

ಆಂಧ್ರಪ್ರದೇಶ: 11 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಪ್ರೇಯಸಿ ಲಾವಣ್ಯ ಆರೋಪ ಹೊರಿಸಿದ್ದು, ತನಗೆ ಅನ್ಯಾಯವಾಗಿದೆ ಎಂದು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದರು. ಸದ್ಯ ಇವರಿಬ್ಬರ ವಿಚಾರ ಟಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದು, ಚಿತ್ರರಂಗದವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸದ್ಯ ಲಾವಣ್ಯ-ರಾಜ್ ತರುಣ್ ಕೇಸ್ನಲ್ಲಿ ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಿದ್ದು, ಇದು ಯಾವ ಹಂತ ತಲುಪಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಲಾವಣ್ಯ, ತನಗೆ ನಟ ರಾಜ್ ತರುಣ್ ಮೋಸ ಮಾಡಿದ್ದಾನೆ. ನಟಿ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ. ನನಗೆ ದ್ರೋಹ ಬಗೆದಿರುವ ರಾಜ್, ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ. ಅವನಿಂದ ಬಹಳ ಅನ್ಯಾಯವಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವೆ ಎಂದು ಲಾವಣ್ಯ ನರಸಿಂಗಿ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರಿನ ಮೇರೆಗೆ ಇದೀಗ ಪೊಲೀಸರು ನಟ ರಾಜ್ ತರುಣ್ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಸದ್ಯ ವಿವಾದದ ಅಲೆಯಲ್ಲಿ ಸಿಲುಕಿರುವ ನಟ ರಾಜ್ ತರುಣ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಮುಂದಿನ ದಿನಗಳಲ್ಲಿ ಜೈಲು ಕಂಬಿ ಎಣಿಸುವ ಸಾಧ್ಯತೆಗಳು ಹೆಚ್ಚಿವೆ. ಪ್ರಸ್ತುತ ನರಸಿಂಗಿ ಪೊಲೀಸರು ಲಾವಣ್ಯ ನೀಡಿರುವ ದೂರಿನ ಮೇರೆಗೆ ರಾಜ್ ತರುಣ್ರನ್ನು ಎ1 ಆರೋಪಿ ಮತ್ತು ನಟಿ ಮಾಳ್ವಿ ಮಲ್ಹೋತ್ರಾರನ್ನು ಎ2 ಆರೋಪಿ ಎಂದು ಪ್ರಕರಣದಲ್ಲಿ ದಾಖಲಿಸಿದ್ದಾರೆ. ತರುಣ್ ಕೇಸ್ನಲ್ಲಿ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಹೊರಬರುತ್ತಿದ್ದು, ಆರೋಪಿ ಸ್ಥಾನದಲ್ಲಿರುವ ರಾಜ್ ತರುಣ್ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ನಟನನ್ನು ತಮ್ಮ ಚಿತ್ರದಲ್ಲಿ ಹಾಕಿಕೊಂಡು ಸಿನಿಮಾ ಮಾಡಿದ್ದ ಚಿತ್ರ ನಿರ್ಮಾಪಕರು ಅದ್ಯಾಕೋ ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವಂತೆ ಕಂಡುಬಂದಿದೆ.
ಈ ಹಿಂದೆ ಎರಡು ಸಿನಿಮಾಗಳಲ್ಲಿ ನಟಿಸಿದ್ದ ರಾಜ್ ತರುಣ್ ಚಿತ್ರದ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಿದ್ದರು. ಆದ್ರೆ, ಬಹುದಿನಗಳಿಂದ ರಿಲೀಸ್ ದಿನಾಂಕದ ಸಮಸ್ಯೆಯಲ್ಲಿ ತೊಡಗಿದ್ದ ನಿರ್ಮಾಪಕರು ಅಧಿಕೃತವಾಗಿ ರಿಲೀಸ್ ಡೇಟ್ ನಿಗದಿಪಡಿಸಿರಲಿಲ್ಲ. ವಿವಾದಕ್ಕೂ ಮುನ್ನವೇ ಬಿಡುಗಡೆ ಸಮಸ್ಯೆಯಲ್ಲಿ ಮುಳುಗಿದ್ದ ನಿರ್ಮಾಪಕರು, ಇದೀಗ ಏಕಾಏಕಿ ಚಿತ್ರಗಳನ್ನು ತೆರೆಗೆ ತರುವ ನಿರ್ಧಾರ ಕೈಗೊಂಡಿದ್ದಾರೆ. "ತಿರಗಬ್ಯಾಡರ ಸಾಮಿ" ಇದೇ ಆಗಸ್ಟ್ 2ರಂದು ಚಿತ್ರಮಂದಿರಗಳಲ್ಲಿ ತೆರೆಕಂಡರೆ, ಅದಕ್ಕೂ ಒಂದು ವಾರ ಮುಂಚಿತವಾಗಿ ಅಂದರೆ ಇದೇ ಜುಲೈ 26ಕ್ಕೆ “ಪುರುಷೋತ್ತಮುಡು” ರಿಲೀಸ್ ಆಗಲಿದೆ.
ಇದೊಂದು ರೀತಿ ಕ್ಲಿಯರೆನ್ಸ್ ಸೇಲ್ ಆಗಿದ್ದು, ನಿರ್ಮಾಪಕರು ರಾಜ್ ತರುಣ್ ವಿವಾದವನ್ನು ಅಸ್ತ್ರವಾಗಿಸಿಕೊಂಡಂತೆ ಭಾಸವಾಗುತ್ತಿದೆ. ರಾಜ್ ತರುಣ್ ವಿವಾದ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ಎರಡು ಸಿನಿಮಾಗಳನ್ನು ಒಂದು ವಾರದ ನಂತರ ಮತ್ತೊಂದು ವಾರದಲ್ಲಿ ಬಿಡುಗಡೆಗೊಳಿಸುವ ಮೂಲಕ ಪ್ರಚಾರ ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ಚಿತ್ರದ ನಿರ್ಮಾಪಕರು ನಂಬಿದ್ದಾರೆ ಎನಿಸುತ್ತದೆ. ಹಾಗಾಗಿ ಈ ವಿವಾದದ ಮಧ್ಯೆಯೇ ಸಿನಿಮಾದ ರಿಲೀಸ್ ಡೇಟ್ ಕೂಡ ಅಧಿಕೃತವಾಗಿ ಘೋಷಿಸಿದ್ದಾರೆ,(ಏಜೆನ್ಸೀಸ್).