

ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಅಬ್ಬರ ಸ್ವಲ್ಪ ತಗ್ಗಿದ್ದು, ಪ್ರವಾಹದ ಭೀತಿ ಕೊಂಚ ಕಡಿಮೆ ಆಗಿರುವುದರಿಂದ ಜಲಾವೃತ ಪ್ರದೇಶಗಳಲ್ಲಿ ಸಿಲುಕಿರುವ ಜನ-ಜಾನುವಾರುಗಳ ರಕ್ಷಣೆ ಯಶಸ್ವಿಯಾಗಿದೆ. ಮತ್ತೊಂದೆಡೆ ಕೊಡಗಿನಲ್ಲಿ ಭೂಕುಸಿತಕ್ಕೆ ಸಿಲುಕಿ ನಾಪತ್ತೆ ಆಗಿರುವವರ ಪತ್ತೆ ಕಾರ್ಯಾಚರಣೆ ಹಾಗೂ ಕೆಲವೆಡೆ ನಡುಗಡ್ಡೆಗಳಲ್ಲಿ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಈ ಮಧ್ಯೆ ಅಲ್ಲಲ್ಲಿ ಮಳೆ ಆರ್ಭಟದಿಂದ ನೆರೆ ಭೀತಿ ಹೆಚ್ಚುತ್ತಿದ್ದು, ತಗ್ಗುಪ್ರದೇಶ ಜಲಾವೃತ, ಸೇತುವೆ ಮುಳುಗಡೆ, ಸಂಪರ್ಕ ಕಡಿತದಂಥ ಅವಾಂತರಗಳೂ ಸಂಭವಿಸಿದ್ದರಿಂದ ಆತಂಕ ತಗ್ಗಿಲ್ಲ.
ಕೊಡಗು ಜಿಲ್ಲೆಯಲ್ಲಿ ಒಂದು ವಾರದಿಂದ ಅಬ್ಬರಿಸಿದ್ದ ಮಳೆ ಭಾನುವಾರ ಕ್ಷೀಣಿಸಿದ್ದು, ಪ್ರವಾಹ ಇಳಿಮುಖವಾಗಿದೆ. ಭಾಗಮಂಡಲ-ಮಡಿಕೇರಿ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ಮಳೆಯಿಂದ ಸಂತ್ರಸ್ತರಾಗಿರುವ ಒಟ್ಟು 578 ಜನರನ್ನು ಎನ್ಡಿಆರ್ಎಫ್, ಕ್ಷಿಪ್ರ ಕಾರ್ಯಪಡೆ ತಂಡ ಹಾಗೂ ಪೊಲೀಸ್ ರಕ್ಷಣಾ ಪಡೆ ರಕ್ಷಿಸಿ ಜಿಲ್ಲೆಯ 9 ಕಡೆ ತೆರೆದಿರá-ವ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಿದೆ. ಜಿಲ್ಲೆಯ 52 ಗ್ರಾಮಗಳನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಜಿಲ್ಲಾಡಳಿತ ಘೊಷಿಸಿದೆ. ಮೈಸೂರು ಜಿಲ್ಲೆಯ ಕಬಿನಿ, ತಾರಕ ಮತ್ತು ನುಗು ಜಲಾಶಯ ವ್ಯಾಪ್ತಿಯಲ್ಲಿ ಭಾನುವಾರ ವರ್ಷಧಾರೆ ತಗ್ಗಿದ್ದು, ಪ್ರವಾಹದ ಭೀತಿಯಲ್ಲಿದ್ದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.
ಕಪಿಲಾ ನದಿ ಪ್ರವಾಹ ತಗ್ಗಿದ್ದು, ಮೈಸೂರು-ನಂಜನಗೂಡು ಹೆದ್ದಾರಿ ಭಾನುವಾರ ಸಂಜೆ ಸಂಚಾರಕ್ಕೆ ಮುಕ್ತವಾಯಿತು. ಕಪಿಲೆಯ ಆರ್ಭಟಕ್ಕೆ ಸಿಲುಕಿದ್ದ ನಂಜನಗೂಡು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರವಾಹ ಇಳಿಯುತ್ತಿದೆ.
ಕೊಡಗಿನಲ್ಲಿ ಕಾರ್ಯಾಚರಣೆ ಮುಂದುವರಿಕೆ: ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾದವರ ಪತ್ತೆಗಾಗಿ ಭಾನುವಾರವೂ ಕಾರ್ಯಾಚರಣೆ ಮುಂದುವರಿಯಿತು. ಎನ್ಡಿಆರ್ಎಫ್ ತಂಡದವರು ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಅವರ ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದರು.
ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಣ್ಣು ಕೆಲಸ ಮಾಡುವ 200 ಜನರಿಂದ ಪರಿಣಾಮಕಾರಿ ಶೋಧ ಕಾರ್ಯಾಚರಣೆ ನಡೆಸುವಂತೆ ಕಂದಾಯ ಸಚಿವರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಸೂಚನೆ ನೀಡಿದರು. ಜಿಲ್ಲಾಡಳಿತದ ಕಾರ್ಯಾಚರಣೆ ಬಗ್ಗೆ ಟೀಕೆ- ಟಿಪ್ಪಣಿ ಮಾಡುವುದಿಲ್ಲ. ಪರಿಹಾರ ಕಾರ್ಯಕ್ಕೆ ಬಿಜೆಪಿಗೆ ಪ್ರೋತ್ಸಾಹ ನೀಡುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದರು. ಪ್ರತಿಪಕ್ಷ ಟೀಕೆ ರಾಜಕಾರಣ ಮಾಡುತ್ತಿದೆ. ಒಂದರ ಮೇಲೊಂದು ಕಷ್ಟ ಎದುರಾಗಿದೆ. ಆದರೆ ಕಾಂಗ್ರೆಸ್ಸಿನಂತೆ ಜನರಿಂದ ದೂರವಾಗಿರುವುದಿಲ್ಲ. ಜನರ ಹತ್ತಿರ ಹೋಗಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನಿಸುವುದಾಗಿ ಸಚಿವ ಸೋಮಣ್ಣ ತಿಳಿಸಿದರು.
