

ಭಾರತದಲ್ಲಿ ದೈನಿಕ ಕನಿಷ್ಠ ವೇತನ ಪ್ರಮಾಣ ಹೆಚ್ಚಿಸಬೇಕು, ಈಗಿನ ಬೆಲೆಯೇರಿಕೆಯ ಮಾನದಂಡಕ್ಕೆ ಅದು ಅನುಗುಣವಾಗಿಲ್ಲ ಎಂಬುದು ಬಹುಸಮಯದಿಂದ ಕೇಳಿಬರುತ್ತಿರುವ ಕೂಗು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ, ಭಾರತದಲ್ಲಿ ಈಗಿರುವ ಕನಿಷ್ಠ ವೇತನವನ್ನು ಅಂತಾರಾಷ್ಟ್ರೀಯ ಕಾರ್ವಿುಕ ಸಂಸ್ಥೆ (ಐಎಲ್ಒ) ಪರಿಣಿತರ ಸಲಹೆ ಪಡೆದು ವೈಜ್ಞಾನಿಕವಾಗಿ ಪರಿಷ್ಕರಿಸಲು ಮತ್ತು ಕನಿಷ್ಠ ವೇತನದ ಬದಲು ಜೀವನ ನಿರ್ವಹಣೆಗೆ ತಗಲುವ ಖರ್ಚನ್ನು ಆಧರಿಸಿ (ಲಿವಿಂಗ್ ವೇಜ್) ವೇತನದ ರೂಪುರೇಷೆ ರಚಿಸಲು ಮುಂದಾಗಿರುವುದು ಸ್ವಾಗತಾರ್ಹ. 2025ರಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ. ಪ್ರಸಕ್ತ ಭಾರತದಲ್ಲಿ ದೈನಿಕ ಕನಿಷ್ಠ ವೇತನ 176 ರೂ. (2.1 ಡಾಲರ್) ಇದೆ.
ಇದು ಬಾಂಗ್ಲಾದೇಶ (3.1 ಡಾಲರ್), ವಿಯೆಟ್ನಾಂ (6.5 ಡಾಲರ್), ಚೀನಾ (11.9 ಡಾಲರ್) ದೇಶಗಳಿಗಿಂತ ತೀರಾ ಕಡಿಮೆ. ಭಾರತದಲ್ಲಿ ಸರಾಸರಿ 50 ಕೋಟಿ ಜನರು ದೈನಂದಿನ ಕೂಲಿಯ ಮೇಲೆ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ಪೈಕಿ ಶೇಕಡ 90ರಷ್ಟು ಜನರು ಅಸಂಘಟಿತ ವಲಯಕ್ಕೆ ಸೇರಿದವರು. ಇನ್ನು ಮುಂದೆ, ಆಯಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ವಿುಕರಿಗೆ ಕನಿಷ್ಠ ವೇತನದ ಬದಲು ಜೀವನ ನಿರ್ವಹಣೆ ಆಧಾರದಲ್ಲಿ ವೇತನ ನಿಗದಿ ಪಡಿಸಲು ಚಿಂತನೆ ನಡೆಸಿರುವುದರಿಂದ, ಅದರಿಂದ ಖಂಡಿತವಾಗಿಯೂ ಅಸಂಘಟಿತ ವಲಯದ ಕಾರ್ವಿುಕರಿಗೆ ಲಾಭವಾಗಲಿದೆ ಮತ್ತು ಅವರ ಜೀವನಸ್ತರ ಎತ್ತರಿಸಲು ಅನುಕೂಲವಾಗಲಿದೆ ಎಂಬುದು ತಜ್ಞರ ಅಂಬೋಣ. ಭಾರತದಲ್ಲಿ ದೈನಿಕ ಕನಿಷ್ಠ ವೇತನ (176 ರೂ.) 2017ರಿಂದಲೂ ಬದಲಾಗಿಲ್ಲ ಎಂಬುದು ಗಮನಾರ್ಹ. ಆದರೆ, ಕಳೆದ ಏಳು ವರ್ಷಗಳಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆಗಳಲ್ಲಿ ಗಣನೀಯ ಪ್ರಮಾಣದ ಏರಿಕೆ ಆಗಿದೆ. ಆಹಾರಧಾನ್ಯ, ತರಕಾರಿ, ಹಣ್ಣು ಸೇರಿದಂತೆ ಎಲ್ಲ ವಸ್ತುಗಳ ದರಗಳು ಹೆಚ್ಚಿವೆ. ಹೀಗಿರುವಾಗ ಕಾರ್ವಿುಕರು ಈ ಏಳು ವರ್ಷಗಳ ಹಳೆಯ ಮಾನದಂಡದ ಕನಿಷ್ಠ ವೇತನದಲ್ಲಿ ಜೀವನ ನಿರ್ವಹಿಸಲು ಹೇಗೆ ಸಾಧ್ಯ?
