ಜನತೆಗೆ ಕನ್ನಡ ಭಾಷೆಯಲ್ಲಿ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿ, ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.
ದೀಪಾವಳಿಯ ಶುಭ ಸಂದರ್ಭದಲ್ಲಿ, ನವೆಂಬರ್ 1ರಂದು ಕರ್ನಾಟಕ ರಾಜ್ಯವು ಸೇರಿ ಆಂಧ್ರಪ್ರದೇಶ, ಛತ್ತೀಸ್‌ಗಢ, ಹರಿಯಾಣ, ಕೇರಳ, ಮಧ್ಯಪ್ರದೇಶ, ತಮಿಳುನಾಡು, ಪಂಜಾಬ್ ಮತ್ತು 5 ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್, ಚಂಡೀಗಢ, ದೆಹಲಿ, ಲಕ್ಷದ್ವೀಪಗಳ, ಪುದುಚೇರಿಯ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ. "ಏಕ್ ಭಾರತ್ ಶ್ರೇಷ್ಠ ಭಾರತ್" ಅಡಿಯಲ್ಲಿ ರಾಜಭವನದಲ್ಲಿ ಇದು ಆಚರಿಸಲಾಗುತ್ತದೆ. ಈ ರಾಜ್ಯಗಳ ಜನತೆಗೆ ಮತ್ತು ಕರ್ನಾಟಕದ ಜನತೆಗೆ ಶುಭಾಶಯಗಳನ್ನು ತಿಳಿಸುತ್ತೇನೆ ಎಂದರು.
ರಾಜ್ಯಗಳ ಸಂಸ್ಥಾಪನಾ ದಿನವು ರಾಜ್ಯದ ಹೆಮ್ಮೆ ಮತ್ತು ಏಕತೆಯ ಸಂಕೇತವಾಗಿದೆ. ನಮ್ಮ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಸಂಪ್ರದಾಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ನಮ್ಮ ರಾಜ್ಯದ ಸಾಧನೆಗಳನ್ನು ಗೌರವಿಸಲು ಇದು ಒಂದು ಅವಕಾಶ. ರಾಜಭವನಗಳಲ್ಲಿ "ಏಕ್ ಭಾರತ್ - ಶ್ರೇಷ್ಠ ಭಾರತ" ಸಿದ್ಧಾಂತದಿಂದ ಪ್ರೇರಿತವಾದ ಈ ಕಾರ್ಯಕ್ರಮಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೆಚ್ಚಿಸುವುದರ ಜತೆಗೆ ರಾಷ್ಟ್ರೀಯ ಏಕತೆ ಮತ್ತು ಪರಸ್ಪರ ತಿಳುವಳಿಕೆಯ ಭಾವನೆಯನ್ನು ಹೆಚ್ಚಿಸುತ್ತಿವೆ. ಈ ಯೋಜನೆಯನ್ನು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.
ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ. ಭಾರತದ ಪ್ರತಿಯೊಂದು ರಾಜ್ಯವು ಅದರ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಗುಣಲಕ್ಷಣಗಳಿಂದ ಅನನ್ಯವಾಗಿದೆ ಎಂಬುದು ತಿಳಿದಿದೆ. ಈ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಮತ್ತು ಆಚರಣೆಗಳ ಪರಿಕಲ್ಪನೆ ಮತ್ತು ಉದ್ದೇಶಗಳಲ್ಲಿ ಸಮಾನತೆ ಮತ್ತು ಸಾಮರಸ್ಯವು ಗೋಚರಿಸುತ್ತದೆ ಎಂದು ಹೇಳಿದರು.
ನಮ್ಮ ಕರ್ನಾಟಕ ರಾಜ್ಯವು ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮತ್ತು ಕಲಾ ಸಾಹಿತ್ಯ, ಸಮನ್ವಯ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ, ಈ ರಾಜ್ಯವು ತನ್ನ ನೈಸರ್ಗಿಕ ಸೌಂದರ್ಯ, ದೇವಾಲಯಗಳು ಮತ್ತು ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಕರ್ನಾಟಕ ರಾಜ್ಯವು ಸುವ್ಯವಸ್ಥಿತ ಮತ್ತು ಸಮೃದ್ಧ ರಾಜ್ಯವಾಗಿದೆ ಇಲ್ಲಿನ ವ್ಯಾಪಾರ ದೃಷ್ಟಿಕೋನ ಮತ್ತು ಸರ್ಕಾರ ಮತ್ತು ದಕ್ಷ ಆಡಳಿತವು ರಾಜ್ಯಕ್ಕೆ ವಿಶೇಷ ಗುರುತನ್ನು ನೀಡಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಗುರಿಯೊಂದಿಗೆ ಮೂಲ ಸೇವೆಗಳಿಗೆ ಪ್ರವೇಶ ಸೇರಿದಂತೆ ವಿವಿಧ ನವೀನ ಮತ್ತು ಅಂತರ್ಗತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಮ್ಮ ರಾಜ್ಯವು ಪ್ರವರ್ತಕವಾಗಿದೆ ಎಂದು ಶ್ಲಾಘಿಸಿದರು.
