

ನುಗ್ಗೇಹಳ್ಳಿ: ಬಾಗೂರು ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಹಳ್ಳ ಕೊಳ್ಳಗಳಲ್ಲಿ ನೀರು ಹರಿಯುತ್ತಿದೆ. ಕೃಷಿ ಜಮೀನುಗಳು ಜಲಾವೃತಗೊಂಡಿದ್ದು, ಗ್ರಾಮಗಳಿಗೆ ಹಾಗೂ ಕೃಷಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ನೀರಿನಿಂದ ಮುಚ್ಚಿ ಕೊಂಡಿವೆ.
ನುಗ್ಗೇಹಳ್ಳಿ ಮಾರ್ಗದಿಂದ ತಗಡೂರು, ಲಕ್ಕರಸನಹಳ್ಳಿ, ಭುವನಹಳ್ಳಿ ವಡ್ಡರಹಟ್ಟಿ, ರಂಗಾಪುರಕ್ಕೆ ತೆರಳುವ ಭುವನಹಳ್ಳಿ ಗ್ರಾಮದ ಮಳೆಹಳ್ಳದ ರಸ್ತೆಯು ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಗುಂಡಿ ಬಿದ್ದಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ಇದೇ ರಸ್ತೆಯಲ್ಲಿ ಪ್ರತಿದಿನ ಸಂಚರಿಸುವ ಸಾರ್ವಜನಿಕರು ಓಡಾಡಲು ಹರಸಾಹಸ ಪಡಬೇಕಾಗಿದೆ.
ಅಲ್ಲದೆ ಹೋಬಳಿಯ ಮುನಿಯಮ್ಮನ ಪಾಳ್ಯದ ತಿಮ್ಮಮ್ಮ, ಭುವನಹಳ್ಳಿ ವಡ್ಡರಟ್ಟಿಯ ರತ್ನಮ್ಮ, ರಾಜಾ ಭೋವಿ ಅವರ ಮನೆಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಜತೆಗೆ ತಗಡೂರು ಜಂಬೂರು ವೆಂಕಣ್ಣನಕೆರೆ, ಹೆಗ್ಗಡಿಗೆರೆ ಕೆರೆ ಸೇರಿದಂತೆ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಮತ್ತಷ್ಟು ಕೆರೆಗಳಿಗೆ ಹಳ್ಳದ ಮೂಲಕ ನೀರು ಹರಿಯುತ್ತಿದ್ದು, ಕೋಡಿ ಬೀಳುವ ಹಂತದಲ್ಲಿವೆ. ಅಲ್ಲದೆ ತಗ್ಗು ಪ್ರದೇಶಗಳಲ್ಲಿ ಜೋಗುಲು ನೀರು ಹರಿಯುತ್ತಿದೆ. ಇದರಿಂದ ಭೂಮಿ ಶೀತಮಯವಾಗಿ ಮುಸುಕಿನ ಜೋಳ, ರಾಗಿ, ಶುಂಠಿ, ಬಾಳೆ ತೆಂಗು ಇತರ ಬೆಳೆಗಳು ಸಂಕಷ್ಟದ ಸ್ಥಿತಿಯಲ್ಲಿವೆ. ಹೀಗೆ ಮಳೆ ಮುಂದುವರಿದರೆ ಯಾವುದೇ ಬೆಳೆಗಳು ರೈತನ ಕೈ ಸೇರುವುದು ಅನುಮಾನವಾಗಿದೆ ಎಂದು ಮುನಿಯಮ್ಮನ ಪಾಳ್ಯದ ಶುಂಠಿ ಬೆಳೆಗಾರರಾದ ಪ್ರಭಾಕರ್ ವಿಜಯ್, ಆತಂಕ ವ್ಯಕ್ತಪಡಿಸಿದರು.