ಪ್ರಸಕ್ತ ವಿವಿಧ ರಂಗಗಳಲ್ಲಿ ಕಾರ್ವಿುಕರ ಉತ್ಪಾದಕತೆ ಮತ್ತು ಕೌಶಲದ ಆಧಾರದಲ್ಲಿ ವೇತನ ನೀಡಲಾಗುತ್ತಿದೆ. ಆದರೆ, ಈ ವೇತನ ಯಾವುದಕ್ಕೂ ಸಾಕಾಗುತ್ತಿಲ್ಲ. ಹಾಗಾಗಿಯೇ, ಜೀವನ ನಿರ್ವಹಣೆ ವೆಚ್ಚದ ಆಧಾರದಲ್ಲಿ ದೈನಿಕ ಕನಿಷ್ಠ ವೇತನ ವ್ಯವಸ್ಥೆಯನ್ನು ಮರುರೂಪಿಸುವ ಬೇಡಿಕೆಗೆ ಕೊನೆಗೂ ಸರ್ಕಾರ ಸ್ಪಂದಿಸಿರುವುದು ಉತ್ತಮ ಬೆಳವಣಿಗೆ. ಅಸಂಘಟಿತ ವಲಯದ ಕಾರ್ವಿುಕರ ಹಿತಕ್ಕಾಗಿ ಅನೇಕ ಯೋಜನೆಗಳೇನೋ ಘೋಷಣೆಯಾಗುತ್ತವೆ. ಆದರೆ, ಅವು ಜಾರಿಯ ಹಂತದಲ್ಲಿ ಎಡವಿ, ನಿಜವಾದ ಫಲಾನುಭವಿಗಳಿಗೆ ತಲುಪುವುದೇ ಇಲ್ಲ ಎಂಬುದು ಕಟುವಾಸ್ತವ. ಹಾಗಾಗಿ, ಕನಿಷ್ಠ ವೇತನವನ್ನು ಹೆಚ್ಚಿಸುವ ಮತ್ತು ಹೊಸ ವ್ಯವಸ್ಥೆಯನ್ನು ರೂಪಿಸುವ ಸಂದರ್ಭದಲ್ಲಾದರೂ, ಯಾವುದೇ ಅಪಸವ್ಯ ಸಂಭವಿಸದಂತೆ ಕಾಳಜಿ ವಹಿಸಬೇಕು ಮತ್ತು ಕಾರ್ವಿುಕರು ಘನತೆಯ ಬದುಕು ಕಟ್ಟಿಕೊಳ್ಳುವಂತಾಗಲು, ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗುವಂತಾಗಲು ಸರ್ಕಾರ ಸೂಕ್ತ ಬೆಂಬಲ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಕಾರ್ವಿುಕರ ಜೀವನಸ್ಥಿತಿ ಸುಧಾರಿಸಿದರೆ ಅದರಿಂದ ಆರ್ಥಿಕತೆಗೂ ಪೂರಕ.