ದೇಶದ ಸ್ವಾತಂತ್ರ್ಯದ ನಂತರ ಸ್ಥಾಪಿತವಾದ ಈ ರಾಜ್ಯಗಳು ಮತ್ತು ಕರ್ನಾಟಕ ರಾಜ್ಯವು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಪ್ರಗತಿಯನ್ನು ಸಾಧಿಸಿದೆ ಮತ್ತು ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಗಣನೀಯ ಕೊಡುಗೆ ನೀಡಿದೆ. ನಮ್ಮ ದೇಶದ ಆರ್ಥಿಕತೆಯು ವಿಶ್ವದಲ್ಲಿ 5 ನೇ ಸ್ಥಾನದಲ್ಲಿದೆ. ಮುಂದಿನ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ತರುವ ಸಂಕಲ್ಪವಿದೆ. 2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣ ನಮ್ಮ ಜವಾಬ್ದಾರಿಯಾಗಿದೆ. ಈ ನಿರ್ಣಯಕ್ಕೆ ಬದ್ಧರಾಗುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡೋಣ ಎಂದು ಕರೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಜಭವನದ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್, 1956 ರಲ್ಲಿ ಕನ್ನಡ ನುಡಿ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಕರ್ನಾಟಕ ರಾಜ್ಯವನ್ನು ನಿರ್ಮಿಸಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ಕನ್ನಡ ನುಡಿ ಹಾಗೂ ಕರ್ನಾಟಕವು 2000 ವರ್ಷಗಳಿಗೂ ಮೀರಿದ ಇತಿಹಾಸವನ್ನು ಹೊಂದಿರುತ್ತದೆ. ಕರ್ನಾಟಕದಲ್ಲಿ ಹಲವು ಮತಧರ್ಮದ ಅನುಯಾಯಿಗಳೂ ಶತಮಾನಗಳಿಂದಲೂ ಇಲ್ಲಿ ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದಾರೆ. ಇದರಿಂದಲೇ ಕುವೆಂಪು ಅವರು ಕರ್ನಾಟಕವನ್ನು 'ಸರ್ವಜನಾಂಗದ ಶಾಂತಿಯ ತೋಟ' ಎಂದು ಸುಂದರವಾಗಿ ವರ್ಣಿಸಿದ್ದಾರೆ ಎಂದರು.
ಕನ್ನಡ ಕಂಪನ್ನು ಸಾರಿದ ಕಲಾವಿದರು:
ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಮೊದಲಿಗೆ ಚೈತನ್ಯ ಶಡಾಕ್ಷರಿ ಅವರ ವತಿಯಿಂದ "ಗಣೇಶ ಸ್ತುತಿ" ಭರತನಾಟ್ಯವನ್ನು ಪ್ರದರ್ಶಿಸಿದರು. ನಂತರ ಅರ್ಪಿತಾ, ಇಂಚರ ಪ್ರವೀಣ್ ಕುಮಾರ್ ತಂಡದಿಂದ 'ಬಾರಿಸು ಕನ್ನಡ ಡಿಂಡಿಮವ...', 'ಕರ್ನಾಟಕ ಬರಿ ನಾಡಲ್ಲ ನಮ್ಮ ಸಂಸ್ಕೃತಿಯ ಧಾತು...'ಹಾಗೂ 'ಜೋಗದ ಸಿರಿ ಬೆಳಕಿನಲ್ಲಿ...' ಗೀತ ಗಾಯನವನ್ನು ಪ್ರಸ್ತುತಿ ಪಡಿಸಿದರು.
ನಂತರ ಟಿ.ಎಸ್ ಲಕ್ಷಣ ಮತ್ತು ತಂಡದವರು ಜಾನಪದ ಸಮೂಹ ನೃತ್ಯವನ್ನು ಪ್ರದರ್ಶಿಸಿದರು. ಸೋಹಿನಿ ಬೋಸ್ ತಂಡದವರು 'ಸೋಜುಗಾದ ಸೂಜಿ ಮಲ್ಲಿಗೆ'... ಗೀತೆಯನ್ನು ಹಾಡಿದರು. ಸರಸ್ವತಿ ವಾದ್ಯ ವೃಂದ ವತಿಯಂದ ವಾದ್ಯ ಸಂಗೀತ ನೆರೆದಿದ್ದವರ ಮನ ಸೂರೆಗೊಂಡಿತು.
ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರ " ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..." ಹಾಡನ್ನು ಸುಮಧುರವಾಗಿ ಹಾಡಿದ ರಾಜಭವನದ ಪೊಲೀಸ್ ಪೇದೆ ಲಕ್ಷಣ್ ನಾಯಕ ಗಮನಸೆಳೆದರು.
ನಂತರ ಪ್ರಸಾದ್ ಪಿ ಅವರ ತಂಡದಿಂದ ಸಂಪ್ರದಾಯದ ಡೊಳ್ಳು ಕುಣಿತ ಎಲ್ಲರನ್ನು ರಂಜಿಸಿತು. ನಂತರ ದೀಪ ಮತ್ತು ರಾಜಭವನದ ಸಿಬ್ಬಂದಿಯವರ ಹಾಡಿದ ' ಹಚ್ಚೇವು ಕನ್ನಡದ ದೀಪ...' ಸಂಗೀತ ಕೇಳುಗರ ಕಿವಿಗೆ ಇಂಪು ನೀಡಿತು.