

Raj Thackeray: ಮಹಾರಾಷ್ಟ್ರದ ರಾಯಗಢದಲ್ಲಿ ನಿನ್ನೆ ಸಂಜೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆ ಮಾಡಿದ್ದ ಉದ್ರಿಕ್ತ ಭಾಷಣ ಕೇಳಿದ ಕಾರ್ಯಕರ್ತರು, ತಡರಾತ್ರಿ ಮುಂಬೈ ಬಳಿಯ ಪನ್ವೇಲ್ನಲ್ಲಿರುವ ಡ್ಯಾನ್ಸ್ಬಾರ್ಗೆ ನುಗ್ಗಿ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ಪನ್ವೇಲ್ನಲ್ಲಿರುವ ನೈಟ್ ರೈಡರ್ಸ್ ಬಾರ್ಗೆ ಕೋಲು ಹಿಡಿದುಕೊಂಡು ನುಗ್ಗಿ ಪಿಠೋಪಕರಣಗಳನ್ನು ಮತ್ತು ಮದ್ಯದ ಬಾಟಲಿಗಳನ್ನು ಧ್ವಂಸಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕಿಸಾನ್ ಮಜ್ದೂರ್ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ರಾಜ್ ಠಾಕ್ರೆ, "ರಾಯಗಡ ಜಿಲ್ಲೆಯಲ್ಲಿ ಅತಿ ಹೆಚ್ಚು ಡ್ಯಾನ್ಸ್ ಬಾರ್ಗಳಿವೆ. ರಾಯಗಢ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರ ರಾಜಧಾನಿಯಾಗಿತ್ತು. ಇಂತಹ ಪ್ರದೇಶದಲ್ಲಿ ಡ್ಯಾನ್ಸ್ ಬಾರ್ಗಳು ಕಾರ್ಯನಿರ್ವಹಿಸಬಾರದು. ಅವುಗಳನ್ನು ಮುಚ್ಚಲಾಗಿತ್ತು, ಅಲ್ಲವೇ? ಇಷ್ಟೊಂದು ಡ್ಯಾನ್ಸ್ ಬಾರ್ಗಳಿವೆ, ಅವುಗಳ ಮಾಲೀಕರು ಯಾರು? ಕೇವಲ ಮರಾಠಿ ಜನರು ಮಾತ್ರವೇ? ಹಾಗಾದರೆ ನಿಮಗೆ ಡ್ಯಾನ್ಸ್ ಬಾರ್ಗಳ ಅಭ್ಯಾಸ ಹುಟ್ಟಿಸಿ ಅದರಲ್ಲಿ ಸಿಕ್ಕಿ ಹಾಕಿಸಲಾಗುತ್ತದೆ" ಎಂದು ವಾಗ್ದಾಳಿ ನಡೆಸಿದ್ದರು.
ಭಾಷಣವನ್ನು ಕೇಳಿ ಕೆರಳಿದ ಎಂಎನ್ಎಸ್ ಕಾರ್ಯಕರ್ತರು ಪನ್ವೇಲ್ನ ತಡರಾತ್ರಿ ನುಗ್ಗಿ ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಂಎನ್ಎಸ್ ನಾಯಕ ಸಂದೀಪ್ ದೇಶಪಾಂಡೆ, ಇದು ಸಾಂಕೇತಿಕ ಪ್ರತಿಭಟನೆ, ಡ್ಯಾನ್ಸ್ ಬಾರ್ಗಳು ಕಾನೂನು ಬಾಹಿರ, ತಕ್ಷಣವೇ ಸರ್ಕಾರ ಇವುಗಳನ್ನು ಬಂದ್ ಮಾಡಿಸಬೇಕು ಎಂದು ಹೇಳಿದ್ದಾರೆ.
ರಾಜ್ ಠಾಕ್ರೆ ಬೆಂಬಲಿಗರ ವಿರುದ್ಧ ಈ ಹಿಂದೆ ಮರಾಠಿಯೇತರ ಜನರ ಮರಾಠಿ ಮಾತನಾಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದ ಆರೋಪ ಸಂಬಂಧ ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್)