

ರಾಣೆಬೆನ್ನೂರ: ಈ ಬಾರಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಚಂದ್ರಶೇಖರ ಬಣ) ತಾಲೂಕು ಅಧ್ಯಕ್ಷ ಬಸವರಾಜ ಕಡೂರ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಕೇವಲ ಉದ್ದಿಮೆಗಳನ್ನು ಬೆಳೆಸಿದೆ. ರಸ್ತೆ ಕಾಮಗಾರಿ, ರೈಲು ಯೋಜನೆ ನೀಡಿದರೆ ಸಾಲದು, ರೈತರ ಉದ್ದಾರಕ್ಕಾಗಿ ಮಹತ್ತರವಾದ ಯೋಜನೆಗಳನ್ನು ನೀಡಬೇಕಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಲಭ್ಯಗಳಿಲ್ಲ. ರೈತರಿಗೆ ಅಗತ್ಯವಾಗಿರುವ ರಸಗೊಬ್ಬರ, ಕೃಷಿ ಯಂತ್ರಗಳು ದರ ದುಪ್ಪಟ್ಟಾಗಿದೆ. ಆದರೆ, ಹಿಂದೆ ರೈತ ಬೆಳೆದ ಬೆಳೆಗೆ ಎಷ್ಟು ದರವಿತ್ತೊ ಅಷ್ಟೆ ದರ ಇಂದಿಗೂ ಇದೆ. ಹೀಗಾದರೆ ರೈತರ ಬದುಕುವುದು ಕಷ್ಟವಾಗುವ ಜತೆಗೆ ಸಾಲದ ಸುಳಿಯಲ್ಲಿ ಜೀವನ ನಡೆಸಬೇಕಾಗುತ್ತದೆ.
ಹೀಗಾಗಿ ಚುನಾವಣೆಯಲ್ಲಿ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್ ಘೋಷಣೆ ಮಾಡಿದ್ದು, ನಮ್ಮ ಸಂಘಟನೆಯ ವತಿಯಿಂದ ಬೆಂಬಲ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಪದಾಧಿಕಾರಿಗಳ ಸಭೆ ಮಾಡಲಾಗಿದ್ದು, ಎಲ್ಲರೂ ಬೆಂಬಲ ನೀಡಲು ವಿನಂತಿ ಮಾಡಲಾಗಿದೆ ಎಂದರು.
ರೈತ ಮುಖಂಡರಾದ ಹನುಮಂತಪ್ಪ ಕಬ್ಬಾರ, ಚನ್ನಪ್ಪ ಅಡಿವೇರ, ನಿಂಗಪ್ಪ ಸತ್ಯಪ್ಪನವರ, ಹನುಮಂತಪ್ಪ ಅಡಿವೇರ, ಜಟ್ಟೆಪ್ಪ ಕನ್ನಪ್ಪಳವರ, ಹನುಮಂತಪ್ಪ ಪರಸಣ್ಣನವರ, ಕರಬಸಪ್ಪ ಕಡೇನಾಯಕನಹಳ್ಳಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.