

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಹಸಲರು ಸಮುದಾಯದ ಮುಖಂಡರ ಕೋರಿಕೆ ಮೇರೆಗೆ ಕೆಲ ಬಡ ಹಸಲರು ಕುಟುಂಬಕ್ಕೆ ವಿವಿಧ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಬಿರ್ಸಾ ಮುಂಡಾ ಸೇನೆ ರಾಜ್ಯಾಧ್ಯಕ್ಷ ನವೀನ್ ಸಾದ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆದಿವಾಸಿ ಹಸಲರ ಸಮುದಾಯಕ್ಕೆ ಭಾನುವಾರ ಮಳೆಗಾಲದ ಸುರಕ್ಷತಾ ಕಿಟ್ ವಿತರಿಸಿ ಮಾತನಾಡಿದರು.
ಈ ಹಿಂದೆ ಹಾಸನ ಮತ್ತು ಕೊಡಗು ಜಿಲ್ಲೆಗೆ ಮಾತ್ರ ವಿತರಿಸಲು ಮೀಸಲಿಟ್ಟಿದ್ದ ಕಿಟ್‌ಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮುಖಂಡರ ಕೋರಿಕೆ ಮೇರೆಗೆ ವಿತರಿಸಲಾಗಿದೆ. ಆದಿವಾಸಿ ಕುಟುಂಬಕ್ಕೆ ಮಳೆಗಾಲದ ಸುರಕ್ಷತೆಗಾಗಿ ಟಾರ್ಪಲ್, ಸೋಪು, ಸೊಳ್ಳೆ ಪರದೆ ಮತ್ತಿತರ ಸಾಮಗ್ರಿ ಸೇರಿ 3,500 ರೂ. ಮೌಲ್ಯದ ಕಿಟ್‌ಗಳನ್ನು ವಿತರಿಸಲಾಗಿದೆ. ಹಿಂದುಳಿದ ಹಸಲರ ಸಮುದಾಯಕ್ಕೆ ಇನ್ನು ಮುಂದೆಯೂ ಸರ್ಕಾರ ಮತ್ತು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಬೇರೆ ಬೇರೆ ಸೌಲಭ್ಯ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾ ಹಸಲರು ಸಂಘಟನೆ ಅಧ್ಯಕ್ಷ ಶಂಕರ್ ಸಾಲಿಯಾನ್ ಮಾತನಾಡಿ, ನಮ್ಮ ಸಮುದಾಯ ಕಾಡಂಚಿನಲ್ಲಿ ವಾಸಿಸುತ್ತಿದ್ದು ಹಸಲರ ಜೀವನಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಸರ್ಕಾರ ಕಲ್ಪಿಸಬೇಕಿದೆ ಎಂದು ತಿಳಿಸಿದರು. ಹಸಲರು ಸಂಘಟನೆ ಅಧ್ಯಕ್ಷ ಗೋಪಾಲ್, ಸದಸ್ಯರಾದ ಬಿ.ಎಸ್.ಶ್ರೀಕಾಂತ್, ಬಿ.ಡಿ.ಸಂಜೀವ, ಚಂದು ಜಾಗರ್, ಸತೀಶ್ ಜಕ್ಕಣಕ್ಕಿ ಮತ್ತಿತರರಿದ್ದರು.