ಒತ್ತುವರಿ ಜಮೀನು ವಶಕ್ಕೆ ಪಡೆಯಿರಿ, ರೈತಸಂಘದಿಂದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ

23 mbl ph 04
Published on

ಮುಳಬಾಗಿಲು: ತಾಲೂಕಿನ ಆಂಧ್ರ ಗಡಿಭಾಗದ ಹೆಬ್ಬಣಿ ಗ್ರಾಪಂ ವ್ಯಾಪ್ತಿಯ ಎಚ್.ಬೈಯಪ್ಪನಹಳ್ಳಿ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವುದರ ಜತೆಗೆ ಸರ್ವೇ ಮಾಡಿಸಿ ಸರ್ಕಾರಿ ಜಮೀನನ್ನು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿ ರೈತಸಂಘದಿಂದ ತಾಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಜಯ್‌ರಾಮ್‌ಗೆ ಮನವಿ ಸಲ್ಲಿಸಿದರು.

ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ತಾಲೂಕಿನ ಭೂ ಕಬಳಿಕೆದಾರರಿಗೆ ಭಯವಿಲ್ಲದಾಗಿದೆ. ಸರ್ಕಾರಿ ಜಮೀನುಗಳನ್ನು ರಾಜಾರೋಷವಾಗಿ ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಹೋಟೆಲ್‌ಗಳು, ಲೇಔಟ್‌ಗಳು ಮಾಡುತ್ತಿದ್ದರೂ ಸಂಬಂಧಪಟ್ಟ ಕಂದಾಯ ಸರ್ವೇ ನೊಂದಣಿ ಇಲಾಖೆ ಅಧಿಕಾರಿಗಳು ದಂಧೆಕೋರರ ಜತೆ ಶಾಮೀಲಾಗಿ ಕೋಟಿ ಕೋಟಿ ಬೆಲೆ ಬಾಳುವ ಜಮೀನುಗಳು ಶ್ರೀಮಂತರ ಪಾಲಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿ ಹೆಬ್ಬಣಿ ಗ್ರಾಪಂ ವ್ಯಾಪ್ತಿಯ ಖಾಸಗಿ ರೆಸಾರ್ಟ್ ಮಾಲೀಕರು ಭೂಪರಿವರ್ತನೆ ಮಾಡದೆ ಸರ್ಕಾರಿ ಗೋಮಾಳ ಜಮೀನನ್ನು ವಶಪಡಿಸಿಕೊಂಡು ರಾಜಾರೋಷವಾಗಿ ಹೋಟೆಲ್, ಬಾರ್ ನಡೆಸುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಅಧ್ಯಕ್ಷ ಫಾರೂಖ್ ಪಾಷಾ ಮಾತನಾಡಿ, ಸರ್ಕಾರಿ ಜಮೀನು ಒತ್ತುವರಿಯನ್ನು ಸರ್ವೇ ಮಾಡಿಸಿ ಸರ್ಕಾರದ ವಶಕ್ಕೆ ಪಡೆಯಬೇಕು. ಇಲ್ಲವಾದರೆ ಮದ್ಯ ಬಾಟಲ್‌ಗಳ ಸಮೇತ ತಾಲೂಕು ಕಚೇರಿ ಮುಂದೆ ಹೋರಾಟ ಮಾಡುವ ಮೂಲಕ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಸಿರುಸೇನೆ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ವಿಜಯ್‌ಪಾಲ್, ದೇವರಾಜ್, ಅಣ್ಣಿಹಳ್ಳಿ ನಾಗರಾಜ್, ವೇಣು, ನವೀನ್, ವೆಂಕಟರಾಮರೆಡ್ಡಿ, ಸಾಗರ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕೋಲಾರ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಚಾಂದ್‌ಪಾಷಾ, ಜಮೀರ್ ಪಾಷಾ, ಜಾವೀದ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net