

ಶೃಂಗೇರಿ: ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ತಾಲೂಕು ರೈತ ಸಂಘದ ಸದಸ್ಯರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಗೌರಮ್ಮಗೆ ಸೋಮವಾರ ಮನವಿ ಸಲ್ಲಿಸಿದರು.
ಅಧ್ಯಕ್ಷ ಚಂದ್ರಶೇಖರ್ ಕಾನುವಳ್ಳಿ ಮಾತನಾಡಿ, ಅತಿವೃಷ್ಟಿ ಕಾರಣದಿಂದ ಸಮಯಕ್ಕೆ ಸರಿಯಾಗಿ ಸಾಲದ ಕಂತು ಪಾವತಿಸಲು ಸಾಧ್ಯವಾಗುತ್ತಿಲ್ಲ. ಇಂತಹ ರೈತರಿಗೆ ಕಂತು ಪಾವತಿಸಲು ಬ್ಯಾಂಕ್‌ಗಳು ಒತ್ತಡ ಹಾಕುತ್ತಿವೆ. ಪತ್ರಿಕಾ ಪ್ರಕಟಣೆ ಮುಖೇನ ಜಮೀನಿನ ಹರಾಜು ಪ್ರಕಟಣೆ ಹಾಕಿವೆ. ಇದರಿಂದ ರೈತರು ಮಾನಸಿಕವಾಗಿ ನೋವು ಅನುಭವಿಸುತ್ತಿದ್ದಾರೆ ಎಂದರು.
ರೈತರಿಗೆ ವಸೂಲಾತಿ ಬಗ್ಗೆ ಪದೇ ಪದೇ ಬ್ಯಾಂಕ್ ಕರೆ ಮಾಡುವುದನ್ನು ನಿಲ್ಲಿಸಬೇಕು. ಅತಿವೃಷ್ಟಿಯಿಂದ ತೋಟದ ಬೆಳೆಗಳು ನಾಶದ ಹಂತದಲ್ಲಿದೆ. ಕೆಲವು ರೈತರ ಜಮೀನನ್ನು ಸುಸ್ತಿ ಸಾಲಕ್ಕಾಗಿ ಹರಾಜು ಮಾಡುವ ಪ್ರಕ್ರಿಯೆಗಾಗಿ ಈಗಾಗಲೇ ಬ್ಯಾಂಕ್ ಪತ್ರಿಕಾ ಪ್ರಕಟಣೆ ನೀಡಿದೆ. ಮಾನವೀಯತೆ ನೆಲೆಗಟ್ಟಿನಲ್ಲಿ ಈ ಪ್ರಕ್ರಿಯೆ ಹಿಂಪಡೆಯಬೇಕು ಎಂದರು. ಸಂಘದ ಪದಾಧಿಕಾರಿಗಳಾದ ಪೂರ್ಣೇಶ್, ಶ್ರೀನಿವಾಸ್,ನಾಗೇಶ್, ಸುಬ್ರಹ್ಮಣ್ಯ ಭಟ್, ಚಂದ್ರಪ್ಪ, ಜಗದೀಶ್ ಇದ್ದರು.