ವಿವಾದದ ಸುಳಿಯಿಂದ ಹೊರಬರದ ನಟನಿಗೆ ಮತ್ತೊಂದು ಅಗ್ನಿ ಪರೀಕ್ಷೆ! ಇಲ್ಲಾದರೂ ಸಿಗಲಿದ್ಯಾ ಗೆಲುವು?

ವಿಜಯವಾಣಿ - 2024-08-16T113740.785
Published on

ತೆಲಂಗಾಣ: ಕಳೆದ ಒಂದು ತಿಂಗಳಿಂದ ಟಾಲಿವುಡ್​ನಲ್ಲಿ ದೊಡ್ಡ ವಿವಾದವೊಂದು ಹರಿದಾಡುತ್ತಿದ್ದು, ಇದು ತೆಲುಗು ಚಿತ್ರರಂಗದವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ ಬಗೆದಿರುವ ಯುವನಟ ರಾಜ್ ತರುಣ್​, ವಂಚನೆ ಮಾಡಿ, ಸಹ ನಟಿ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ದೂರು ನೀಡಿದ್ದಳು. ಸದ್ಯ ಈ ವಿವಾದ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ದಿನಕ್ಕೊಂದು ಟ್ವಿಸ್ಟ್​, ಕ್ಷಣಕ್ಕೊಂದು ಟ್ವಿಸ್ಟ್​ ಎದುರಾಗುತ್ತಿವೆ. ವಿವಾದಗಳಿಂದ ಸದ್ಯ ತಲೆಮರಿಸಿಕೊಂಡಿರುವ ನಟ ರಾಜ್​ ಅಭಿನಯದ ಎರಡು ಸಿನಿಮಾಗಳು ಕೂಡ ಇದೀಗ ಫ್ಲಾಪ್​ ಸಾಲಿಗೆ ಸೇರ್ಪಡೆಯಾಗಿದ್ದು, ಈಗ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಸದ್ಯ ತನ್ನ ವಿರುದ್ಧ ಸರಣಿ ಆರೋಪಗಳು ಕೇಳಿಬಂದಿದ್ದರು ಇದ್ಯಾವುದಕ್ಕೂ ಸ್ಪಷ್ಟನೆ ನೀಡದೆ ಮೌನ ತಾಳಿರುವ ರಾಜ್ ತರುಣ್​, ಲಾವಣ್ಯ ಹೂಡಿದ್ದ ಕೇಸ್​ಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಹೈಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಮಾಧ್ಯಮದವರ ಕಣ್ಣಿಗೆ ಬೀಳದ ನಟ ರಾಜ್​ ನಟಿಸಿದ್ದ ಎರಡು ಸಿನಿಮಾಗಳು ವಿವಾದದ ಮಧ್ಯೆಯೇ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮವಿರಲಿ ಸಾಮಾನ್ಯ ಪ್ರತಿಕ್ರಿಯೆಯನ್ನೂ ಪಡೆಯದೆ ಚಿತ್ರಮಂದಿರದಿಂದ ಹೊರಗುಳಿಯಿತು. ನಟನ ವಿವಾದವನ್ನೇ ಪ್ರಮೋಷನ್​ ಅಸ್ತ್ರವಾಗಿಸಿಕೊಂಡ ನಿರ್ಮಾಪಕರು, ಇದೀಗ ಹೀನಾಯ ಸೋಲನ್ನು ಕಂಡು ಕಂಗಾಲಾಗಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ತನ್ನದೇ ಸುದ್ದಿ ಹರಿದಾಡುತ್ತಿರುವ ಕಾರಣ ಹೊರಬರಲಾಗದೆ, ಒಳಗಿರಲಾಗದೆ ಪರದಾಡುತ್ತಿರುವ ರಾಜ್ ತರುಣ್, ಈ ವಿವಾದಗಳಿಂದ ಭಾರೀ ಮುಖಭಂಗ ಅನುಭವಿಸುತ್ತಿದ್ದಾರೆ. ಇದೀಗ ನಟನಿಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದ್ದು, ಎರಡು ಸಿನಿಮಾಗಳ ಸತತ ಸೋಲಿನಿಂದ ಭಾರೀ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ತಾನು ಅಭಿನಯದ ಮತ್ತೊಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಮಾರುತಿ ನಿರ್ಮಾಣದ 'ಭಲೇ ಉನ್ನಾದೆ' ಚಿತ್ರದ ರಿಲೀಸ್​ ದಿನಾಂಕ ಈಗ ಫಿಕ್ಸ್ ಆಗಿದೆ.

ಸದ್ಯ ಹಾಡುಗಳಿಂದಲೇ ಮೊದಲ ಹಂತದಲ್ಲಿ ಹಿಟ್ ಆಗಿರುವ 'ಭಲೇ ಉನ್ನಾದೆ' ಚಿತ್ರವು ಇದೇ ಸೆಪ್ಟಂಬರ್​ 07ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಚಿತ್ರದಲ್ಲಿ ನಟಿ ಮನೀಶಾ ಕಂದ್ಕೂರ್ ಮತ್ತು ರಾಜ್ ತರುಣ್​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶಿವಸಾಯಿ ವರ್ಧನ್ ನಿರ್ದೇಶಿಸಿರುವ ಈ ಚಿತ್ರವು ಗೌರಿ-ಗಣೇಶ ಹಬ್ಬದ ದಿನದಂದೇ ರಿಲೀಸ್ ಆಗುತ್ತಿರುವುದು ಹಲವರಲ್ಲಿ ಕುತೂಹಲ ಮೂಡಿಸಿದೆ. ಚಿತ್ರರಂಗದಲ್ಲಿ ಗೆಲುವು ನೋಡಬೇಕಿರುವ ಯು ನಟ, ವಿವಾದದಿಂದಲೇ ಸತತ ಸೋಲುಗಳನ್ನು ಕಂಡಿದ್ದಾರೆ. ಈ ಮಧ್ಯೆಯೇ ಮತ್ತೊಂದು ಚಿತ್ರ ಬಿಡುಗಡೆಗೊಳ್ಳುತ್ತಿದ್ದು, ಇಲ್ಲಾದರೂ ನಟನಿಗೆ ಗೆಲುವು ಸಿಗಲಿದೆಯಾ? ಆ ಮೂಲಕ ಕೊಂಚ ರಿಲೀಫ್ ಪಡೆಯಬಹುದಾ? ಎಂಬ ಪ್ರಶ್ನೆ ಮೂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net