ಜಲಾಶಯಗಳೆಲ್ಲ ಭರ್ತಿ! : ಕಾವೇರಿ ಕಣಿವೆ ವ್ಯಾಪ್ತಿಯಲ್ಲಿನ ಕೆಆರ್ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳು ಆಗಸ್ಟ್ ಮೊದಲ ವಾರದಲ್ಲಿಯೇ ಭರ್ತಿಯಾಗಿರುವುದು ದಾಖಲೆಯಾಗಿದೆ. ಒಂದು ವಾರದ ಅಂತರದಲ್ಲಿ ನಾಲ್ಕು ಜಲಾಶಯಗಳು ಭರ್ತಿಯಾಗಿರುವುದು ವಿಶೇಷ. ಕೆಆರ್ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 70 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರನ್ನು ಹೊರಬಿಟ್ಟ ಪರಿಣಾಮ, ಒಂದೂವರೆ ದಿನದ ಅವಧಿಯಲ್ಲಿ ತಮಿಳುನಾಡಿಗೆ ಅಂದಾಜು 8.5 ಟಿಎಂಸಿ ನೀರು ಹೋಗಿದೆ. ಬಳ್ಳಾರಿಯ ತುಂಗಭದ್ರಾ ಜಲಾಶಯಕ್ಕೆ ಒಂದು ವಾರದಿಂದ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಭರ್ತಿಯಾಗಲು 11.25 ಅಡಿ ಬಾಕಿ ಉಳಿದಿದೆ.
ಮಲೆನಾಡಲ್ಲಿ ಇಳಿದ ಪ್ರವಾಹ: ಮಲೆನಾಡಿನ ಘಟ್ಟ ಪ್ರದೇಶ ಹಾಗೂ ಶರಾವತಿ ಕಣಿವೆ ಹೊರತುಪಡಿಸಿದರೆ ಆಶ್ಲೇಷಾ ಮಳೆ ಅಬ್ಬರ ಕಡಿಮೆ ಆಗಿದೆ. ನದಿಗಳ ನೆರೆ ಭೀತಿಯೂ ನಿವಾರಣೆಯಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೊಷಣೆ ಮಾಡಿದ್ದರಿಂದ ನದಿ-ಹಳ್ಳ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲೂ ವರ್ಷಧಾರೆ ತಗ್ಗಿದೆ. ಮೂರ್ನಾಲ್ಕು ದಿನಗಳಿಂದ ರೌದ್ರಾವತಾರ ತಾಳಿದ್ದ ಭದ್ರೆಯು ಈಗ ಶಾಂತಳಾಗಿದ್ದಾಳೆ. ಮೂಡಿಗೆರೆ, ಕಳಸ ತಾಲೂಕಿನಲ್ಲಿ ಸಾಧಾರಣ ಮಳೆಯಾಗುತ್ತಿದೆ. ಶೃಂಗೇರಿಯಲ್ಲಿ ತುಂಗಾ ನದಿ ಪ್ರವಾಹ ಇಳಿಮುಖವಾಗಿದೆ. ಚಾರ್ವಡಿ ಘಾಟಿಯಲ್ಲಿ ಕುಸಿದ ಮಣ್ಣನ್ನು ತೆರವು ಮಾಡಲಾಗುತ್ತಿದೆ.
ದಡ ಸೇರಿತು ವಾನರ ಸೇನೆ: ಮೂರು ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದ ವಾನರ ಸೇನೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ‘ಆಪರೇಷನ್ ಮುಷ್ಯ’ ಮೂಲಕ ಒಟ್ಟು 55 ಮುಷ್ಯಗಳನ್ನು ಭಾನುವಾರ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ತುಂಗಭದ್ರಾ ನದಿ ನೀರಿನ ಮಟ್ಟ ಏರಿದ್ದರಿಂದ ಹರಿಹರ ತಾಲೂಕಿನ ರಾಜನಹಳ್ಳಿ ಬಳಿ ಹೊಳೆ ಮಧ್ಯೆ ಇರುವ ಮರವೊಂದರಲ್ಲಿ ಗುರುವಾರ ಮಧ್ಯಾಹ್ನ 55 ಮುಷ್ಯಗಳು ಸಿಕ್ಕಿ ಹಾಕಿಕೊಂಡು, ಆಹಾರವಿಲ್ಲದೆ ಬಳಲುತ್ತಿದ್ದವು.
ನದಿಗೆ ಜಿಗಿದ ಯುವಕರು!: ಬಂಟ್ವಾಳ: ತುಂಬಿ ಹರಿಯುತ್ತಿರುವ ನೇತ್ರಾವತಿ ನದಿಗೆ ಕೆಲವು ಯುವಕರು ಪಾಣೆಮಂಗಳೂರು ಹಳೇ ಸೇತುವೆ ಮೇಲಿಂದ ಹಾರುತ್ತಿರುವ ದೃಶ್ಯ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಹದ ನೀರಿಗೆ ಒಬ್ಬೊಬ್ಬರಾಗಿಯೇ ಧುಮುಕುವ ಯುವಕರ ಈ ಸಾಹಸ ಪ್ರದರ್ಶನ ನೋಡುಗರಲ್ಲಿ ಆತಂಕ ಹುಟ್ಟಿಸುತ್ತಿದೆ.
ಸ