ಬಾಳೆಹೊನ್ನೂರಲ್ಲಿ ಮುಂದುವರಿದ ಪುನರ್ವಸು ಮಳೆ ಅಬ್ಬರ

ಬಾಳೆಹೊನ್ನೂರಲ್ಲಿ ಮಳೆ ಅಬ್ಬರಕ್ಕೆ ಅಪಾಯದಮಟ್ಟದಲ್ಲಿ ಹರಿಯುತ್ತಿರುವ ಭದ್ರಾನದಿ
ಬಾಳೆಹೊನ್ನೂರಲ್ಲಿ ಮಳೆ ಅಬ್ಬರಕ್ಕೆ ಅಪಾಯದಮಟ್ಟದಲ್ಲಿ ಹರಿಯುತ್ತಿರುವ ಭದ್ರಾನದಿ
Published on
ಬಾಳೆಹೊನ್ನೂರು: ಬಾಳೆಹೊನ್ನೂರು ಹಾಗೂ ಖಾಂಡ್ಯ ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಬುಧವಾರವೂ ತನ್ನ ಅಬ್ಬರ ಮುಂದುವರೆಸಿದೆ.
ಮಂಗಳವಾರ ಆರಂಭಗೊಂಡ ಪುನರ್ವಸು ಮಳೆ ಒಂದೇ ಸಮನಾಗಿ ಸುರಿಯುತ್ತಿದೆ. ಮಳೆ ಜತೆಗೆ ಗಾಳಿಯೂ ಜೋರಾಗಿ ಬೀಸುತ್ತಿದೆ. ಭದ್ರಾನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ನದಿ ದಡದಲ್ಲಿರುವ ತೋಟ, ಗದ್ದೆಗಳಿಗೆ ನದಿಯ ಪ್ರವಾಹದ ನೀರು ಸ್ವಲ್ಪ ಮಟ್ಟದಲ್ಲಿ ನುಗ್ಗಿದೆ. ಖಾಂಡ್ಯದ ಇತಿಹಾಸ ಪ್ರಸಿದ್ಧ ಮಾರ್ಕಾಂಡೇಶ್ವರ ದೇವಸ್ಥಾನದ ಸಮೀಪದಲ್ಲೂ ಭದ್ರಾನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಸಣ್ಣಪುಟ್ಟ ಹಳ್ಳಗಳಲ್ಲಿ ನೀರಿನ ಹರಿವು ಏರಿಕೆಯಾಗಿದೆ.
ಗಾಳಿ ಹೆಚ್ಚಾಗಿರುವುದರಿಂದ ಸಣ್ಣಪುಟ್ಟ ಮರಗಳು ತೋಟಗಳು, ಮುಖ್ಯರಸ್ತೆಗಳ ಬದಿಗಳಲ್ಲಿ ಬೀಳುತ್ತಿವೆ. ಹಲವು ಕಡೆಗಳಲ್ಲಿ ವಿದ್ಯುತ್‌ಲೈನ್ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಸಮಸ್ಯೆಯಿಂದ ಕೆಲವು ಕಡೆಗಳಲ್ಲಿ ಕುಡಿಯವ ನೀರಿನ ಸಮಸ್ಯೆ ಉದ್ಭವಿಸಿದೆ. ಗಾಳಿಯ ಕಾರಣ ಸ್ಥಳೀಯ ಹಲವು ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ರಜೆ ಘೋಷಿಸಲಾಗಿದೆ. ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿದೆ.
ಮಲೆನಾಡು ಭಾಗದಲ್ಲಿ ಮೀನು ಶಿಕಾರಿ ಜೋರಾಗಿದ್ದು, ರಾತ್ರಿ ವೇಳೆಯಲ್ಲಿ ಟಾರ್ಚ್ ಬೆಳಕಿನಲ್ಲಿ ಮೀನು ಹಿಡಿಯುವರ ಸಂಖ್ಯೆ ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ಮೀನು ಹಿಡಿಯುವ ಸಾಧನವಾದ ಕೂಳೆಯನ್ನು ಹಳ್ಳಗಳಿಗೆ ಹಾಕಿದ್ದು, ಏಡಿ, ಮೀನಿನ ಶಿಕಾರಿ ಭರ್ಜರಿಯಾಗಿದೆ. ಗಾಳಿ, ಮಳೆ ಹೆಚ್ಚಾಗಿದ್ದರೂ ಸಹ ಯಾವುದೇ ಆಸ್ತಿಪಾಸ್ತಿ, ಜೀವ ಹಾನಿಯಾಗಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ನದಿಪಾತ್ರದ ಜನರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗರೂಕ ಕ್ರಮಗಳನ್ನು ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net